*  ಬೆಂಗಳೂರಲ್ಲಿ ಹೆಚ್ಚುತ್ತಿರುವ ಕೊರೋನಾ ನಿಯಂತ್ರಣಕ್ಕೆ ಕ್ರಮ: ಗೌರವ್‌ ಗುಪ್ತಾ*  ಪರೀಕ್ಷೆ ಹೆಚ್ಚಿಸಲು ಯೋಜನೆ*  ಸ್ವಾಬ್‌, ದತ್ತಾಂಶ ಸಂಗ್ರಹಕ್ಕೆ ಸಕಲ ಸಿದ್ಧತೆ: ಪಾಲಿಕೆ ಮುಖ್ಯ ಆಯುಕ್ತ 

ಬೆಂಗಳೂರು(ಡಿ.29): ವಿದೇಶಗಳಂತೆ ಬೆಂಗಳೂರಿನಲ್ಲೂ(Bengaluru) ಕೊರೋನಾ(Coronavirus) ಹೆಚ್ಚುತ್ತಿದ್ದು, ಇದರ ವಿರುದ್ಧ ಅಗತ್ಯ ಕ್ರಮ ಕೈಗೊಂಡಿರುವ ಬಿಬಿಎಂಪಿ ಕೊರೋನಾ ಪರೀಕ್ಷೆ ಹೆಚ್ಚಿಸಲು ಯೋಜನೆ ರೂಪಿಸಿದೆ ಎಂದು ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gaurav Gupta) ತಿಳಿಸಿದರು.

ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಕೊರೋನಾ ನಿಯಂತ್ರಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ನಿತ್ಯ ನಗರದಲ್ಲಿ 30-40 ಸಾವಿರ ಜನರ ಕೊರೋನಾ ಪರೀಕ್ಷೆCovid Test) ನಡೆಯುತ್ತಿದ್ದು, ಇದನ್ನು 60 ಸಾವಿರಕ್ಕೆ ಹೆಚ್ಚಿಸಲು ಯೋಜನೆ ಆರಂಭಿಸಲಾಗಿದೆ. ಈಗಾಗಲೇ ಸ್ವಾಬ್‌ ಸಂಗ್ರಹ ಮಾಡುವವರು, ದತ್ತಾಂಶ ನಮೂದು ಮಾಡುವವರು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದರು.

Omicron Effect: ಹೆಚ್ಚಿದ ಅಪಾಯ, ಒಂದೇ ದಿನ ವಿಶ್ವಾದ್ಯಂತ 14 ಲಕ್ಷ ಕೇಸ್‌

ಸರ್ಕಾರದ ಸೂಚನೆಯಂತೆ ಸೋಂಕಿನ ನಿಯಂತ್ರಣಕ್ಕಾಗಿ ಈಗಾಗಲೇ ಮಾರುಕಟ್ಟೆ, ಮಾಲ್‌ ಸೇರಿದಂತೆ ಜನದಟ್ಟಣೆ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ. ನೈಟ್‌ ಕರ್ಫ್ಯೂ ಜಾರಿ ಇರುವ ಅಷ್ಟೂದಿನಗಳು ಜನರು, ಕ್ಲಬ್‌, ಹೋಟಲ್‌, ಬಾರ್‌ಗಳು ನಿಯಮ ಪಾಲಿಸುವುದರ ಕುರಿತು ಆರೋಗ್ಯಾಧಿಕಾರಿಗಳು, ಮಾರ್ಷಲ್‌ಗಳು ಗಮನಿಸಲಿದ್ದಾರೆ. ನಿಯಮ ಪಾಲಿಸದವರ ವಿರುದ್ಧ ಕ್ರಮ ಜರುಗಿಸಲಿದ್ದಾರೆ. ಅಲ್ಲದೇ ಅಗತ್ಯವಿರುವ ಕಡೆಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಬಿಬಿಎಂಪಿ

ಸಿದ್ಧವಿದೆ.

ಎರಡನೇ ಅಲೆ ವೇಳೆ ಕಡಿಮೆ ಪ್ರಯಾಣದಲ್ಲಿದ್ದ ಕೊರೋನಾ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ದಿಢೀರನೇ ಹೆಚ್ಚಾಗುತ್ತಾ ಹೋಯಿತು. ನಂತರ ಲಾಕ್‌ಡೌನ್‌(Lockdown) ಮಾಡಲಾಯಿತು. ಇದೆಲ್ಲವನ್ನು ಸಾರ್ವಜನಿಕರು ಎದುರಿಸಿದ್ದಾರೆ. ಸದ್ಯ ಒಮಿಕ್ರೋನ್‌(Omicron) ಭೀತಿ ನಡುವೆ ಕೊರೋನಾ ಮತ್ತೆ ವ್ಯಾಪಿಸುತ್ತಿದ್ದು, ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಜನರು ಕೂಡಲೇ ಎಚ್ಚೆತ್ತುಕೊಂಡು ಕಡ್ಡಾಯವಾಗಿ ಮಾರ್ಗಸೂಚಿ ಪಾಲಿಸಬೇಕಿದೆ ಎಂದು ತಿಳಿಸಿದರು.

