ಬೆಂಗಳೂರಿನ ಯಲಂಹಕ ವಲಯದ 3 ವಾರ್ಡ್‌ನ 3 ಸ್ಥಳ ಕ್ಲಸ್ಟರ್‌| ಯಲಹಂಕದ ಗೋವರ್ಧನ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌| ಇಡೀ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಹೋಂ ಕ್ವಾರಂಟೈನ್‌| ಒಂದೇ ಮನೆಯಲ್ಲಿದ್ದ 9 ಮಂದಿಗೆ ಸೋಂಕು| 

ಬೆಂಗಳೂರು(ಮಾ.19): ಬಿಬಿಎಂಪಿಯ ಯಲಹಂಕ ವಲಯದ ಮೂರು ವಾರ್ಡ್‌ಗಳಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗಿದ್ದು ಆತಂಕ ಮೂಡಿಸಿದೆ. ಈ ವಾರ್ಡ್‌ಗಳಲ್ಲಿ ಐದಕ್ಕಿಂತ ಹೆಚ್ಚಿನ ಸೋಂಕು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪಾಲಿಕೆಯು ಮೂರು ಸ್ಥಳಗಳನ್ನು ಕ್ಲಸ್ಟರ್‌ ಎಂದು ಗುರುತಿಸಿದೆ.

ಪಾಲಿಕೆಯ 9ನೇ ವಾರ್ಡಿನ ಯಲಹಂಕದ ಗೋವರ್ಧನ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ ನಿವಾಸಿಯೊಬ್ಬರು ಮಾ.1ರಂದು ಕೇರಳದಿಂದ ನಗರಕ್ಕೆ ವಾಪಸಾಗಿದ್ದು, ವಾರದ ಬಳಿಕ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಕೊರೋನಾ ಪರೀಕ್ಷೆ ಮಾಡಿಸಿದಾಗ ಸೋಂಕು ದೃಢಪಟ್ಟಿದೆ. ಹೀಗಾಗಿ ಇಡೀ ಅಪಾರ್ಟ್‌ಮೆಂಟ್‌ ನಿವಾಸಿಗಳನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ.

ಅಂತೆಯೆ ಇದೇ ಅಪಾರ್ಟ್‌ಮೆಂಟಿನ ನಾಲ್ವರು ಮಾ.9ರಂದು ಇಸ್ಕಾನ್‌ ದೇವಾಲಯಕ್ಕೆ ಹೋಗಿ ಬಂದಿದ್ದು ಬಳಿಕ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ. ಪರೀಕ್ಷೆಯಲ್ಲಿ ನಾಲ್ವರಿಗೂ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ.

'ಮಾಸ್ಕ್‌ ಹಾಕದಿದ್ದರೆ ಬಸ್‌ಗೆ ಹತ್ತಿಸಬೇಡಿ'

ಮದುವೆಗೆ ಹೋದವರಿಗೆ ಕೊರೋನಾ:

ಅಂತೆಯೆ ವಾರ್ಡ್‌ ಸಂಖ್ಯೆ 10ರ ಬಿಇಎಲ್‌ ಲೇಔಟ್‌ನ ಕುಟುಂಬವೊಂದು ಮಾ.2ರಂದು ಆರ್‌.ಟಿ.ನಗರದಲ್ಲಿ ನಡೆದ ಮದುವೆಗೆ ಹೋಗಿ ಬಂದಿತ್ತು. ಮದುವೆಗೆ ಹಾಜರಾಗಿದ್ದವರೊಬ್ಬರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕುಟುಂಬ ಕೊರೋನಾ ಸೋಂಕು ಪರೀಕ್ಷೆ ಮಾಡಿಸಿಕೊಂಡಿದ್ದು, ಈ ವೇಳೆ ಸದಸ್ಯರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಕುಟುಂಬದ ಎಲ್ಲ ಸದಸ್ಯರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಕೆಲ ದಿನದ ನಂತರ ಮತ್ತೊಮ್ಮೆ ಕುಟುಂಬದ ಸದಸ್ಯರಿಗೆ ಕೊರೋನಾ ಮರು ಪರೀಕ್ಷೆ ಮಾಡಿದಾಗ ಎಲ್ಲರಿಗೂ ಸೋಂಕು ದೃಢಪಟ್ಟಿದೆ. ಹೀಗಾಗಿ ಈ ಕುಟುಂಬವನ್ನು ಹೋಂ ಇಸೋಲೇಷನ್‌ನಲ್ಲಿ ಇರಿಸಲಾಗಿದೆ.

ಒಂದೇ ಮನೆಯಲ್ಲಿದ್ದ 9 ಮಂದಿಗೆ ಸೋಂಕು:

ಪಾಲಿಕೆಯ ವಾರ್ಡ್‌ ಸಂಖ್ಯೆ 4ರ ಯಲಹಂಕದ ಚಿಕ್ಕಬೊಮ್ಮಸಂದ್ರದ ಡ್ಯೂಪ್ಲೆಕ್ಸ್‌ ಮನೆಯಲ್ಲಿ ನೆಲೆಸಿದ್ದ 9 ಮಂದಿಗೆ ಪೈಕಿ ಏಳು ಮಂದಿಗೆ ಮಾ.17ರಂದು ಕೊರೋನಾ ಸೋಂಕು ದೃಢಪಟ್ಟಿದೆ. ಮೊದಲಿಗೆ ಇಬ್ಬರು ಸದಸ್ಯರು ಸೋಂಕು ಪರೀಕ್ಷೆಗೆ ಒಳಗಾದಾಗ ಸೋಂಕು ದೃಢಪಟ್ಟಿತ್ತು. ಬಳಿಕ ಇವರಿಂದ ಮಾಹಿತಿ ಸಂಗ್ರಹಿಸಿ ಉಳಿದವರನ್ನು ಪರೀಕ್ಷೆಗೆ ಒಳಪಡಿಸಿದಾಗ ನಾಲ್ವರಿಗೆ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಂಪರ್ಕಿತರ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.