ಕೊಪ್ಪಳ(ಜು.19): ಜಿಲ್ಲೆಯ ಕನಕಗಿರಿ ತಾಲೂಕಿನ ನೀರಲೂಟಿ ಗ್ರಾಮದ ಪೋಕ್ಸೋ ಆರೋಪಿಗೆ ಕೊರೋನಾ ಪಾಸಿಟಿವ್‌ ಬಂದಿದ್ದರಿಂದ ಆತಂಕಗೊಂಡಿದ್ದ ಕನಕಗಿರಿ ಪೊಲೀಸ್‌ ಠಾಣೆಯ ಪೊಲೀಸರು ಈಗ ನಿರಾಳವಾಗಿದ್ದಾರೆ. ಪಿಎಸ್‌ಐ ಸೇರಿದಂತೆ ಸುಮಾರು 23 ಜನರ ವರದಿಯೂ ನೆಗೆಟಿವ್‌ ಬಂದಿದೆ.

ಜು. 12ರಂದು ಪೋಕ್ಸೋ ಕಾಯ್ದೆ ಅಡಿ ನೀರಲೂಟಿ ಗ್ರಾಮದ ಯುವಕರನ್ನು ಬಂಧಿಸಲಾಗುತ್ತದೆ. 14 ವರ್ಷದ ಬಾಲಕಿಯನ್ನು ಆಂಧ್ರಕ್ಕೆ ಕರೆದೊಯ್ದಿದ್ದ ಈತನನ್ನು ಬಂಧಿಸಿ, ಕರೆತರಲಾಗಿದೆ. ಆಂಧ್ರದಿಂದ ಬಂದಿದ್ದರಿಂದ ಈತನಿಗೆ ಟೆಸ್ಟ್‌ ಮಾಡಿಸಿದಾಗ ಕೊರೋನಾ ದೃಢಪಟ್ಟಿತ್ತು. ಅಲ್ಲದೆ ಆತನೊಂದಿಗೆ ತೆರಳಿದ್ದ ಬಾಲಕಿಗೂ ಪಾಸಿಟಿವ್‌ ಬಂದಿದೆ. ಇದರಿಂದ ಕನಕಗಿರಿ ಪೊಲೀಸ್‌ ಠಾಣೆಯಲ್ಲಿ ಆತಂಕ ಮನೆ ಮಾಡಿತ್ತು. ಹೀಗಾಗಿ, ಪಿಎಸ್‌ಐ ಪ್ರಶಾಂತ್‌ ಸೇರಿ ಸುಮಾರು 23 ಜನರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಈಗ ಇವರೆಲ್ಲರ ವರದಿ ನೆಗೆಟಿವ್‌ ಬರುತ್ತಿದ್ದಂತೆ ಎಲ್ಲರೂ ಆತಂಕದಿಂದ ನಿರಾಳವಾಗಿದ್ದಾರೆ. ಈಗ ಅವರೆಲ್ಲರೂ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ.

ಕೊರೋನಾ ಕಾಟ: 30 ಕಿ.ಮೀ. ಸೈಕಲ್‌ ತುಳಿದು ಕರ್ತವ್ಯಕ್ಕೆ ಬರುವ ಚಾಲಕ..!

ಜೈಲಿನಲ್ಲಿಯೂ ಇಲ್ಲ ಆತಂಕ

ಪೋಕ್ಸೋ ಕಾಯ್ದೆ ಅಡಿ ಬಂಧಿತ ವ್ಯಕ್ತಿಯನ್ನು ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ಇಡಲಾಗಿದೆಯಾದರೂ ಮುಂಜಾಗ್ರತೆಯನ್ನು ವಹಿಸಲಾಗಿದೆ. ಆತನನ್ನು ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದ್ದು, ಆತನೂ ಈಗ ಗುಣಮುಖವಾಗಿದ್ದಾನೆ. ಜೈಲಿಗೆ ಯಾರೇ ಹೊಸದಾಗಿ ಬಂದರೂ ಅವರನ್ನು ಈಗ ಪ್ರತ್ಯೇಕವಾಗಿರಿಸಲಾಗುತ್ತದೆ ಮತ್ತು ಅವರನ್ನು ಟೆಸ್ಟ್‌ಗೆ ಒಳಪಡಿಸಲಾಗುತ್ತದೆ. ಟೆಸ್ಟ್‌ಗೆ ಒಳಪಡಿಸಿ, ವರದಿ ಬಂದ ಮೇಲೆಯೇ ಆತನನ್ನು ಇತರರ ಜೊತೆ ಸೇರಿಸಲಾಗುತ್ತದೆ. ಹೀಗಾಗಿ, ಜೈಲಿನಲ್ಲಿ ಯಾವುದೇ ಆತಂಕ ಇಲ್ಲ ಎಂದು ಜೈಲು ಅಧಿಕಾರಿ ಬಿ.ಎಂ. ಕೊಟ್ರೇಶ ಅವರು ತಿಳಿಸಿದ್ದಾರೆ. ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ, ಜೈಲಿನಲ್ಲಿರುವ ಇರುವ ಖೈದಿಗಳು ಆತಂಕ ಪಡುವ ಪ್ರಮೇಯ ಇಲ್ಲ ಎಂದು ಜೈಲು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.