ಬಳ್ಳಾರಿ(ಏ.16): ಕೊರೋನಾ ವೈರಸ್‌ ಪ್ರಕರಣ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬರುತ್ತಿದೆ. ನಿತ್ಯ ಸಾವಿರಾರು ಜನರ ಆರೋಗ್ಯ ತಪಾಸಣೆ ನಡೆಯುತ್ತಿದ್ದು, ಹೊಸ ಪ್ರಕರಣಗಳು ದಾಖಲಾಗುತ್ತಿಲ್ಲ. ಇದು ಜಿಲ್ಲೆಯ ಜನರಿಗೆ ಒಂದಷ್ಟು ನೆಮ್ಮದಿ ಮೂಡಿಸಿದೆ. ಇದೀಗ ಕೊರೋನಾ ವೈರಸ್‌ನಿಂದ ಭೀತಿಗೊಂಡವರಿಗೆ ನಿರಾಳ ತರುವ ಸುದ್ದಿಯೊಂದಿದೆ. ಜಿಲ್ಲೆಯ ಹಿರಿಯ ವೈದ್ಯರು ಹೇಳುವ ಪ್ರಕಾರ ಈಗಿರುವ 6 ಪಾಸಿಟಿವ್‌ ಶೀಘ್ರದಲ್ಲಿಯೇ 3ಕ್ಕೆ ಕುಸಿಯುವ ಸಾಧ್ಯತೆ ಇದೆ.

ಕೊರೋನಾ ಪಾಸಿಟಿವ್‌ ಇದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಆರೋಗ್ಯ ಸ್ಥಿರವಾಗಿದೆ. ಎಲ್ಲರೂ ಚೈತನ್ಯವಾಗಿದ್ದಾರೆ. ಇವರಿಗೆ ನಿರಂತರ ವೈದ್ಯಕೀಯ ತಪಾಸಣೆ ನಡೆಯುತ್ತಿದ್ದು, ಯಾವ ಬದಲಾವಣೆಯಾಗಿಲ್ಲ. ಹೀಗಾಗಿ, ಆದಷ್ಟು ಬೇಗ ಇವರು ನೆಗೆಟಿವ್‌ ವಲಯಕ್ಕೆ ಬರುವ ಸಾಧ್ಯತೆ ಇದೆ ಎಂಬ ವಿಶ್ವಾಸದಲ್ಲಿದೆ ವೈದ್ಯಕೀಯ ತಂಡ.
ಎರಡು ಬಾರಿ ನೆಗೆಟಿವ್‌ ಬರಬೇಕು

ಲಾಕ್‌ಡೌನ್‌ ಎಫೆಕ್ಟ್‌: ಬಾರ್‌ಗೆ ಕನ್ನ, 2 ಲಕ್ಷ ಮೌಲ್ಯದ ಮದ್ಯ ಕದ್ದ ಕಳ್ಳರು

ಕೊರೋನಾ ವೈರಸ್‌ ಸೋಂಕು ತಗುಲಿರುವ ಆರು ಜನರಿಗೆ 14 ದಿನಗಳ ಬಳಿಕ ಮತ್ತೊಂದು ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತದೆ. ಇದಾದ ಎರಡು ದಿನಗಳ ಬಳಿಕ ಮತ್ತೆ ಪರೀಕ್ಷೆ ನಡೆಯುತ್ತದೆ. ಈ ಎರಡು ವೈದ್ಯಕೀಯ ವರದಿಯಲ್ಲೂ ನೆಗೆಟೀವ್‌ ಎಂದು ಬಂದರೆ ಅವರ ಆರೋಗ್ಯ ಸ್ಥಿತಿಗತಿ ನೋಡಿಕೊಂಡು ಮನೆಗೆ ಕಳಿಸಿಕೊಡಲಾಗುವುದು. ಒಂದು ವೇಳೆ ಪಾಸಿಟೀವ್‌ ಎಂದು ಬಂದರೆ ಅಲ್ಲಿಯೇ ಉಳಿಯಲಿದ್ದು, ಚಿಕಿತ್ಸೆ ಮುಂದುವರಿಸಲಾಗುತ್ತದೆ. ಪಾಸಿಟೀವ್‌ ಬಂದವರಿಗೆ ನಿರಂತರ ವೈದ್ಯಕೀಯ ತಪಾಸಣೆ ಇರುತ್ತದೆ. ಅಗತ್ಯ ಔಷಧಿ ನೀಡಿ ವೈರಲ್‌ ಲೋಡ್‌ ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಲೇ ಇರುತ್ತದೆ.

16 ಜ್ವರ ತಪಾಸಣಾ ಕೇಂದ್ರಗಳು

ಕೊರೋನಾ ವೈರಸ್‌ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಈಗಾಗಲೇ 16 ಜ್ವರ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಜ್ವರ ಬಂದ ಕೂಡಲೇ ಕೇಂದ್ರಗಳಿಗೆ ಆಗಮಿಸಿ ತಪಾಸಣೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವೈರಸ್‌ನ ಲಕ್ಷಣಗಳು ಕಂಡು ಬರುತ್ತಿದ್ದಂತೆಯೇ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ಕಳಿಸಿಕೊಡಲಾಗುತ್ತಿದೆ. ನಿತ್ಯ ನೂರಾರು ಜನರು ಕೇಂದ್ರಗಳಿಗೆ ಆಗಮಿಸಿ, ಜ್ವರ ತಪಾಸಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಏತನ್ಮಧ್ಯೆ ಕೊರೋನಾ ವೈರಸ್‌ ಭೀತಿ ಸಾರ್ವಜನಿಕರಲ್ಲಿ ಕಂಡು ಬಂದಿದೆ. ಕೆಮ್ಮು-ಜ್ವರ ಬರುತ್ತಿದ್ದಂತೆಯೇ ಆತಂಕಗೊಳ್ಳುತ್ತಿದ್ದು, ಕೂಡಲೇ ತಪಾಸಣೆಗೆ ತೆರಳುತ್ತಿದ್ದಾರೆ. ನಗರ ಪ್ರದೇಶದ ನಿವಾಸಿಗಳು ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿದರೆ ಹಳ್ಳಿ ಪ್ರದೇಶದ ನಿವಾಸಿಗಳು ಸ್ಥಳೀಯ ವೈದ್ಯರನ್ನು ಅವಲಂಬಿಸಿದ್ದಾರೆ. ಈ ಹಿಂದಿನಂತೆ ಆರೋಗ್ಯ ಸಮಸ್ಯೆಯನ್ನು ಕಡೆಗಣಿಸುವ ಸ್ಥಿತಿಯಿಲ್ಲ. ಅದರಲ್ಲೂ ಗ್ರಾಮೀಣರಲ್ಲಿ ಆರೋಗ್ಯ ಕಾಳಜಿಯ ಪ್ರಜ್ಞೆ ಹೆಚ್ಚುತ್ತಿದ್ದು ಸ್ಥಳೀಯವಾಗಿ ಆರೋಗ್ಯ ಸೇವೆ ಸಿಗದಿದ್ದರೆ ನಗರ ಪ್ರದೇಶಗಳತ್ತ ಆಗಮಿಸುತ್ತಿದ್ದಾರೆ.