ಕುಷ್ಟಗಿ(ಜು.14): ಸ್ಥಳೀಯ ಸಿಪಿಐ ಕಚೇರಿಯ ಇಬ್ಬರು ಪೊಲೀಸರಲ್ಲಿ ಕೊರೋನಾ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ 22 ಜನ ಪ್ರಾಥಮಿಕ ಸಂಪರ್ಕಿತರು ಸ್ವಯಂ ಪ್ರೇರಿತರಾಗಿ ಇಲ್ಲಿನ ಎಸ್ಸಿ ಮೆಟ್ರಿಕ್‌ ಪೂರ್ವ ವಸತಿ ನಿಲಯದಲ್ಲಿ ಸ್ವಯಂ ಕ್ವಾರಂಟೈನಲ್ಲಿ ಇದ್ದಾರೆ ಎಂದು ಸಿಪಿಐ ಚಂದ್ರಶೇಖರ ಜಿ. ಹೇಳಿದ್ದಾರೆ. 

ಭಾನುವಾರ ಮಧ್ಯಾಹ್ನ ಇಬ್ಬರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೋಂಕಿತ ಪೊಲೀಸ್‌ ಸಿಬ್ಬಂದಿ ವಸತಿ ಗೃಹದಲ್ಲಿ ವಾಸವಾಗಿದ್ದರು. ಪ್ರಾಥಮಿಕ ಸಂಪರ್ಕಿತರು ವಸತಿ ಗೃಹದಲ್ಲಿದ್ದರೆ ತೊಂದರೆ ಎಂದು ತಾವೇ ಪ್ರತ್ಯೇಕವಾಗಿ 22 ಜನ ಸಿಬ್ಬಂದಿ ವಸತಿ ನಿಲಯದಲ್ಲಿ ಹೋಮ್‌ ಕ್ವಾರಂಟೈನ್‌ ಆಗಿದ್ದಾರೆ. ಜತೆಗೆ 10 ಜನ ಹೋಮ್‌ ಕ್ವಾರಂಟೈನಲ್ಲಿ ಇದ್ದಾರೆ.

ಈ ಹಿನ್ನೆಲೆಯಲ್ಲಿ ಪೊಲೀಸರ ಮನವಿಗೆ ಸ್ಪಂದಿಸಿದ ತಹಸೀಲ್ದಾ​ರ್‌ ಎಂ. ಸಿದ್ದೇಶ ಅವರು ವಸತಿ ನಿಲಯದಲ್ಲಿರಲು ಅನುಕೂಲ ಕಲ್ಪಿಸಿದ್ದಾರೆ. ಇನ್ನು ಸ್ಥಳೀಯ ಠಾಣೆಯ ಸಿಪಿಐ ಅವರು ತಮ್ಮ ಮನೆಯಲ್ಲಿಯೇ ಕ್ವಾರಂಟೈ​ನ್‌ ಇದ್ದಾರೆ.
ಇಷ್ಟಿದ್ದರೂ ಸಹ ಕೆಲವರು ರಸ್ತೆಯಲ್ಲಿ ಸಂಚರಿಸುವಾಗ ಮುಖಕ್ಕೆ ಮಾಸ್ಕ್‌ ಹಾಕಿಕೊಳ್ಳದಿರುವುದು ಸಹ ಕಂಡು ಬಂದಿದೆ ಅಲ್ಲದೆ ಕೆಲ ಬ್ಯಾಂಕ್‌ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕೊರತೆ ಅಲ್ಲಲ್ಲಿ ಕಂಡು ಬರುತ್ತಿದೆ.

ಲಾಕ್‌ಡೌನ್‌ ಭೀತಿ: ಕೊಪ್ಪಳ ಮಾರ್ಕೆಟ್‌ನಲ್ಲಿ ಜನವೋ ಜನ..!

ಜಾಗೃತಿ ಅಗತ್ಯ

ಪಟ್ಟಣದಲ್ಲಿ ಸ್ವಯಂ ಪ್ರೇರಿತವಾಗಿ ಕೆಲ ಅಂಗಡಿ ಮಾಲೀಕರು ಅಂಗಡಿ ಮುಂಗಟ್ಟುಗಳನ್ನು ಮಧ್ಯಾಹ್ನದ ವೇಳೆಗೆ ಬಂದ್‌ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮೀಣ ಹಾಗೂ ಪಟ್ಟಣದ ಜನತೆ ತರಕಾರಿ, ಕಿರಾಣಿ ಹಾಗೂ ಇತರೆ ಸಾಮಗ್ರಿಗಳನ್ನು ಕೊಂಡು​ಕೊ​ಳ್ಳುವುದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಣಕ್ಕೆ ಬರುತ್ತಿದ್ದು. ಕೊರೋನಾ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವುದರ ಜತೆಗೆ ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳುವುದರ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಕುರಿತು ಕಟ್ಟುನಿಟ್ಟಿನ ಆದೇಶ ಜಾರಿ ಮಾಡುವುದು ಅವಶ್ಯಕತೆ ಇದೆ.