ನಾರಾಯಣ ಹೆಗಡೆ

ಹಾವೇರಿ(ಏ.26):  ಕೈಮುಗಿದು ಬೇಡುತೀವಿ ಮನೆ ಬಿಟ್ಟು ಯಾರೂ ಹೊರಗಡೆ ಹೋಗಬ್ಯಾಡ್ರೋ, ಇರೋದೊಂದು ಜೀವ ಕಳಕೊಂಡ ಮ್ಯಾಲೆ ಮತ್ತೆ ಸಿಗುವುದೇನ್ರೋ. ಜೀವದ ಭಯ ತೊರೆದು ಪೌರ ಕಾರ್ಮಿಕರು ದುಡಿಯಾಕ ನಿಂತಾರೋ, ಕೂಳು ನೀರಿಲ್ದೆ ಬಿಸಿಲಾಗ ನಿಂತಾರ ಖಾಕಿ ಬಟ್ಟೆಯವರು, ಬುದ್ಧಿವಂತರು ನಾವೆಲ್ಲ ಸ್ವಲ್ಪ ತಿಳ್ಕೊಂಡು ನಡಿಬೇಕ್ರೋ, ನಮ್ಮನ್ನು ಉಳಿಸಾಕ ಎಷ್ಟೋ ವೈದ್ಯರು ಪ್ರಾಣ ಬಿಟ್ಟಾರೊ...

ನಗರದ ಜನತೆ ಇನ್ನೂ ನಿದ್ದೆಯಿಂದ ಮೇಲೇಳುವ ಮುನ್ನವೇ ನಸುಕಿನಲ್ಲೇ ಮನೆ ಎದುರು ಈ ಹಾಡು ಜನರನ್ನು ಎಬ್ಬಿಸುತ್ತಿದೆ. ನಿದ್ರೆಯಿಂದ ಮಾತ್ರವಲ್ಲ31 ವಾರ್ಡ್‌ಗಳಲ್ಲಿ ಜಾಗೃತಿ ನಗರದಲ್ಲಿ ನಿತ್ಯವೂ ಮನೆಮನೆ ಕಸ ಸಂಗ್ರಹಣೆ ಕಾರ್ಯ ಹಲವು ವ, ಕೊರೋನಾ ವೈರಸ್‌ನಿಂದ ಆಗುತ್ತಿರುವ ಅಪಾಯದ ಬಗ್ಗೆಯೂ ಈ ಹಾಡು ಜನರನ್ನು ಎಚ್ಚರಿಸುತ್ತಿದೆ. ಇದು ಇಲ್ಲಿಯ ಕೊರೋನಾ ವಾರಿಯರ್ಸ್‌ ಎನಿಸಿರುವ ಪೌರಕಾರ್ಮಿಕರು ಕಸ ಸಂಗ್ರಹಣೆಗೆ ಬರುವ ವೇಳೆ ಜಾನಪದ ಶೈಲಿಯ ಈ ಹಾಡನ್ನು ಹಾಕಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಪರಿಯಿದು.

'ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ಬಗ್ಗೆ ಸುಳ್ಳು ಸುದ್ದಿ ಹರಡಿದ್ರೆ ಕಠಿಣ ಕ್ರಮ'

12 ಆಟೋ ಟಿಪ್ಪರ್‌ ಮೂಲಕ ನಗರದ 31 ವಾರ್ಡ್‌ಗಳಲ್ಲಿ ಸಂಚರಿಸಿ ಮನೆಗಳಿಂದ ಹಸಿ ಹಾಗೂ ಒಣಗಿದ ಕಸ ಸಂಗ್ರಹಿಸಲಾಗುತ್ತಿದೆ. ಕಳೆದ ಒಂದು ತಿಂಗಳಿಂದ ಐದಾರು ಕೊರೋನಾ ಜಾಗೃತಿ ಹಾಡುಗಳನ್ನು ಪ್ರಸಾರ ಮಾಡಲಾಗುತ್ತಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಜನರು ಮನೆಯಲ್ಲೇ ಇದ್ದು, ಸಾಮಾಜಿಕ ಅಂತರದ ನಿಯಮ ಪಾಲಿಸಿದರೆ ಮಾತ್ರ ಕೊರೋನಾ ಹೊಡೆದೋಡಿಸಲು ಸಾಧ್ಯ. ಅದಕ್ಕಾಗಿ ಸರ್ಕಾರದ ಸೂಚನೆಯನ್ನು ಎಲ್ಲರೂ ಪಾಲನೆ ಮಾಡಬೇಕು. ನಮ್ಮ ಪೌರಕಾರ್ಮಿಕರ ಸೇವೆ ನಿಜಕ್ಕೂ ಶ್ಲಾಘನೀಯ. ಎಲ್ಲರೂ ಮನೆಯಲ್ಲೇ ಇದ್ದು ಕೊರೋನಾ ವಿರುದ್ಧ ಹೋರಾಡುತ್ತಿದ್ದರೆ, ಪೌರಕಾರ್ಮಿಕರು ನಿತ್ಯವೂ ನಗರದ ಸ್ವಚ್ಛತೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಸಾರ್ವಜನಿಕರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

