ಹುಬ್ಬಳ್ಳಿ(ಮಾ.06): ದುಬೈಯಿಂದ ಆಗಮಿಸಿದ್ದ ನಾಲ್ವರು ಕೊರೋನಾ ವೈರಸ್ ಭೀತಿಯಿಂದ ಇಲ್ಲಿನ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದರೆ ಇವರ್ಯಾರಿಗೂ ಆ ರೋಗದ ಲಕ್ಷಣಗಳು ಕಾಣಿಸಿಲ್ಲ. ಹೀಗಾಗಿ ಭಯಪಡುವ ಅಗತ್ಯವಿಲ್ಲ ಎಂದು ಕಿಮ್ಸ್ ವೈದ್ಯಾಧಿಕಾರಿಗಳು ಈ ನಾಲ್ವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ. 

ಕಳೆದ ಹದಿನೈದು ದಿನಗಳ ಹಿಂದೆ ದುಬೈದಿಂದ ಹುಬ್ಬಳ್ಳಿ ಮೂಲದ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಆಗಮಿಸಿದ್ದರು. ಇವರೆಲ್ಲರೂ ಪ್ರಯಾಣಿಸಿದ್ದ ವಿಮಾನದಲ್ಲೇ ಹೈದ್ರಾಬಾದ್ ಮೂಲದ ಕೊರೋನಾ ಪೀಡಿತ ವ್ಯಕ್ತಿ ಪ್ರಯಾಣಿಸಿದ್ದ. ಇವರೆಲ್ಲರೂ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದರು. ಈ ನಡುವೆ ಇದೀಗ ಸ್ವಲ್ಪ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಹಿನ್ನೆಲೆ ನಾಲ್ವರು ಬುಧವಾರ ಸಂಜೆ ವೇಳೆ ಕಿಮ್ಸ್‌ಗೆ ದಾಖಲಾಗಿದ್ದರು. ತಕ್ಷಣವೇ ಕೊರೋನಾ ಸಂಬಂಧ ತೆರೆಯಲಾದ ವಿಶೇಷ ನಿಗಾ ಘಟಕದಲ್ಲಿ ಇವರನ್ನು ತಪಾಸಣೆ ಮಾಡಲಾಯಿತು. ಕೊರೋನಾದ ಯಾವುದೇ ಲಕ್ಷಣಗಳು ಈ ನಾಲ್ವರಿಗೂ ಕಂಡುಬಂದಿಲ್ಲ. ಈ ಕಾರಣದಿಂದ ಬುಧವಾರ ರಾತ್ರಿಯೇ ಇವರೆಲ್ಲರನ್ನು ಡಿಸ್ಚಾರ್ಜ್ ಮಾಡಿದ್ದಾರೆ. ಈ ಕುರಿತು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಕೊರೋನಾ ಕುರಿತಂತೆ ನಾಲ್ವರನ್ನು ತಪಾಸಣೆಗೆ ಒಳಪಡಿಸಿದ್ದೇವೆ. ಆದರೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.