ತುಮಕೂರು(ಜೂ.07): ಅಪಘಾತ ಸಂಭವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೋನಾ ವಾರಿಯರ್‌, ಕಿರಿಯ ಆರೋಗ್ಯ ಸಹಾಯಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೊರೋನಾ ವಾರಿಯರ್‌ ಆದ ದೊಡ್ಡ ಅಗ್ರಹಾರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ಮಹೇಂದ್ರ (30) ಮೃತ ವ್ಯಕ್ತಿ. ಮೇ 27ರಂದು ಶಿರಾದಲ್ಲಿ ಕೋವಿಡ್‌ ಸರ್ವೇ ಕಾರ್ಯ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಹಿರಿಯೂರು ತಾಲೂಕು ಪಟ್ರಹಳ್ಳಿಗೆ ತೆರಳುವ ಸಮಯದಲ್ಲಿ ಲಾರಿಯೊಂದು ಅಡ್ಡಬಂದ ಪರಿಣಾಮ ಅಪಘಾತ ಸಂಭವಿಸಿತ್ತು.

ಕಟೀಲು ದೇವಳ, ಉಡುಪಿ ಕೃಷ್ಣ ಮಠ ನಾಳೆ ತೆರೆಯುವುದಿಲ್ಲ

ಗಂಭೀರ ಗಾಯಗೊಂಡು ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಡಾ.ಅಬ್ಜಲ್‌ ಉರ್‌ ರೆಹಮಾನ್‌, ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಾಥ್‌ ಸೇರಿದಂತೆ ಎಲ್ಲಾ ವೈದ್ಯರು, ಸಿಬ್ಬಂದಿ ವರ್ಗದವರು ಸಂತಾಪ ವ್ಯಕ್ತಪಡಿಸಿದ್ದಾರೆ.