21 ಮಹಿಳೆಯರು ಸೇರಿದಂತೆ 115 ಪೌರಕಾರ್ಮಿಕರು ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆಲ್ಲ ಸುರಕ್ಷತಾ ಸಾಮಗ್ರಿ ನೀಡಲಾಗಿದ್ದು, ಮಾಸ್ಕ್‌, ಹ್ಯಾಂಡ್‌ ಗ್ಲೌಸ್‌, ಶೂ, ರಿಫ್ಲೆಕ್ಟರ್‌ ಜಾಕೆಟ್‌, ಸ್ಯಾನಿಟೈಸರ್‌ಗಳನ್ನು ನೀಡಿದ್ದೇವೆ. ಸ್ವಚ್ಛತೆ ಜತೆಗೆ ನಗರದಲ್ಲಿ ರಾಸಾಯನಿಕ ಸಿಂಪಡಣೆಯನ್ನು ಪೌರಕಾರ್ಮಿಕರು ಮಾಡುತ್ತಿದ್ದಾರೆ ಎಂದು ನಗರಸಭೆ ಪರಿಸರ ಅಭಿಯಂತರ ಚಂದ್ರಕಾಂತ ಗುಡ್ಡನವರ ಮಾಹಿತಿ ನೀಡಿದ್ದಾರೆ.

ಕಸ ಸಂಗ್ರಹದಲ್ಲಿ ಇಳಿಕೆ:

ಲಾಕ್‌ಡೌನ್‌ಗಿಂತ ಮೊದಲು ನಗರದ 31 ವಾರ್ಡ್‌ಗಳಲ್ಲಿ ನಿತ್ಯ 34-35 ಟನ್‌ ಕಸ ತ್ಯಾಜ್ಯ ಸಂಗ್ರಹವಾಗುತ್ತಿತ್ತು. ಈಗ ಸುಮಾರು 25 ಟನ್‌ ಕಸ ಸಂಗ್ರಹವಾಗುತ್ತಿದೆ. ಹೋಟೆಲ್‌, ವಸತಿಗೃಹ, ಡಾಬಾ, ತಳ್ಳುಗಾಡಿ, ಎಗ್‌ರೈಸ್‌ ಸೆಂಟರ್‌ಗಳೆಲ್ಲ ಬಂದ್‌ ಇರುವುದರಿಂದ ಕಸ ಸಂಗ್ರಹಣೆ ಕಡಿಮೆಯಾಗಿದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.

ಪೌರಕಾರ್ಮಿಕರ ಸುರಕ್ಷತೆಗೂ ನಾವು ಆದ್ಯತೆ ನೀಡಿದ್ದೇವೆ. ಮಾಸ್ಕ್‌, ಸ್ಯಾನಿಟೈಸರ್‌ ವ್ಯವಸ್ಥೆ ಮಾಡಿದ್ದೇವೆ. ಪೌರಕಾರ್ಮಿಕರು ಗಟ್ಟಿಯಾಗಿದ್ದರೆ ಮಾತ್ರ ನಮ್ಮ ಪರಿಸರ, ಆರೋಗ್ಯ ಸರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಪೌರಕಾರ್ಮಿಕರ ಸೇವೆಗೆ ನಗರದ ಜನತೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹಾವೇರಿ ಪೌರಾಯುಕ್ತ ಬಸವರಾಜ ಜಿಡ್ಡಿ ಹೇಳಿದ್ದಾರೆ.