ಹುಬ್ಬಳ್ಳಿ(ಜು.16): ಕಳೆದ ಒಂದು ವಾರದಿಂದ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಲ್ಲಿನ ವಿದ್ಯಾನಗರ ಪೊಲೀಸ್‌ ಅಧಿಕಾರಿಯೊಬ್ಬರು ಕೋವಿಡ್‌-19ನಿಂದ ಮೃತಪಟ್ಟಿದ್ದು, ಇದು ಧಾರವಾಡ ಜಿಲ್ಲೆಯಲ್ಲಿ ಕೊರೋನಾ ವಾರಿಯರ್‌ ಒಬ್ಬರು ಬಲಿಯಾದ ಮೊದಲ ಪ್ರಕರಣ ಎನಿಸಿದೆ.

ಕೊರೋನಾ ಪಾಸಿಟಿವ್‌ನಿಂದ ಬಳಲುತ್ತಿದ್ದ ಇಲ್ಲಿನ ವಿದ್ಯಾನಗರ ಠಾಣೆ ಎಎಸ್‌ಐ ಚಿಕಿತ್ಸೆ ಫಲಿಸದೆ ಕಿಮ್ಸ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಾವೇರಿಯ ಶಿಗ್ಗಾಂವಿ ಪಾಣಿಗಟ್ಟಿ ಗ್ರಾಮ ಮೂಲದ ಇವರಿಗೆ 58 ವರ್ಷ ವಯಸ್ಸಾಗಿತ್ತು. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಸ್ವ್ಯಾಬ್‌ ಟೆಸ್ಟ್‌ ನೀಡಿ ಜು. 1ರಿಂದ 7ರ ವರೆಗೆ ಹೋಂ ಕ್ವಾರಂಟೈನ್‌ನಲ್ಲಿ ಇದ್ದರು. ಜು. 7ರಂದು ಕೊರೋನಾ ದೃಢಪಟ್ಟಿದ್ದರಿಂದ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನು ಎಎಸ್‌ಐ ಅವರಿಗೆ ಆರೋಗ್ಯದ ಇತರ ಸಮಸ್ಯೆಗಳು ಇದ್ದವು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ಬೆಳಗ್ಗೆ ಕೊನೆಯುಸಿರೆಳೆದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಸಿಬ್ಬಂದಿಗೆ ಕೊರೋನಾ: ನವಲಗುಂದ ಮಿನಿವಿಧಾನಸೌಧ ಸೀಲ್‌ಡೌನ್‌

ಎಎಸ್‌ಐ ಅವರು ಮೊದಲು ನವನಗರ ಠಾಣೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಅದಾದ ಬಳಿಕ ಧಾರವಾಡ ಶಹರ, ಕಮರಿಪೇಟ, ಘಂಟಿಕೇರಿ, ಹುಬ್ಬಳ್ಳಿ ಶಹರ, ಉತ್ತರ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದರು. 2017ರ ಜ. 14ರಿಂದ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು. ವಿದ್ಯಾನಗರ ಠಾಣೆಯಲ್ಲಿ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

ಈ ಕುರಿತು ಮಹಾನಗರ ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈಗಾಗಲೆ ಸರ್ಕಾರ ಘೋಷಿಸಿರುವ ಎಲ್ಲ ರೀತಿಯ ನೆರವನ್ನು ನೀಡಲು ಇಲಾಖೆಯಿಂದ ಪ್ರಸ್ತಾವನೆ ಕಳಿಸಲಾಗಿದೆ. ನಿಧನರಾದ ಎಎಸ್‌ಐ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕೋರಿದ್ದಾರೆ.