ಬೆಂಗಳೂರು[ಮಾ.18]: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಶಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸ್ತುತ ಕೊರೋನಾ ಬಾಧಿತ ದೇಶದಿಂದ ಆಗಮಿಸಿದವರು ಹಾಗೂ ಸೋಂಕು ದೃಢಪಟ್ಟವರೊಂದಿಗೆ ನೇರ, ಪರೋಕ್ಷ ಸಂಪರ್ಕ ಹೊಂದಿರುವ 2,572 ಮಂದಿಯನ್ನು ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದೆ.

ಬೆಂಗಳೂರು ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ಹಾಗೂ ಕಾರವಾರ ಬಂದರುಗಳಲ್ಲಿ ಈವರೆಗೆ 1.17 ಲಕ್ಷ ಮಂದಿಯನ್ನು ತಪಾಸಣೆ ನಡೆಸಲಾಗಿದೆ. ಈ ವೇಳೆ 2,572 ಮಂದಿ ಪ್ರತ್ಯೇಕ ನಿಗಾ ವ್ಯವಸ್ಥೆಯಡಿ ನೋಂದಣಿಯಾಗಿದ್ದಾರೆ. ಇದರಲ್ಲಿ 364 ಮಂದಿ 28 ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. ಉಳಿದಂತೆ ಮಂಗಳವಾರ ಒಂದೇ ಇದನ 351 ಮಂದಿಯನ್ನು ಮನೆ ಹಾಗೂ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

58 ಮಂದಿ ಮೇಲೆ ಆಸ್ಪತ್ರೆಯಲ್ಲಿ ನಿಗಾ:

ಆಸ್ಪತ್ರೆಯಲ್ಲಿ ಸೋಂಕು ಶಂಕೆಯಿಂದ 58 ಮಂದಿ ದಾಖಲಾಗಿದ್ದಾರೆ. ಬೆಂಗಳೂರಿನ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಹತ್ತು ಮಂದಿ, ಬೆಂಗಳೂರಿನ ಇತರೆ ಆಸ್ಪತ್ರೆಗಳಲ್ಲಿ 13 ಮಂದಿ, ಕಲಬುರ್ಗಿ 9, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9 ಮಂದಿ, ಬಳ್ಳಾರಿ 1, ಚಿಕ್ಕಮಗಳೂರು 2, ಕೊಡಗು 3, ಉಡುಪಿ 1, ಬೀದರ್‌ 3, ಗದಗ 1, ಉತ್ತರ ಕನ್ನಡ 6 ಮಂದಿ ಸೇರಿ ಒಟ್ಟು 58 ಮಂದಿ ನಿಗಾದಲ್ಲಿದ್ದಾರೆ.

ನಿಗಾ ವ್ಯವಸ್ಥೆಯಲ್ಲಿರುವವರು - 2,572 ಮಂದಿ

ಮನೆಯಲ್ಲೇ ಪ್ರತ್ಯೇಕವಾಗಿರುವವರು - 2146

ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲ್ಪಟ್ಟವರು- 58 ಮಂದಿ

ಪರೀಕ್ಷೆ ಮಾಡಲು ಸಂಗ್ರಹಿಸುವ ಮಾದರಿಗಳು- 943

ಫಲಿತಾಂಶ ಬಂದಿರುವ ವರದಿಗಳು- 777

ನೆಗೆಟಿವ್‌ - 766

ಸೋಂಕು ಖಚಿತಪಟ್ಟ ಪ್ರಕರಣ - 11