ಔರಾದ್‌(ಸೆ.11): ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳು ತಿಳಿಸಿದ್ದಾರೆ.

ಕೊರೋನಾ ನಿಯಂತ್ರಣ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ಸಚಿವರು ಕಳೆದೈದು ತಿಂಗಳಿಂದ ನಿರಂತರ ಸಂಚರಿಸುತ್ತಿದ್ದಾರೆ. ಜಿಲ್ಲೆಯಲ್ಲದೇ ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. ಸರಣಿ ಸಭೆಗಳನ್ನು ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸರ್ಕಾರದ ಮಟ್ಟದಲ್ಲಿ ನಡೆದ ಸಭೆಗಳಲ್ಲಿ ಭಾಗವಹಿಸಿದ್ದಾರೆ.

ಸಚಿವರ ಕಾರು ಚಾಲಕನಿಗೆ ಮೂರು ದಿನಗಳ ಹಿಂದಷ್ಟೇ ಪಾಸಿಟಿವ್‌ ಬಂದಿತ್ತು. ಹೀಗಾಗಿ ಸಚಿವರು ಹೋಮ್‌ ಕ್ವಾರಂಟೈನ್‌ಗೆ ಒಳಗಾಗಿದ್ದರು. ಸಚಿವರು ಸ್ವತಹ ವೈದ್ಯರನ್ನು ಕರೆಸಿ ಪರೀಕ್ಷಿಸಿಕೊಂಡಾಗ ಸೋಂಕು ದೃಢಪಟ್ಟಿದೆ. ಅವರ ಅಣ್ಣನ ಮಗ ದಿಲೀಪ್‌ ಚವ್ಹಾಣ್‌ ಅವರಿಗೂ ಸೋಂಕು ಕಾಣಿಸಿಕೊಂಡಿದೆ. ಸಚಿವರಲ್ಲಿ ಯಾವುದೇ ರೋಗ ಲಕ್ಷಣಗಳು ಕಾಣಿಸಿಲ್ಲ. ಔರಾದ್‌ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದು, ವೈದ್ಯರ ಸಲಹೆಯಂತೆ ತಮ್ಮ ಮನೆಯಲ್ಲಿ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೆಯಲಿದ್ದಾರೆ.

'ಕೇಂದ್ರದ ತಾರತಮ್ಯ ಬಗ್ಗೆ ಕೇಳದ ರಾಜ್ಯ ಬಿಜೆಪಿ ಸಂಸದರು ಪುಕ್ಕಲರು'

‘ನಾನು ಆರೋಗ್ಯವಾಗಿಯೇ ಇದ್ದೇನೆ. ನಿಮ್ಮೆಲ್ಲರ ಹಾರೈಕೆ ಹಾಗೂ ಆಶೀರ್ವಾದಗಳೇ ನನಗೆ ಶ್ರೀರಕ್ಷೆ. ನಾನು ಶೀಘ್ರದಲ್ಲಿ ಈ ಸೋಂಕಿನಿಂದ ಗುಣಮುಖನಾಗಿ ಬರುತ್ತೇನೆ. ಯಾರೂ ಆಂತಕ ಪಡಬೇಕಿಲ್ಲ. ಇತ್ತೀಚೆಗೆ ತಮ್ಮ ಸಂಪರ್ಕಕ್ಕೆ ಬಂದವರು ಮುಂಜಾಗರೂಕತೆ ವಹಿಸಬೇಕು ಎಂದು ಸಚಿವರು ಕೋರಿದ್ದಾಗಿ ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ತಿಳಿಸಿದ್ದಾರೆ.

ಔರಾದ್‌ ಆಸ್ಪತ್ರೆಯಲ್ಲಿ ತಪಾಸಣೆ:

ಕೋವಿಡ್‌-19 ಹಿನ್ನೆಲೆಯಲ್ಲಿ ಸಚಿವ ಪ್ರಭು ಚವ್ಹಾಣ್‌ ಅವರು ಸೆ.10ರಂದು ಔರಾದ್‌ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಅಲ್ಲಿನ ವೈದ್ಯರಿಂದ ತಪಾಸಣೆ ನಡೆಸಿಕೊಂಡರು. ಈ ವೇಳೆ ತಾಲೂಕು ವೈದ್ಯಾಧಿಕಾರಿ ಶರಣಯ್ಯ ಸ್ವಾಮಿ, ಚೀಪ್‌ ಮೆಡಿಕಲ್‌ ಆಫೀಸರ್‌ ಮಹೇಶ ಬಿರಾದಾರ, ಪಿಜಿಸಿಯನ್‌ ಡಾ.ಪ್ರಮೋದ, ಡಾ.ಸಂತೋಷ ಬುಟ್ಟೆ, ಸರ್ಜನ್‌ ಡಾ.ಕಿರಣ್‌ ಗಾಯಕವಾಡ ಇದ್ದರು.