ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಮಾ.12): ಕಳೆದ ಎರಡು ದಿನಗಳಿಂದ ಕೊರೋನಾ ಪ್ರಕರಣದಿಂದ ಸುದ್ದಿಯಲ್ಲಿದ್ದ ಇಲ್ಲಿನ ರೈಲ್ವೆ ನಿಲ್ದಾಣ ಪ್ರದೇಶ ಹಾಗೂ ಚಾಪಲಗಡ್ಡೆಯಲ್ಲಿ ಗುರುವಾರ ಯಾವುದೇ ಹೊಸ ಪ್ರಕರಣ ಕಂಡು ಬಂದಿಲ್ಲ. ಆದರೆ, ನಗರದ ಬಸ್‌ ನಿಲ್ದಾಣ ಬಳಿಯ ಹೋಟೆಲ್‌ನ ಇಬ್ಬರು ಸಿಬ್ಬಂದಿ ವರದಿ ಪಾಸಿಟಿವ್‌ ಬಂದಿದೆ. ಹೀಗಾಗಿ ಆರೋಗ್ಯ ಇಲಾಖೆ ಹೋಟೆಲ್‌ ಸಿಬ್ಬಂದಿ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡುತ್ತಿದೆ.

ಕಳೆದ ಎರಡು ದಿನಗಳಿಂದ ರೈಲ್ವೆಯ ಲೋಕೋ ಪೈಲೆಟ್‌ಗಳ (ಚಾಲಕರು) ವರದಿ ಪಾಸಿಟಿವ್‌ ಬರುತ್ತಿತ್ತು. ರೈಲ್ವೆ ಇಲಾಖೆಯಲ್ಲೇ 30 ಪಾಸಿಟಿವ್‌ ಪ್ರಕರಣಗಳು ಕಂಡು ಬಂದಿದ್ದವು. ಗದಗ ಮೂಲದ ಲೋಕೋ ಪೈಲೆಟ್‌ ನಿಂದ ಉಳಿದ ಲೋಕೋ ಪೈಲೆಟ್‌ ಗಳ ಮೈಯಲ್ಲಿ ಕೊರೋನಾ ವೈರಸ್‌ ಮನೆಮಾಡಿತ್ತು. ಈ ಚೈನ್‌ ಲಿಂಕ್‌ ತಪ್ಪಿಸಲು ವಿಜಯನಗರ ಜಿಲ್ಲಾಡಳಿತ ಹಗಲಿರುಳು ಶ್ರಮಿಸಿ 250ಕ್ಕೂ ಅಧಿಕ ರೈಲ್ವೆ ನೌಕರರು ಹಾಗೂ ಸಿಬ್ಬಂದಿ ಮತ್ತು ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ತಪಾಸಿಸಿತ್ತು.

ಟೂರಿಸಂ ಸೆಕ್ಟರ್‌:

ಹಂಪಿ ಸ್ಮಾರಕಗಳ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ಮಧ್ಯೆ ಲಾಕ್‌ಡೌನ್‌ ಬಳಿಕ ಪ್ರವಾಸೋದ್ಯಮ ಚೇತರಿಸಿದೆ. ರೆಸಾರ್ಟ್‌, ಹೋಟೆಲ್‌ಗಳಲ್ಲಿ ನಿತ್ಯ ಜ್ವರ ತಪಾಸಣೆ ಮಾಡಲಾಗುತ್ತಿದೆ. ಹೀಗಿದ್ದರೂ ನಗರದ ಹೃದಯ ಭಾಗದಲ್ಲಿರುವ ಹೋಟೆಲ್‌ನ ಇಬ್ಬರು ಸಿಬ್ಬಂದಿಗೆ ಕೊರೋನಾ ದೃಢವಾಗಿದೆ. ಆರಂಭದಲ್ಲಿ ಕಟ್ಟುನಿಟ್ಟಿನ ರೂಲ್ಸ್‌ ಪಾಲಿಸಿದ್ದ ಕಮಲಾಪುರ ಬಳಿಯ ರೆಸಾರ್ಟ್‌ವೊಂದು ಈಗ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ತಪಾಸಣೆ ಮಾಡುವುದನ್ನು ಸಡಿಲಿಸಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ ಹೆಚ್ಚಿದ ಸೋಂಕು: 11 ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಕೊರೋನಾ

