ಸದ್ಯದಲ್ಲೇ ಕೊರೋನಾ ಲಸಿಕೆ ಲಭ್ಯವಾಗುವ ನಿರೀಕ್ಷೆಯಿದೆ: ಶಾಸಕ ರೇಣುಕಾಚಾರ್ಯ
ಕೊರೋನಾ ಸೋಂಕಿಗೆ ಸದ್ಯದಲ್ಲೇ ಲಸಿಕೆ ಸಿಗುವ ವಿಶ್ವಾಸವನ್ನು ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಹೊನ್ನಾಳಿ(ಆ.12): ಕೊರೋನಾಗೆ ಲಸಿಕೆ ಭಾರತದಲ್ಲೇ ತಯಾರಾಗುತ್ತಿದೆ. ಈಗಾಗಲೇ ಪ್ರಾಯೋಗಿಕವಾಗಿ ಪರೀಕ್ಷೆಗಳು ನಡೆಯುತ್ತಿದ್ದು ಸದ್ಯದಲ್ಲೇ ಲಸಿಕೆ ಜನರ ಕೈಸೇರುವ ನಿರೀಕ್ಷೆ ಇದೆ. ಭಾರತ ವಿಶ್ವಕ್ಕೆ ಮಾದರಿಯಾಗಲಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಸಾಲಬಾಳು, ಕೊಡತಾಳು, ಮಾದಾಪುರ, ಮಾಚಗೊಂಡನಹಳ್ಳಿ, ಚಿನ್ನಿಕಟ್ಟೆಗ್ರಾಮಗಳಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಉದ್ಘಾಟಿಸಿ ಹಾಗೂ ಕೆಲವೊಂದಕ್ಕೆ ಭೂಮಿ ಪೂಜೆ ನೆರವೇರಿಸಿ ಶಾಸಕ ರೇಣುಕಾಚಾರ್ಯ ಮಾತನಾಡಿದರು.
ಪ್ರಧಾನಿ ಮೋದಿ ಆತ್ಮನಿರ್ಭರ ಭಾರತ ಘೋಷಣೆ ಮಾಡಿದ್ದು, ಭಾರತದಲ್ಲೇ ಕೊರೋನಾ ಲಸಿಕೆ ತಯಾರಾಗುತ್ತಿದ್ದು ಇತರರಿಗೆ ಸ್ಪೂರ್ತಿಯಾಗಿದೆ. ಈಗಾಗಲೇ ಸಾಕಷ್ಟು ಕ್ಷೇತ್ರದಲ್ಲಿ ಭಾರತೀಯತೆ ಎದ್ದು ಕಾಣುತ್ತಿದ್ದು ಔಷಧಿ ಕ್ಷೇತ್ರದಲ್ಲಿಯೂ ಉತೃಷ್ಟದ ಮಟ್ಟದಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ. ಕೊರೋನಾ ಹೋಗಲಾಡಿಸುವಲ್ಲಿ ಭಾರತ ದಿಟ್ಟಹೆಜ್ಜೆ ಇಡಲಿದೆ ಎಂದು ನುಡಿದರು.
ಜಾಗೃತಿ ಕೊರತೆಯಿಂದಾಗಿ ಕೊರೋನಾ ಸೋಂಕು ಹೆಚ್ಚಳ
ಕೆಲ ಕಿಡಿಗೇಡಿಗಳು ಮೂರು ಲಕ್ಷ ರೂಪಾಯಿ ಕೊಡ್ತಾರೆಂದು ಕೊರೋನಾ ಪಾಸಿಟಿವ್ ಇಲ್ಲದವರನ್ನು ಕರೆದುಕೊಂಡು ಹೋಗುತ್ತಿದ್ದಾರೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಮೂರು ಲಕ್ಷವಿರಲಿ ಮೂರು ಪೈಸಾ ಕೂಡಾ ಯಾರಿಗೂ ಕೊಡುವುದಿಲ್ಲಾ. ಈ ರೀತಿಯ ಅಪಪ್ರಚಾರಕ್ಕೆ ಯಾರೂ ಕಿವಿಕೊಡಬೇಡಿ, ಆತ್ಮವಿಶ್ವಾಸದಿಂದ ಕೊರೋನಾ ಗೆಲ್ಲೋಣ ಎಂದು ತಿಳಿಸಿದರು.
ತಾಲೂಕಿನ ಚಿನ್ನಕಟ್ಟೆಗ್ರಾಮದಲ್ಲಿ 97 ಲಕ್ಷ ರೂ, ಕೊಡತಾಳು ಗ್ರಾಮದಲ್ಲಿ 20 ಲಕ್ಷ ರೂ, ಮಾದಾಪುರ ಗ್ರಾಮದಲ್ಲಿ 80 ಲಕ್ಷ, ಮಾಚಗೊಂಡನಗಹಳ್ಳಿಯಲ್ಲಿ 15 ಲಕ್ಷ, ಸಾಲಬಾಳು ಗ್ರಾಮದಲ್ಲಿ 10 ಲಕ್ಷ ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಶಾಸಕರು ಉದ್ಘಾಟಿಸಿದರು.
ಜಿಪಂ ಅಧ್ಯಕ್ಷೆ ದೀಪಾ ಜಗದೀಶ್, ಜಿಪಂ ಸದಸ್ಯೆ ಉಮಾರಮೇಶ್, ನ್ಯಾಮತಿ ತಾಪಂ ಅಧ್ಯಕ್ಷ ಎಸ್.ಪಿ.ರವಿಕುಮಾರ್, ಉಪಾಧ್ಯಕ್ಷ ಮರಿಕನ್ನಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಅಜಯ್ ಕುಮಾರ್ ರೆಡ್ಡಿ, ಇಲಾಖೆ ಅಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಇದ್ದರು.