ಲ್ಯಾಬ್‌ಗೆ ನಿತ್ಯ 300 ಮಾದರಿ

ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿನೋಮ್‌ ಸೀಕ್ವೆನ್ಸ್‌ ಲ್ಯಾಬ್‌ಗೆ ನಿತ್ಯ 10 ಜನರ ಮಾದರಿ ಕಳುಹಿಸಲಾಗುತ್ತಿದ್ದು, ಅದನ್ನು ನಿತ್ಯ 300ಕ್ಕೆ ಹೆಚ್ಚಿಸಲಾಗಿದೆ. ವಿಮಾನ ನಿಲ್ದಾಣ ಮತ್ತಿತರ ಕಡೆಗಳಲ್ಲಿ ಪಾಸಿಟಿವ್‌ ಪ್ರಕರಣ ಹೆಚ್ಚಾಗಿದ್ದರಿಂದ ಲ್ಯಾಬ್‌ಗೆ ನಿತ್ಯ 300 ಜನರ ಗಂಟಲು ಮಾದರಿ ಕಳುಹಿಸುತ್ತಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದರು.

Corona Update: ಕರ್ನಾಟಕದಲ್ಲಿ ಕೊರೋನಾ ಏರಿಕೆ, ಇಲ್ಲಿದೆ ಡಿ.28ರ ಅಂಕಿ-ಸಂಖ್ಯೆ

ನೈಟ್‌ ಕರ್ಫ್ಯೂ(Night Curfew) ಜಾರಿ ಆಗಿದ್ದು, ಈ ಬಗ್ಗೆ ಪೊಲೀಸ್‌ ಇಲಾಖೆ ಗಮನಹರಿಸಲಿದೆ. ನೈಟ್‌ ಕಫä್ರ್ಯ ಮೇಲೆ ನಿಗಾ ವಹಿಸಲು ಪೊಲೀಸರಿಗೆ ಹೋಂ ಗಾರ್ಡ್ಸ್, ಬಿಬಿಎಂಪಿ ಮಾರ್ಷಲ್‌ಗಳು ಸಹಕರಿಸಲಿದ್ದಾರೆ. ಜ.7ರ ನಂತರದ ನೈಟ್‌ ಕರ್ಫ್ಯೂ ಮುಂದುವರಿಯಲಿದೆಯೋ, ಇಲ್ಲವೋ ಎಂಬುದರ ಬಗ್ಗೆ ಸರ್ಕಾರ ನಿರ್ಧರಿಸುತ್ತದೆ. ಮಕ್ಕಳಿಗೆ ಲಸಿಕೆ ನೀಡಲು ಅನುಮತಿ ಸಿಕ್ಕಿದ್ದು, ಅಧಿಕಾರಿಗಳು ಒತ್ತಾಯ ಮಾಡುವವರೆಗೂ ಕಾಯದೆ ಜನರು ಸ್ವಯಂ ಪ್ರೇರಿತವಾಗಿ ಲಸಿಕೆ ಪಡೆಯಬೇಕು. ಈಗಾಗಲೇ 15-18 ವರ್ಷ ಮಕ್ಕಳು ಎಷ್ಟಿದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಸುದ್ದಿಗಾರರ ಪ್ರಶ್ನೆಗೆ ಗೌರವ್‌ ಗುಪ್ತಾ ಉತ್ತರಿಸಿದರು.

ಸಕ್ರಿಯ ಕೇಸ್‌: ಬೆಂಗ್ಳೂರು ದೇಶಕ್ಕೇ ನಂ.1..!

ದೇಶದ(India) ನಗರ ಮತ್ತು ಮಹಾನಗರಗಳ ಪೈಕಿ ಸದ್ಯ ಅತಿ ಹೆಚ್ಚು ಕೊರೋನಾ ಸಕ್ರಿಯ ಸೋಂಕಿತರಿರುವ ನಗರ ನಮ್ಮ ಸಿಲಿಕಾನ್‌ ಸಿಟಿ ಬೆಂಗಳೂರು! ಹೌದು. ದೆಹಲಿ, ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್‌ಗೆ ಹೋಲಿಸಿದರೆ ಅತಿ ಹೆಚ್ಚು 5,866 ಕೊರೋನಾ ಸಕ್ರಿಯ ಸೋಂಕಿತರು ಬೆಂಗಳೂರಿನಲ್ಲಿದ್ದು(Bengaluru), ಆಸ್ಪತ್ರೆ ಮತ್ತು ಮನೆಗಳಲ್ಲಿ ಚಿಕಿತ್ಸೆ/ ಆರೈಕೆಯಲ್ಲಿದ್ದಾರೆ. ಅಲ್ಲದೆ, ಕಳೆದ ಒಂದು ವಾರದಿಂದ ಹೊಸ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಈ ಅವಧಿಯಲ್ಲಿ ದೆಹಲಿ, ಹೈದರಾಬಾದ್‌, ಚೆನ್ನೈಗಿಂತಲೂ ಹೆಚ್ಚು ಜನರಿಗೆ ಬೆಂಗಳೂರಿನಲ್ಲಿ ಸೋಂಕು ತಗುಲಿದೆ.