ಕೊಪ್ಪಳ(ಜು.20):  ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್‌ ಅವರ ಕಾರ್‌ ಚಾಲಕನ ಪತ್ನಿಗೆ ಕೊರೋನಾ ದೃಢಪಟ್ಟಿದ್ದು, ಶಾಸಕ ಹಾಲಪ್ಪ ಆಚಾರ್‌ ಸೇರಿದಂತೆ ಅನೇಕರು ಈಗ ಕೊರೋನಾ ಭೀತಿ ಎದುರಿಸುತ್ತಿದ್ದಾರೆ.

ಕುಕನೂರು ಬಳಿ ಇರುವ ಆಡೂರು ಗ್ರಾಮದ ನಿವಾಸಿಯಾಗಿರುವ ಕಾರ್‌ ಚಾಲಕನ ಪತ್ನಿ ಜ್ವರದಿಂದ ಬಳಲುತ್ತಿರುವುದರಿಂದ ಕೊರೋನಾ ಟೆಸ್ಟ್‌ ಮಾಡಿಸಲಾಗಿದೆ. ವರದಿ ಭಾನುವಾರ ಪಾಸಿಟಿವ್‌ ಬಂದಿದೆ. ಹೀಗಾಗಿ, ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ. ಆದರೆ, ಕಾರ್‌ ಚಾಲಕ ಪತ್ನಿಗೆ ಅನಾರೋಗ್ಯ ಆಗಿರುವುದರಿಂದ ಕಳೆದೊಂದು ವಾರದಿಂದ ಕರ್ತವ್ಯಕ್ಕೆ ಬಂದಿಲ್ಲವಂತೆ. ಹೀಗಾಗಿ, ಸ್ವಲ್ಪ ನಿರಾಳವಾಗಿದೆ. ಶಾಸಕರಿಗೆ ಲಕ್ಷಣಗಳಿಲ್ಲವಾದರೂ ಮುನ್ನೆಚ್ಚರಿಕೆ ಕ್ರಮವಾಗಿ ಕಾರ್‌ ಚಾಲಕನ ಪ್ರಾಥಮಿಕ ಸಂಪರ್ಕದ ವ್ಯಕ್ತಿ ಎಂದು ಪರಿಗಣಿಸಿ, ಟೆಸ್ಟ್‌ ಮಾಡಿಸಲಾಗುತ್ತಿದೆ. ಇವರ ವರದಿ ಬಂದ ಮೇಲೆ ಇವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನು ಟೆಸ್ಟ್‌ಗೆ ಒಳಪಡಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.

ಕರ್ನಾಟಕದ ಮತ್ತೋರ್ವ ಬಿಜೆಪಿ ಶಾಸಕನಿಗೆ ಕೊರೋನಾ ದೃಢ: ಕಚೇರಿ, ಮನೆ ಸೀಲ್‌ಡೌನ್

ನನಗೆ ಯಾವುದೇ ಲಕ್ಷಣಗಳು ಇಲ್ಲ. ಕಾರ್‌ ಚಾಲಕ ಈ ಮೊದಲೇ ರಜೆಯಲ್ಲಿದ್ದಾನೆ. ಆದರೂ ನಾನು ಟೆಸ್ಟ್‌ ಮಾಡಿಸಿಕೊಳ್ಳುತ್ತೇನೆ ಎಂದು ಶಾಸಕ ಹಾಲಪ್ಪ ಆಚಾರ್‌ ಅವರು ಹೇಳಿದ್ದಾರೆ.