ತುಮಕೂರು, (ಜುಲೈ.21):  ಗ್ರಾಮೀಣ ಭಾಗಕ್ಕೂ ಸೋಂಕಿನ ವ್ಯಾಪ್ತಿ ವಿಸ್ತರಿಸಿಕೊಂಡಿದ್ದು, ಇದಕ್ಕೆಲ್ಲ ಕಾರಣ ಬೆಂಗಳೂರಿನಿಂದ ಬಂದವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಇಂದು (ಮಂಗಳವಾರ) ತುಮಕೂರು ಎಸ್ಪಿ ಕಚೇರಿಯಲ್ಲಿ ಪಿಪಿಇ ಕಿಟ್ ವಿತರಣೆ ವೇಳೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ  ಮಾಧುಸ್ವಾಮಿ, ಕೊರೋನಾ ನಿಯಂತ್ರಣ ಕಾರ್ಯದಲ್ಲಿ ನಮಗೆ ತುಂಬಾ ತಾಪತ್ರಯ ಆಗಿರೋದು ಬೆಂಗಳೂರಿನಿಂದ ಬಂದವರು. ಅವರನ್ನು ಹಳ್ಳಿಗಳಿಗೆ ಬಿಟ್ಟುಕೊಳ್ಳದಿದ್ದರೆ, ಹಳ್ಳಿಗಳಲ್ಲಿ ಕೊರೋನಾ ಕೇಸ್ ಇರುತ್ತಿರಲಿಲ್ಲ ಎಂದರು. 

ಬುಧವಾರದಿಂದ ಬೆಂಗ್ಳೂರು ಲಾಕ್‌ಡೌನ್ ರಿಲೀಫ್; ಏನಿರತ್ತೆ..? ಏನಿರಲ್ಲ..? 

ಬೆಂಗಳೂರಿಂದ ಬಂದವರ ಬಗ್ಗೆ ನಮಗೆ ಮಾಹಿತಿ ನೀಡಲಿಲ್ಲ. ಪಾಸಿಟಿವ್ ಬಂದಾಗ ಊರಿಗೆ ಊರೇ ಸೀಲ್​ಡೌನ್ ಮಾಡಬೇಕಾಯಿತು. ಬೆಂಗಳೂರಿನಿಂದ ಬಂದು ಮಾಹಿತಿ ನೀಡದಿದ್ದರೆ ಅಂತಹವರ ಮೇಲೆ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. 

ಕಂಟೈನ್ಮೆಂಟ್ ಝೋನ್​ಗಳನ್ನು ತುಂಬಾ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಈ ಪ್ರದೇಶಗಳಲ್ಲಿ ಜನರು ಸುಮ್ಮನೆ ಹೊರಗೆ ಬರುವಂತಿಲ್ಲ. ಇನ್ನು ಬೆಂಗಳೂರಿಂದ ಬಂದವರು ಮೊದಲ ಎರಡು ದಿನ ಯಾರ ಸಂಪರ್ಕಕ್ಕೆ ಬರಬಾರದು ಎಂದು ಹೇಳಿದರು.

ಊರಿನ ಹೊರಗೆ ಅಥವಾ ಬೇರೆಲ್ಲಾದ್ರೂ ಇರಬೇಕು‌. ಅವರಿಗೆ ಕೊರೋನಾ ಟೆಸ್ಟ್ ಮಾಡಿ 48 ಗಂಟೆ ಒಳಗೆ ರಿಸಲ್ಟ್ ಕೊಡುತ್ತಿದ್ದೇವೆ. ವರದಿ ನೆಗೆಟಿವ್ ಬಂದ್ರೆ ಮನೆಗೆ ಹೋಗಲಿ, ಪಾಸಿಟಿವ್ ಬಂದ್ರೆ ಆಸ್ಪತ್ರೆಗೆ ದಾಖಲಿಸುತ್ತೇವೆ. ಈ ವೇಳೆ ಅತಿಯಾಗಿ ವರ್ತಿಸಿದರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.