ಬೆಂಗಳೂರು(ಮಾ.17): ತಮಿಳುನಾಡಿನಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದ ಒಂದೇ ಕುಟುಂಬ ನಾಲ್ವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಬಿಟಿಎಂ ಲೇಔಟ್‌ನ ಪ್ರಿಸ್ಟೀನ್‌ ಗೋಲ್ಡ್‌ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಒಂದೇ ಕುಟುಂಬದ ನಾಲ್ವರು ಸದಸ್ಯರು ಕೆಲ ದಿನಗಳ ಹಿಂದೆ ತಮಿಳುನಾಡಿನ ಕೊಯಮತ್ತೂರಿಗೆ ಮದುವೆಗೆ ಹೋಗಿ ಬಂದಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಕೊರೋನಾ ಪರೀಕ್ಷೆಗೆ ಒಳಪಡಿಸಿದಾಗ ನಾಲ್ವರಿಗೂ ಸೋಂಕು ದೃಢಪಟ್ಟಿದೆ. ಹೀಗಾಗಿ ನಾಲ್ವರನ್ನು ಮನೆಯಲ್ಲಿಯೇ ಐಸೋಲೇಷನ್‌ ಮಾಡಲಾಗಿದೆ. ಅಲ್ಲದೆ, ಅಪಾರ್ಟ್‌ಮೆಂಟ್‌ನ ಎಲ್ಲ ನಿವಾಸಿಗಳಿಗೂ ಕೊರೋನಾ ಪರೀಕ್ಷೆಗೆ ಒಳಪಡಿಸಲು ಪಾಲಿಕೆಗೆ ಮುಂದಾಗಿದೆ.

ಕರ್ನಾಟಕದಲ್ಲಿ ಮತ್ತೆ ಕೊರೋನಾ ಆತಂಕ: 24 ಗಂಟೆಗಳಲ್ಲಿ ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ

ಅಂತೆಯೆ ಪಾಲಿಕೆ ಆರೋಗ್ಯ ಕಾರ್ಯಕರ್ತರು ಆರೋಗ್ಯ ಸಮೀಕ್ಷೆ ಆಂಭಿಸಿದ್ದಾರೆ. ಸದರಿ ಅಪಾರ್ಟ್‌ಮೆಂಟ್‌ ಹಾಗೂ ಅಕ್ಕಪಕ್ಕದ ಮನೆ, ಅಪಾರ್ಟ್‌ಮೆಂಟ್‌ಗಳ ನಿವಾಸಿಗಳಿಗೂ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಅಪಾರ್ಟ್‌ಮೆಂಟ್‌ ನಿವಾಸಿಗಳ ಕೋವಿಡ್‌ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಪಾಲಿಕೆ ದಕ್ಷಿಣ ವಲಯದ ಆರೋಗ್ಯಾಧಿಕಾರಿ ತಿಳಿಸಿದರು.