ಅಥಣಿ(ಜು.06): ತಾಲೂಕಿನಲ್ಲಿ ಕೊರೋನಾ ಅಟ್ಟಹಾಸ ಮುಂದುರೆದಿದ್ದು, ಶನಿವಾರ ಒಂದೇ ದಿನ ಮತ್ತೆ 12 ಪ್ರಕರಣಗಳು ಬೆಳಕಿಗೆ ಬಂದಿವೆ. ತಾಲೂಕಿನ ಸಂಕೋನಟ್ಟಿ, ಅನಂತಪೂರ, ಗುಂಡೇವಾಡಿ, ಝುಂಜರವಾಡ, ಚಿಕ್ಕಟ್ಟಿಮತ್ತು ಅಥಣಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೋರೋನಾ ಸೊಂಕಿತರು ಹೆಚ್ಚಾಗುತ್ತಿದ್ದಾರೆ. ಶೇಡಬಾಳ ಗ್ರಾಮದಲ್ಲಿ ಒಂದೇ ಕುಟುಂಬದ 5 ಜನರಿಗೆ ಸೋಂಕು ದೃಢಪಟ್ಟಿದೆ.

ಅಥಣಿ ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ನಗರಗಳಲ್ಲೂ ಹೈಅಲರ್ಟ್‌ ಘೋಷಿಸಿರುವ ಅಧಿಕಾರಿಗಳು ಶಾಂತಿ ನಗರ, ಸಾಯಿ ನಗರ, ಹೆಸ್ಕಾಂ ಕಚೇರಿ, ಪೊಲೀಸ್‌ ಠಾಣೆ, ಕೋರ್ಟ್‌ ಆವರಣ, ಗಚ್ಚಿನಮಠದ ಗಲ್ಲಿ, ಮೋಟಗಿಮಠದ ಗಲ್ಲಿ, ಮುಲ್ಲಾ ಓಣಿ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಸೀಲ್‌ಡೌನ್‌ ಮಾಡಿ ನಾಗರಿಕರಿಗೆ ತಿಳಿವಳಿಕೆ ನೀಡಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾಗೆ ಮತ್ತೊಂದು ಬಲಿ, 27 ಪಾಸಿಟಿವ್‌ ಕೇಸ್‌

ಗಡಿಭಾಗದ 10 ಹಳ್ಳಿಗಳು ಸೀಲ್‌ಡೌನ್‌

ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದ ಶಿನೋಳಿ ವೈದ್ಯರೊಬ್ಬರಲ್ಲಿ ಕೊರೋನಾ ಪಾಸಿಟಿವ್‌ ದೃಢವಾಗಿರುವ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿರುವ ಬೆಳಗಾವಿ ತಾಲೂಕಿನ ಕುದ್ರೇಮನಿ ಸೇರಿದಂತೆ ಸುತ್ತಮುತ್ತಲಿನ 10 ಗ್ರಾಮಗಳು ಶನಿವಾರ ಸೀಲ್‌ಡೌನ್‌ ಆಗಿವೆ.

ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಸ್ವಯಂ ಪ್ರೇರಿತರಾಗಿ ಗ್ರಾಮಗಳನ್ನು ಸೀಲ್‌ಡೌನ್‌ ಮಾಡಿದ್ದಾರೆ. ವೈದ್ಯನಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಡಂಗೂರ ಸಾರಲಾಗಿದೆ. ಶಿನೋಳಿಯಲ್ಲಿ ವೈದ್ಯ ಆಸ್ಪತ್ರೆ ಹೊಂದಿದ್ದು, ಗಡಿಭಾಗದ ಗ್ರಾಮಸ್ಥರು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಈ ವೈದ್ಯ ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ. ಮಹಾರಾಷ್ಟ್ರ ಆರೋಗ್ಯ ಇಲಾಖೆ ವೈದ್ಯನ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಈ ವರದಿ ಪಾಸಿಟಿವ್‌ ಬಂದಿದ್ದು, ಆತನನ್ನು ಮಹಾರಾಷ್ಟ್ರದ ಚಂದಗಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ವೈದ್ಯನಿಂದ ಚಿಕಿತ್ಸೆ ಪಡೆದಿರುವ ಗ್ರಾಮಗಳಿಗೆ ಗ್ರಾಪಂ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಪತ್ತೆ ಹಚ್ಚುವ ಕಾರ್ಯವನ್ನು ಕೈಗೊಂಡಿದ್ದಾರೆ.