ಹಗರಿಬೊಮ್ಮನಹಳ್ಳಿ(ಸೆ.03): ಇಲ್ಲಿನ ಸರ್ಕಾರಿ ಕೋವಿಡ್‌ ಆಸ್ಪ​ತ್ರೆ​ಯಲ್ಲಿ ಸೋಂಕಿ​ತ​ರಿಗೆ ಸರಿ​ಯಾಗಿ ಚಿಕಿತ್ಸೆ ನೀಡು​ತ್ತಿಲ್ಲ ಎನ್ನುವ ಆರೋ​ಪಕ್ಕೆ ಪುಷ್ಟಿ ನೀಡು​ವಂತೆ, ಸರಿ​ಯಾಗಿ ಚಿಕಿತ್ಸೆ ನೀಡಿಲ್ಲ ಎಂದು ವಿಡಿಯೋ ಮಾಡಿ ಹೇಳಿ​ಕೊಂಡಿದ್ದ ಪಟ್ಟಣದ ಕೇದಾರ್‌ ಪ್ರಕಾಶ್‌ ಸ್ವಾಮಿ (40) ಬುಧ​ವಾರ ಮೃತಪಟ್ಟಿದ್ದಾರೆ. ತಮಗೆ ಸರಿ​ಯಾದ ಚಿಕಿತ್ಸೆ ನೀಡು​ತ್ತಿಲ್ಲ ಎಂದು ಅವರು ಮಾಡಿದ್ದ ವಿಡಿಯೋ ಅವರ ಸಾವಿನ ನಂತರ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ವೈರಲ್‌ ಆಗಿ​ದೆ.

ಕೇದಾರ್‌ ಪ್ರಕಾಶ ಶುಕ್ರವಾರ ವಿಪರೀತ ಜ್ವರದಿಂದ ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್‌ ಪಾಸಿಟಿವ್‌ ದೃಢಪಟ್ಟಿದೆ ಎಂದು ತಿಳಿದ ಬಳಿಕ ಚಿಕಿತ್ಸೆ ಆರಂಭಿಸಲಾ​ಗಿ​ತ್ತು. ಶನಿವಾರ ಸಂಜೆ ರೋಗಿ ತನಗೆ ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ. ಇಲ್ಲಿ ಆಕ್ಸಿಜನ್‌ ಹಾಕಿದರೂ ಮಾತ್ರೆ, ಇಂಜಕ್ಷನ್‌ ನೀಡಿಲ್ಲ ಎಂದು ಆರೋಪಿಸಿ ವಿಡಿಯೋ ಮಾಡಿ ಅದನ್ನು ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ್ದರು. ಇದಾದ ಬಳಿಕ ಅವರ ಸಂಬಂಧಿ ರಾಜ್ಯ ರೈತ ಸಂಘದ ನಾಯಕರು ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ವಿಚಾರಿಸಲಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಚಿಕಿತ್ಸೆ ಮುಂದುವರಿಸಿದ್ದಾರೆ. ಆದರೆ, ದುರದೃಷ್ಟ ಎನ್ನುವಂತೆ ಬುಧವಾರ ರೋಗಿ ಕೇದಾರ್‌ ಪ್ರಕಾಶ್‌ ಸ್ವಾಮಿ ಆಸ್ಪತ್ರೆಯಲ್ಲಿಯೇ ನಿಧನರಾಗಿದ್ದಾರೆ.

ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ 112 ಸೋಂಕಿತ ಗರ್ಭಿಣಿಯರಿಗೆ ಸುಸೂತ್ರ ಹೆರಿಗೆ

ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆ ಎಂದು ಪ್ರಕಾಶ್‌ ಸಾವಿನ ಬಳಿಕ ಬುಧವಾರ ವಿಡಿಯೋ ವೈರಲ್‌ ಆಗಿದೆ. ಈ ಬಗ್ಗೆ ತಾಲೂಕು ವೈದ್ಯಾಧಿಕಾರಿಗಳನ್ನು ಕೇಳಿದರೆ ಚಿಕಿತ್ಸೆ ಸರಿಯಾಗಿಯೇ ನೀಡಲಾಗಿತ್ತು. ರೋಗಿ ಟಿ.ಬಿ. ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ, ಆಸ್ಪತ್ರೆಗೆ ಜ್ವರ ಉಲ್ಬಣವಾದ ಬಳಿಕ ಬಂದಿದ್ದರಿಂದ ವೈಟ್‌ ಪ್ಲೆಟ್‌ಲೈಟ್ಸ್‌ಗಳು ಕೂಡ ಕಡಿಮೆಯಾಗಿದ್ದವು. ಇವುಗಳಲ್ಲದೆ ಕೋವಿಡ್‌ ಪಾಸಿಟಿವ್‌ ಇದ್ದುದರಿಂದ ಚಿಕಿತ್ಸೆಗೆ ಅವರ ದೇಹ ಸ್ಪಂದಿಸಿಲ್ಲ ಎಂದು ತಿಳಿ​ಸಿ​ದ್ದಾ​ರೆ.

ರೋಗಿ ಪ್ರಕಾಶ್‌ ಕೇದಾರ್‌ ಜ್ವರ ಉಲ್ಬಣವಾದಾಗಲೇ ಮುಂಜಾಗ್ರತೆ ವಹಿ​ಸಿ ಚಿಕಿತ್ಸೆ ಪಡೆಯಬೇಕಿತ್ತು. ಆದರೆ, ಜ್ವರ ವಿಪರೀತವಾದ ಬಳಿಕ ಆಸ್ಪತ್ರೆಗೆ ಬಂದಿದ್ದರಿಂದ ಉಸಿರಾಟದ ತೊಂದರೆ ಸಹ ಇತ್ತು. ಶನಿವಾರವೇ ಅವರು ವಿಡಿಯೋ ಮಾಡಿ​ಕೊಂಡಿ​ದ್ದ​ರು ಎಂದು ಪ್ರಭಾರಿ ತಾಲೂಕು ವೈದ್ಯಾಧಿಕಾರಿ ಡಾ. ಶಿವರಾಜ್‌ ಅವರು ತಿಳಿಸಿದ್ದಾರೆ.