ಉಡುಪಿ(ಮೇ 30): ಕೊರೋನಾ ಸೋಂಕು ಇದೆ ಎಂದು ಹೇಳಲಾಗಿದ್ದ ಉಡುಪಿ ಜಿಲ್ಲೆಯ 3 ಮಂದಿಗೆ ಇದೀಗ ಕೊರೋನಾ ಇಲ್ಲ ಎನ್ನುವುದು ಸಾಬೀತಾಗಿದೆ. ಇದು ಮಂಗಳೂರಿನ ಕೊವೀಡ್‌ ಪರೀಕ್ಷಾ ಕೇಂದ್ರವೊಂದು ಮಾಡಿದ ಎಡವಟ್ಟು ಎಂದು ಹೇಳಲಾಗುತ್ತಿದೆ.

ಈ ಹಿಂದೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಚಿತ್ರದುರ್ಗದ ಕ್ಯಾನ್ಸರ್‌ ರೋಗಿ ಯುವತಿಗೂ ಕೊರೋನಾ ಇದೆ ಎಂದು ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯ ಪರೀಕ್ಷಾ ಕೇಂದ್ರ ವರದಿ ನೀಡಿತ್ತು, ಅಕೆಯನ್ನು ಮತ್ತೆ 2 ಬಾರಿ ಪರೀಕ್ಷೆ ಮಾಡಿದಾಗ 2 ಬಾರಿಯೂ ಆಕೆಗೆ ಕೊರೋನಾ ಇಲ್ಲ ಎಂಬ ವರದಿ ಬಂದಿತ್ತು. ಇದೀಗ ಕಾರ್ಕಳದ ತುಂಬು ಗರ್ಭಿಣಿಗೆ ಮತ್ತು ಉಡುಪಿ ಜಿಪಂ ಸಿಬ್ಬಂದಿಗೆ ಕೊರೋನಾ ಇದೆ ಎಂದು ಇದೇ ಪರೀಕ್ಷಾ ಕೇಂದ್ರ ಮೇ 24ರಂದು ವರದಿ ನೀಡಿತ್ತು.

ಕೊರೋನಾ ಹೋರಾಟ ಬಿಟ್ಟು ಅಧಿಕಾರಕ್ಕೆ ಬಿಜೆಪಿ ಕಚ್ಚಾಟ: ಕಾಂಗ್ರೆಸ್ ಕಿಡಿ

ಆದರೆ ಅವರಿಬ್ಬರಿಗೂ ಸೋಂಕಿನ ಮೂಲ ಯಾವುದು ಎಂಬುದು ಪತ್ತೆಯಾಗಿರಲಿಲ್ಲ. ಆದ್ದರಿಂದ ