ಬೆಂಗಳೂರು [ಮಾ.18]:  ಶಿವಾಜಿನಗರದ ಬ್ರಾಡ್‌ವೇ ರಸ್ತೆ ಬಳಿ ಬಿಬಿಎಂಪಿ ವತಿಯಿಂದ ನೂತನವಾಗಿ ನಿರ್ಮಿಸಿರುವ ಬೃಹತ್‌ ಆಸ್ಪತ್ರೆ ಕಟ್ಟಡವನ್ನು 150-200 ಹಾಸಿಗೆಯ ಕೊರೋನಾ ವಿಶೇಷ ಆಸ್ಪತ್ರೆಯನ್ನಾಗಿಸಲು ಅಗತ್ಯವಿರುವ ಮೂಲ ಸೌಲಭ್ಯ ಒದಗಿಸಲು ಇಸ್ಫೋಸಿಸ್‌ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಸುಧಾ ಮೂರ್ತಿ ಅವರು ಮುಂದೆ ಬಂದಿದ್ದಾರೆ.

ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌, ಬಿಬಿಎಂಪಿಯಿಂದ 300 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಕಟ್ಟಡವನ್ನು ಶಿವಾಜಿನಗರದಲ್ಲಿ ನಿರ್ಮಿಸಲಾಗಿದೆ. ಇದೀಗ ಇಸ್ಫೋಸಿಸ್ಟ್‌ ಪ್ರತಿಷ್ಠಾನದ ವತಿಯಿಂದ ಡಾ. ಸುಧಾ ಮೂರ್ತಿ ಅವರು ಮುಂದೆ ಬಂದಿದ್ದು, 200 ಹಾಸಿಗೆಯ ವ್ಯವಸ್ಥೆ ಹಾಗೂ ವೆಂಟಿಲೇಟರ್‌, ಮೂಲಸೌಕರ್ಯ ಕಲ್ಪಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಒಡಂಬಡಿಕೆ ಮಾಡಿಕೊಳ್ಳಲು ಸರ್ಕಾರ ಒಪ್ಪಿದೆ ಎಂದು ಹೇಳಿದರು.

ರಾಜ್ಯದಲ್ಲಿ 2572 ಮಂದಿ ಕೊರೋನಾ ಪ್ರತ್ಯೇಕ ನಿಗಾದಲ್ಲಿ!...

ಡೆಡ್ಲಿ ವೈರಸ್‌ ಎನ್ನಬೇಡಿ, ಗುಣಪಡಿಸಬಹುದು:

ಕೊರೋನಾ ವೈರಾಣುವನ್ನು ಅನಗತ್ಯವಾಗಿ ಡೆಡ್ಲಿ, ಕಿಲ್ಲರ್‌ ವೈರಸ್‌ ಎಂದು ಬಿಂಬಿಸಲಾಗುತ್ತಿದೆ. ಇದರಿಂದ ಸೋಂಕು ತಗುಲಿರುವವರು ಮಾನಸಿಕವಾಗಿ ಖಿನ್ನತೆ ಒಳಗಾಗುವ ಸಾಧ್ಯತೆ ಇದೆ. ಕೊರೋನಾ ವೈರಸ್‌ಗೆ ಚಿಕಿತ್ಸೆ ನೀಡಿದರೆ ಗುಣಮುಖರಾಗುತ್ತಾರೆ. ಕೆಲವರು ಚಿಕಿತ್ಸೆಯೇ ಇಲ್ಲದೆ ಗುಣಮುಖರಾದ ಉದಾಹರಣೆಗಳೂ ಇವೆ. ಹೀಗಾಗಿ ವಿನಾಕಾರಣ ತಪ್ಪು ಮಾಹಿತಿ ನೀಡಿ ಆತಂಕ ಸೃಷ್ಟಿಸಬಾರದು ಎಂದು ಇದೇ ವೇಳೆ ಮನವಿ ಮಾಡಿದರು.