ನಗರ ಸೇರಿದಂತೆ ಹಂಪಿ, ಕಮಲಾಪುರ ಸುತ್ತಮುತ್ತಲ ಹೋಟೆಲ್‌, ರೆಸಾರ್ಟ್‌ಗಳಲ್ಲಿ ನಿಯಮ ಪಾಲನೆಯಾಗುತ್ತಿದೆಯೇ? ಎಂಬುದನ್ನು ತಪಾಸಿಸುವ ಗೋಜಿಗೆ ಸಂಬಂಧಿಸಿದ ಇಲಾಖೆಗಳು ಹೋಗುತ್ತಿಲ್ಲ. ಬರೀ ಲಾಭದ ಹಿಂದೆ ಬಿದ್ದಿರುವ ಹೋಟೆಲ್‌, ರೆಸಾರ್ಟ್‌ ನವರಿಗೆ ಸಿಬ್ಬಂದಿ ಹಾಗೂ ಅತಿಥಿಗಳ ಆರೋಗ್ಯ ಸುರಕ್ಷತೆಯನ್ನು ಇತ್ತೀಚಿಗೆ ಕೈಬಿಟ್ಟಿವೆ ಎಂದು ಆರೋಪಿಸುತ್ತಾರೆ ನಗರದ ಪ್ರಜ್ಞಾವಂತ ನಾಗರಿಕರು.

ಪ್ರವಾಸೋದ್ಯಮವೇ ಜೀವಾಳ:

ವಿಜಯನಗರ ಜಿಲ್ಲೆಗೆ ಪ್ರವಾಸೋದ್ಯಮವೇ ಜೀವಾಳವಾಗಿದೆ. ನಗರಕ್ಕೆ ಆಗಮಿಸುವ ಗಣ್ಯರು ಅದರಲ್ಲೂ ಚಿತ್ರನಟರು, ರಾಜಕಾರಣಿಗಳು, ಸಚಿವರು ಕೂಡ ಸರ್ಕಾರಿ ಅತಿಥಿ ಗೃಹಗಳಿಗಿಂತ ರೆಸಾರ್ಟ್‌ ಇಷ್ಟಪಡುತ್ತಿದ್ದಾರೆ. ಹೀಗಾಗಿ ಹಂಪಿ, ಕಮಲಾಪುರ ಭಾಗದಲ್ಲಿ ರೆಸಾರ್ಟ್‌ ಉದ್ಯಮ ಜೋರಾಗಿ ನಡೆದಿದೆ. ಆದರೆ, ಕೊರೋನಾ ನಿಯಮ ಪಾಲನೆ ಮಾಡಲಾಗುತ್ತಿದೆಯೇ ಎಂಬುದನ್ನು ತಪಾಸಣೆ ಮಾಡಲಾಗುತ್ತಿಲ್ಲ ಎಂದು ಪ್ರವಾಸಿಗರೊಬ್ಬರು ಬೇಸರ ವ್ಯಕ್ತಪಡಿಸಿದರು.

38 ಸಕ್ರಿಯ ಪ್ರಕರಣ:

ನಗರದ ಎಂಜೆ ನಗರ ಭಾಗದಲ್ಲೊಂದು ಕೊರೋನಾ ಪ್ರಕರಣ ಹೊಸದಾಗಿ ಕಂಡು ಬಂದಿದೆ. ನಗರದಲ್ಲಿ ಸದ್ಯ 38 ಸಕ್ರಿಯ ಪ್ರಕರಣಗಳಿವೆ. ನಗರದ ಮೂರು ಕಡೆ ಕೊರೋನಾ ತಪಾಸಣೆ ಮಾಡಲಾಗುತ್ತಿದೆ. ಜತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ತಪಾಸಣೆ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆ ಕೊರೋನಾ ಅಬ್ಬರ ತಗ್ಗಿಸಲು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಪಾಸಿಟಿವ್‌ ಬಂದವರಿಗೆ ಚಿಕಿತ್ಸೆ, ಐಸೋಲೇಶನ್‌ ಮಾಡುತ್ತಿದೆ. ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ತಪಾಸಿಸಲಾಗುತ್ತಿದೆ. ಜ್ವರ ಇದ್ದವರನ್ನು, ಲಕ್ಷಣ ಇದ್ದವರಿಗೆ ಕ್ವಾರಂಟೈನ್‌ ಮಾಡಲಾಗುತ್ತಿದೆ.

ಈ ದಿನ ರೈಲ್ವೆ ಇಲಾಖೆಗೆ ಸಂಬಂಧಿಸಿ ಯಾವುದೇ ಪಾಸಿಟಿವ್‌ ಪ್ರಕರಣದ ವರದಿ ಬಂದಿಲ್ಲ. ಆದರೆ, ನಗರದ ಹೋಟೆಲ್‌ನ ಇಬ್ಬರು ಸಿಬ್ಬಂದಿಗೆ ಪಾಸಿಟಿವ್‌ ಬಂದಿದೆ. ಹೀಗಾಗಿ ಅವರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ತಪಾಸಣೆ ಮಾಡಲಾಗುವುದು ಎಂದು ಹೊಸಪೇಟೆ ಟಿಎಚ್‌ಒ ಡಾ. ಭಾಸ್ಕರ್‌ ತಿಳಿಸಿದ್ದಾರೆ.