Covid19| ಬೆಂಗ್ಳೂರಲ್ಲಿ ಸೋಂಕು, ಸಾವು 2ನೇ ಅಲೆಯ ಕನಿಷ್ಠಕ್ಕಿಳಿಕೆ
* ಮಾರ್ಚ್‌ನಲ್ಲಿ ನಿತ್ಯ 300ಕ್ಕೂ ಅಧಿಕ ಮಂದಿ ಕೊರೋನಾಗೆ ಬಲಿ
* ಇದೀಗ ದಿನಕ್ಕೆ ಗರಿಷ್ಠವೆಂದರೆ 7 ಮಂದಿ ಸಾವು
* 1.31 ಕೋಟಿ ಡೋಸ್ ಲಸಿಕೆ
ಸಂಪತ್ ತರೀಕೆರೆ
ಬೆಂಗಳೂರು(ನ.04): ಕೋವಿಡ್(Covid19) ನಿಯಮಗಳ ಕಟ್ಟುನಿಟ್ಟಿನ ಪಾಲನೆ, ತೀವ್ರಗತಿಯಲ್ಲಿ ನಡೆದ ಲಸಿಕೆ ನೀಡಿಕೆ ಅಭಿಯಾನದ(Campaign) ಪರಿಣಾಮ ಕಳೆದ ಒಂದು ತಿಂಗಳಿನಿಂದ ಕೊರೋನಾ(Coronavirus) ಸೋಂಕು ಮತ್ತು ಸಾವಿನ ಪ್ರಕರಣಗಳು ಕಳೆದೊಂದು ತಿಂಗಳಿನಿಂದ ಗಣನೀಯವಾಗಿ ಇಳಿಕೆಯಾಗಿದೆ.
ಎರಡನೇ ಅಲೆಯಲ್ಲಿ(second wave) ಸೋಂಕಿನ ಪ್ರಮಾಣ ಹೆಚ್ಚಾಗಿ, ಸಾವು(Death)-ನೋವಿನ ಪ್ರಮಾಣ ಹೆಚ್ಚಾದ್ದರಿಂದ ಆತಂಕಗೊಂಡ ಜನರು ಲಸಿಕೆ(Vaccine) ಹಾಕಿಸಿಕೊಂಡಿರುವುದು, ಜತೆಗೆ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಪೂರೈಕೆ ಕಾರಣದಿಂದ ಕೊರೋನಾ ಅಬ್ಬರ ಸಾಕಷ್ಟು ಕಡಿಮೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ನಗರದಲ್ಲಿ ಅ.1ರಿಂದ 31ರ ವರೆಗೆ 5438 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದರೆ, 125 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸೆಪ್ಟೆಂಬರ್‌ನಲ್ಲಿ ಬರೋಬ್ಬರಿ 8591 ಪ್ರಕರಣಗಳು ಪತ್ತೆಯಾಗಿದ್ದು, 162 ಮಂದಿ ಮೃತಪಟ್ಟಿದ್ದರು.
ಕೋವಿಡ್ ಎರಡನೇ ಅಲೆ ತೀವ್ರಗೊಂಡಿದ್ದ ಮೇ ತಿಂಗಳಲ್ಲಿ ನಿತ್ಯ 300ಕ್ಕೂ ಹೆಚ್ಚು ಸೋಂಕಿತರು ಸಾವನ್ನಪ್ಪುತ್ತಿದ್ದರು. ಪ್ರಸ್ತುತ ನಗರದಲ್ಲಿ(Bengaluru) ಸಾವಿನ ಸಂಖ್ಯೆ ಕಡಿಮೆಯಾಗಿದ್ದು, ತಿಂಗಳಿಗೆ 150ಕ್ಕಿಂತ ಕಡಿಮೆ ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ. ಕೋವಿಡ್ ನಿಯಮಗಳ ಕಟ್ಟುನಿಟ್ಟಿನ ಪಾಲನೆಯಿಂದಾಗಿ ಈಗ ಸೋಂಕಿತ ಪ್ರಕರಣ ಮತ್ತು ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ದಿನಕ್ಕೆ ಎರಡಕ್ಕಿಂತ ಕಡಿಮೆ ಸಾವಿನ ಪ್ರಕರಣಗಳು ದಾಖಲಾಗುತ್ತಿವೆ. ಮೇ 23ರಂದು ಅತ್ಯಧಿಕವೆಂದರೆ 362 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದರು. ಇದೀಗ ದಿನಕ್ಕೆ 7ಕ್ಕಿಂತ ಹೆಚ್ಚು ಸಾವು ಸಂಭವಿಸಿಲ್ಲ.
