ದಾವಣಗೆರೆ (ಜೂ. 13): ಪ್ರಾಣವನ್ನೇ ಒತ್ತೆಯಿಟ್ಟು ಹೋರಾಡುತ್ತಿರುವ ಕೊರೋನಾ ವಾರಿಯ​ರ್ಸ್‌ಗೆ ಮನೆಗಳ ಮಾಲೀಕರು ಮನೆ ಖಾಲಿ ಮಾಡುವಂತೆ ಒತ್ತಡ ಹೇರುತ್ತಿರುವುದು ಆರೋಗ್ಯ ಸಿಬ್ಬಂದಿ ಕಣ್ಣಲ್ಲಿ ನೀರು ತರಿಸುತ್ತಿದೆ.

ನಗರದ ಜಿಲ್ಲಾ ಕೋವಿಡ್‌-19 ಆಸ್ಪತ್ರೆಯಲ್ಲಿ ಕೊರೋನಾ ವಾರಿಯ​ರ್ಸ್‌ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಬಹುತೇಕರು ಬಾಡಿಗೆ ಮನೆಗಳಲ್ಲಿ ಪುಟ್ಟಬದುಕು ಕಟ್ಟಿಕೊಂಡವರು. ಕಳೆದ 2 ತಿಂಗಳಿನಿಂದಲೂ ವೈರಸ್‌ ವಿರುದ್ಧ ನಿಸ್ವಾರ್ಥದಿಂದ ದುಡಿಯುತ್ತಿದ್ದಾರೆ. ಇಂತಹವರಿಗೆ ಮನೆ ಖಾಲಿ ಮಾಡುವಂತೆ ಮಾಲೀಕರು ಒತ್ತಡ ಹೇರುತ್ತಿದ್ದಾರೆ ಎಂದು ಸಿಬ್ಬಂದಿ ಮಾಧ್ಯಮಗಳ ಸಮ್ಮುಖ ಕಣ್ಣೀರಿಟ್ಟರು.

ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಲ್ವರು ಕೊರೋನಾ ವಾರಿಯ​ರ್‍ಸ್ಗೆ ವರದಿಯಲ್ಲಿ ಪಾಸಿಟಿವ್‌ ಬಂದಿತ್ತು. ಈ ಹಿನ್ನೆಲೆ ಮನೆಗಳ ಮಾಲೀಕರು ತಕ್ಷಣವೇ ಮನೆಗಳನ್ನು ಖಾಲಿ ಮಾಡುವಂತೆ ಇನ್ನಿಲ್ಲದ ಒತ್ತಡ ಹೇರುತ್ತಿದ್ದಾರೆ. 2 ದಶಕದಿಂದಲೂ ಕಾಯಂ ನೌಕರಿ ಇಲ್ಲದೇ, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಸಿಬ್ಬಂದಿ ತಮ್ಮ ಮನೆಗಳ ಮಾಲೀಕರ ಕಿರುಕುಳದ ಬಗ್ಗೆ ಅಳಲು ತೋಡಿಕೊಂಡರು.

ಕೇರಳದಲ್ಲಿ ಮಾಸ್ಕ್‌, ಸಾಮಾಜಿಕ ಅಂತರ ಇನ್ನೂ 1 ವರ್ಷ ಕಡ್ಡಾಯ!

ಆಸ್ಪತ್ರೆಯ ‘ಡಿ’ ಗ್ರೂಪ್‌ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ತಮ್ಮ ಜೀವಕ್ಕೆ ಭದ್ರತೆಯೇ ಇಲ್ಲ. ಕೆಲಸಕ್ಕೂ ಭದ್ರತೆ ಕಲ್ಪಿಸಿಲ್ಲ. ಇನ್ನು ನೆಮ್ಮದಿಯಾಗಿ ಬಾಳುವೆ ನಡೆಸಲು ಮನೆಯೂ ಇಲ್ಲ. ನಾವು ಕೊರೋನಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿ ನಾಲ್ವರಿಗೆ ಸೋಂಕು ಇದೆ ಎಂಬ ಕಾರಣಕ್ಕೆ ಮನೆಗಳನ್ನು ಖಾಲಿ ಮಾಡುವಂತೆ ಮನೆ ಮಾಲೀಕರು ಒತ್ತಡ ಹೇರುತ್ತಿದ್ದು, ಬಲವಂತ ಮಾಡುತ್ತಿದ್ದಾರೆ. ಹೀಗಾದರೆ ನಾವು ಏನು ಮಾಡಬೇಕು ಎಂದು ಅಸಹಾಯಕರಾಗಿ ಪ್ರಶ್ನಿಸಿದರು.

 

ಜಿಲ್ಲಾ ದಂಡಾಧಿಕಾರಿಗಳೂ ಆದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಈ ವಿಷಯ ಗಂಭೀರವಾಗಿ ಪರಿಗಣಿಸಿಸಬೇಕು. ನ್ಯಾಯ ಕೊಡಿಸುವ ಕೆಲಸ ಮಾಡಬೇಕಾಗಿದೆ. ಸದ್ಯಕ್ಕೆ ಮನೆ ಮಾಲೀಕರೂ ಕೊರೋನಾ ವಾರಿಯ​ರ್‍ಸ್ ನಿಸ್ವಾರ್ಥ ಸೇವೆ ಗೌರವಿಸಬೇಕು. ಆ ಮೂಲಕ ಮನೆ ಖಾಲಿ ಮಾಡಿಸುವಂಥ ಕಿರುಕುಳ, ಒತ್ತಡ ಹೇರುವುದು ನಿಲ್ಲಿಸಲಿ ಎಂಬುದು ಸಾರ್ವಜನಿಕರ ಒತ್ತಾಯ.