ಬಾಗಲಕೋಟೆ: ನವ ವಿವಾಹಿತನಿಗೆ ಕೊರೋನಾ ದೃಢ: ಮದುವೆಗೆ ಬಂದಿದ್ದವರಲ್ಲಿ ಹೆಚ್ಚಿದ ಆತಂಕ
ಬಾಗಲಕೋಟೆ ಮೂಲದ ಅಬಕಾರಿ ಇಲಾಖೆ ನೌಕರನಿಗೆ ಹಾವೇರಿಯಲ್ಲಿ ಸೋಂಕು| ಎರಡೂ ಜಿಲ್ಲೆಯ ಜನರಿಗೆ ಆತಂಕ| ಸೋಂಕಿತ ಯುವಕನನ್ನು ಬಾಗಲಕೋಟೆಯ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಶಿಫ್ಟ್| ತರಬೇತಿಗೆಂದು ಕಳುಹಿಸುವ ವೇಳೆ ಪರೀಕ್ಷೆ ಮಾಡಿಸಿದ್ದರಿಂದಲೇ ಕೊರೊನಾ ಸೋಂಕು ದೃಢ|
ಬಾಗಲಕೋಟೆ(ಜೂ.20): ನವ ವಿವಾಹಿತನಿಗೆ ಮಹಾಮಾರಿ ಕೊರೋನಾ ಸೋಂಕು ಧೃಢಪಟ್ಟಿದೆ. ಹೀಗಾಗಿ ಸೋಂಕಿತನ ಮದುವೆಗೆ ಬಂದಿದ್ದವರಲ್ಲಿ ಆತಂಕ ಶುರುವಾಗಿದೆ. ಬಾಗಲಕೋಟೆ ಮೂಲದ ಅಬಕಾರಿ ಇಲಾಖೆ ನೌಕರನಿಗೆ ಸೋಂಕು ಹಾವೇರಿಯಲ್ಲಿ ತಗುಲಿದೆ. ಇದರಿಂದ ಎರಡೂ ಜಿಲ್ಲೆಯ ಜನರಿಗೆ ಆತಂಕ ಎದುರಾಗಿದೆ.
ಈ ಬಗ್ಗೆ ಡಿಎಚ್ಓ ಡಾ.ಅನಂತ ದೇಸಾಯಿ ಮಾಹಿತಿ ನೀಡಿದ್ದಾರೆ. ಹಾವೇರಿಯಲ್ಲಿ ಕೊರೋನಾ ಪರೀಕ್ಷೆ ವೇಳೆ ಬಾಗಲಕೊಟೆ ಮೂಲದ ಅಬಕಾರಿ ಇಲಾಖೆ ನೌಕರನಿಗೆ ಸೋಂಕು ಧೃಢಪಟ್ಟಿದೆ. ಜೂನ್ 12 ರಂದು ಸೋಂಕಿತ ಯುವಕ ಬಾಗಲಕೋಟೆಯಲ್ಲಿ ಮದುವೆಯಾಗಿದ್ದನು. ಹಾವೇರಿಯಲ್ಲಿ ಅಬಕಾರಿ ಇಲಾಖೆ ನೌಕರನಾಗಿ ಕೆಲಸ ಮಾಡುತ್ತಿದ್ದನು. ಹಾವೇರಿಯಲ್ಲಿ ತರಬೇತಿಗೆ ತೆರಳುವ ಮುನ್ನ ಜೂ.17ರಂದು ಗಂಟಲು ದ್ರವ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿತ್ತು.
ಬಾಗಲಕೋಟೆ: ಸಾಮಾಜಿಕ ಅಂತರ ಕಾಯ್ದುಕೊಳ್ಳದ DCM ಗೋವಿಂದ ಕಾರಜೋಳ
ತರಬೇತಿಗೆಂದು ಕಳುಹಿಸುವ ವೇಳೆ ಪರೀಕ್ಷೆ ಮಾಡಿಸಿದ್ದರಿಂದಲೇ ಕೊರೊನಾ ಸೋಂಕು ದೃಢಪಟ್ಟಿದೆ. ಹಾವೇರಿಯಿಂದ ಯುವಕ ಬಾಗಲಕೋಟೆ ಜಿಲ್ಲೆಯ ಕಲಾದಗಿಗೆ ಗ್ರಾಮಕ್ಕೆ ಇವತ್ತು ಬಂದಿಳಿಯುತ್ತಲೇ ಸೋಂಕು ದೃಢ ಮಾಹಿತಿ ಬಂದಿದೆ. ಹಾವೇರಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಬಾಗಲಕೋಟೆ ಜಿಲ್ಲಾ ಆರೋಗ್ಯ ಇಲಾಖೆಗೆ ಮಾಹಿತಿ ಬಂದಿದೆ. ಇದೀಗ ಸೋಂಕಿತ ಯುವಕನನ್ನು ಬಾಗಲಕೋಟೆಯ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಯುವಕನ ಟ್ರಾವೆಲ್ ಹಿಸ್ಟರಿಗಾಗಿ ಜಿಲ್ಲಾಡಳಿತ ಬೆನ್ನು ಬಿದ್ದಿದೆ.