Corona Update: ಕರ್ನಾಟಕದಲ್ಲಿ ಕೊರೋನಾ ಏರಿಳಿತ, ಇಲ್ಲಿದೆ ನ.03ರ ಅಂಕಿ-ಸಂಖ್ಯೆ
ಮೃತರಲ್ಲಿ ಹಿರಿಯರೇ ಹೆಚ್ಚು:
ನಗರದಲ್ಲಿ ಕೋವಿಡ್ ಆರಂಭವಾದಾಗಿನಿಂದ ಈವರೆಗೆ 16,286 ಮಂದಿ ಮೃತಪಟ್ಟಿದ್ದು, ಈ ಪೈಕಿ 10,308 ಮಂದಿ ಪುರುಷರು(Male) ಮತ್ತು 5902 ಮಹಿಳೆಯರಿದ್ದಾರೆ(Female). ಸೋಂಕಿನಿಂದ ಬಲಿಯಾದವರಲ್ಲಿ ಅತೀ ಹೆಚ್ಚು ಮಂದಿ ಹಿರಿಯ ನಾಗರಿಕರೇ(Senior Citizens) ಇದ್ದಾರೆ. ಆರೋಗ್ಯ ಇಲಾಖೆ(Department of Health) ಮಾಹಿತಿಯಂತೆ 60 ವರ್ಷ ಮೇಲ್ಪಟ್ಟ 9600 ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
50 ರಿಂದ 59 ವರ್ಷ ವಯೋಮಿತಿಯ 2023 ಪುರುಷರು, 1328 ಮಹಿಳೆಯರು ಸೇರಿ 3,351 ಮಂದಿ ಮೃತಪಟ್ಟಿದ್ದಾರೆ. 40 ರಿಂದ 49 ವರ್ಷದೊಳಗಿನ 2,045 ಜನರು ಸೋಂಕಿಗೆ ಬಲಿಯಾಗಿದ್ದಾರೆ. 30 ರಿಂದ 39 ವರ್ಷದೊಳಗಿನ 656 ಪುರುಷರು, 296 ಮಹಿಳೆಯರು ಹಾಗೂ 20 ರಿಂದ 29 ವರ್ಷ ವಯೋಮಿತಿಯ 172 ಪುರುಷರು, 113 ಮಹಿಳೆಯರು ಸಾವನ್ನಪ್ಪಿದ್ದಾರೆ. 19 ವರ್ಷದೊಳಗಿನ 31 ಬಾಲಕರು, 18 ಬಾಲಕಿಯರು ಸೇರಿ 49 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಬಿಬಿಎಂಪಿ(BBMP) ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದರು.
ಪಾಸಿಟಿವಿಟಿ ದರ ಇಳಿಕೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಲ್ಲಿ ಸೋಂಕಿತ ಪ್ರಕರಣಗಳಲ್ಲಿ ಭಾರೀ ಇಳಿಕೆಯಾಗಿದೆ. ಎಂಟು ವಲಯಗಳಲ್ಲಿ ನಿತ್ಯ ಸರಾಸರಿ ಶೇ.35ಕ್ಕೂ ಕಡಿಮೆ ಸೋಂಕಿತ ಪ್ರಕರಣಗಳೂ ಪತ್ತೆಯಾಗುತ್ತಿವೆ. ಮಹದೇವಪುರ ವಲಯದಲ್ಲಿ 29 ಸೋಂಕಿತ ಪ್ರಕರಣ(ಶೇ.0.40) ಪತ್ತೆಯಾಗಿದೆ. ಯಲಹಂಕ-15(ಶೇ.0.35), ಆರ್.ಆರ್.ನಗರ-9 (ಶೇ.0.33), ದಕ್ಷಿಣ ವಲಯ-20 (ಶೇ.0.31), ಪೂರ್ವ ವಲಯ-21 (ಶೇ.0.30), ಬೊಮ್ಮನಹಳ್ಳಿ-19 (ಶೇ.0.27), ದಾಸರಹಳ್ಳಿ-3 (ಶೇ.0.20) ಮತ್ತು ಪೂರ್ವ ವಲಯದಲ್ಲಿ 10 (ಶೇ.0.16) ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
1.31 ಕೋಟಿ ಡೋಸ್ ಲಸಿಕೆ
ಈವರೆಗೆ ನಗರದಲ್ಲಿ ಒಟ್ಟು 1.31 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. 73,95,569 ನಾಗರಿಕರು, 2,09,075 ಆರೋಗ್ಯ ಕಾರ್ಯಕರ್ತರು ಮತ್ತು 3,81,258 ಮುಂಚೂಣಿ ಕಾರ್ಯಕರ್ತರು ಸೇರಿದಂತೆ ಒಟ್ಟು 79.85 ಲಕ್ಷ ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಅದೇ ರೀತಿ 47,04,981 ನಾಗರಿಕರು, 1,64,472 ಆರೋಗ್ಯ ಕಾರ್ಯಕರ್ತರು, 3,01,542 ಮುಂಚೂಣಿ ಕಾರ್ಯಕರ್ತರು ಸೇರಿದಂತೆ 51.7 ಲಕ್ಷ ಜನರು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.