ಜಿಮ್ಸ್ ಹೌಸ್ ಸರ್ಜನ್‌ಗೂ ಕೊರೋನಾ ಸೋಂಕು|ಎರಡು ವರ್ಷದ ಮಗುವಿಗೆ ಕೊರೋನಾ ಸೋಂಕು ದೃಢ| ಮಗುವಿನ ಪೋಷಕರಲ್ಲಿ ಸೋಂಕು ಪತ್ತೆಯಾಗಿಲ್ಲ| ಮಗುವಿನ ಪೋಷಕರಿಗೆ ಹೋಂ ಕ್ವಾರಂಟೈನ್| ಮಗುವಿಗೆ ಸೋಂಕಿರುವುದು ದೃಢಪಟ್ಟ ಮರುಕ್ಷಣದಿಂದಲೇ ವೈದ್ಯೆಯೂ ಕ್ವಾರಂಟೈನ್|
ಕಲಬುರಗಿ(ಏ.18): ಕೊರೋನಾ ಸೋಂಕಿತ 2 ವರ್ಷದ ಮಗುವಿಗೆ ಚಿಕಿತ್ಸೆ ನೀಡಿದ್ದ ಇಲ್ಲಿನ ‘ಜಿಮ್ಸ್’ ಆಸ್ಪತ್ರೆ ಹೌಸ್ ಸರ್ಜನ್‌ಗೂ ಕೋವಿಡ್-19 ಸೋಂಕು ತಗುಲಿರೋದು ಆತಂಕ ಸೃಷ್ಟಿಸಿದೆ. ಇದರೊಂದಿಗೆ ನಗರದಲ್ಲಿ ಕೊರೋನಾ ತಗುಲಿರುವ ವೈದ್ಯರ ಸಂಖ್ಯೆ ಎರಡಕ್ಕೇರಿದೆ.
ವಾಡಿ ಪಟ್ಟಣದಲ್ಲಿ ವಾಸವಿದ್ದ ಉತ್ತರ ಪ್ರದೇಶ ಮೂಲದ ದಂಪತಿಯ ಕಾಲು ಮುರಿದುಕೊಂಡಿದ್ದ 2 ವರ್ಷದ ಮಗುವಿಗೆ ಜಿಮ್ಸ್‌ನಲ್ಲಿ ಏ.11ರಂದು ಇದೇ ಹೌಸ್ ಸರ್ಜನ್ ಚಿಕಿತ್ಸೆ ನೀಡಿದ್ದರು. ಮಾರನೆ ದಿನ ಮಗುವಿನಲ್ಲಿ ಜ್ವರ ಉಲ್ಬಣಿಸಿದ ಕಾರಣ ಮತ್ತೆ ಪೋಷಕರು ಜಿಮ್ಸ್‌ಗೆ ಕರೆ ತಂದಿದ್ದರು. ಆಗ ಅನುಮಾನಗೊಂಡು ಮಗುವಿನ ರಕ್ತ ಹಾಗೂ ಗಂಟಲು ದ್ರವದ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದಾಗ ಕೊರೋನಾ ಸೋಂಕು ಇರುವುದು ದೃಢವಾಗಿತ್ತು. ಮಗುವಿನ ಪೋಷಕರಲ್ಲಿ ಸೋಂಕು ಪತ್ತೆಯಾಗಿಲ್ಲ.
ಕಲಬುರಗಿಯಿಂದ ಬಂದ ಪೊಲೀಸ್ ಪೇದೆಗೆ ಕೆಮ್ಮು-ಜ್ವರ: ಆತಂಕದಲ್ಲಿ ಗ್ರಾಮಸ್ಥರು!
ವಿಚಿತ್ರವೆಂದರೆ ಈ ಮಗುವಿನ ಪೋಷಕರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು ಅವರಾರಯರಿಗೂ ಸೋಂಕು ಪತ್ತೆಯಾಗಿಲ್ಲ. ಆದರೆ, ಮಗುವಿಗೆ ಚಿಕಿತ್ಸೆ ನೀಡಿದ 23 ವರ್ಷದ ವೈದ್ಯೆಗೆ ಸೋಂಕು ತಾಕಿದೆ. ಮಗುವಿನಲ್ಲಿ ಸೋಂಕು ಕಂಡು ಬಂದಿರುವುದರಿಂದ ಪೋಷಕರನ್ನು ಕ್ವಾರಂಟೈನ್ ಇರಿಸಲಾಗಿದೆ. ಮಗುವಿಗೆ ಸೋಂಕಿರುವುದು ದೃಢಪಟ್ಟ ಮರುಕ್ಷಣದಿಂದಲೇ ವೈದ್ಯೆಯೂ ಕ್ವಾರಂಟೈನ್ ಆಗಿದ್ದು, ಮಗುವಿಗೆ ಸೋಂಕು ತಗುಲಿದ್ದು ಹೇಗೆ ಎಂಬುದರ ಪತ್ತೆ ಹಚ್ಚುವ ಕಾರ್ಯ ಚುರುಕುಗೊಂಡಿದೆ.
