ಹುಬ್ಬಳ್ಳಿ(ಏ.25):  ಕೊರೋನಾ ಸೋಂಕಿತ ಪಿ-194 ಗುಣಮುಖನಾಗಿದ್ದು, ಕಿಮ್ಸ್‌ನಿಂದ ಬಿಡುಗಡೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅವರನ್ನು ಇನ್ನೂ ಒಂದು ವಾರ ಸರ್ಕಾರಿ ಕ್ವಾರಂಟೈನಲ್ಲೇ ಇಡಲಾಗಿದೆ. ಈ ಮೂಲಕ ಇಬ್ಬರು ಕೊರೋನಾ ಸೋಂಕಿತರು ಬಿಡುಗಡೆಯಾದಂತಾಗಿದೆ. ಇನ್ನು ಏಳು ಜನ ಸೋಂಕಿತರು ಚಿಕಿತ್ಸೆ ಕಿಮ್ಸ್‌ನಲ್ಲಿ ಪಡೆಯುತ್ತಿದ್ದಾರೆ. ಇದು ಹುಬ್ಬಳ್ಳಿಗರಲ್ಲಿ ಕೊಂಚ ನಿರಾಳತೆ ಮೂಡಿಸಿದೆ.

ಪಿ- 194 ಇಲ್ಲಿನ ಮುಲ್ಲಾ ಓಣಿಯ ವ್ಯಕ್ತಿ. ಅವರು ದೆಹಲಿ ಹಾಗೂ ಮುಂಬೈಗೆ ಹೋಗಿ ಬಂದಿದ್ದರು. ಇದರಿಂದಾಗಿ ಅವರಿಗೆ ಏ. 6ರಂದು ಕೊರೋನಾ ಇರುವುದು ದೃಢವಾಗಿತ್ತು. ಅವರಿಂದ ಅವರ ಕುಟುಂಬದ ಇತರ ಆರು ಜನ ಹಾಗೂ ಅವರ ಸಂಪರ್ಕ ಹೊಂದಿದ ಸ್ಮಶಾನ ಕಾಯುತ್ತಿದ್ದ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿದೆ. ಆ ಏಳು ಜನ ಇದೀಗ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋತಿಗಳಿಗೆ ಪ್ರತಿನಿತ್ಯ ಊಟ ಹಾಕುತ್ತಿರುವ ಪಿಎಸ್‌ಐ: ಖಾಕಿಧಾರಿಯ ಮಾನವೀಯತೆ

ಏ. 6ರಿಂದ ಅವರು ಕಿಮ್ಸ್‌ನ ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಪೂರ್ಣ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ಅವರನ್ನು ಎರಡು ಬಾರಿ ತಪಾಸಣೆಗೊಳಪಡಿಸಲಾಯಿತು. ಎರಡು ಬಾರಿಯೂ ನೆಗೆಟಿವ್‌ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಚಪ್ಪಾಳೆ ತಟ್ಟಿ ಸಂಭ್ರಮ:

ಅವರು ಬಿಡುಗಡೆಯಾಗುವ ವೇಳೆ ಕಿಮ್ಸ್‌ನ ಸಿಬ್ಬಂದಿ ಚಪ್ಪಾಳೆ ತಟ್ಟಿದರು. ಹೂಗುಚ್ಛ ನೀಡಿ ಗುಣಮುಖರಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಅವರು ವೈದ್ಯರಿಗೆ, ದಾದಿಯರಿಗೆ ಧನ್ಯವಾದ ಅರ್ಪಿಸಿ ಆಸ್ಪತ್ರೆಯಿಂದ ಹೊರಗೆ ಬಂದರು.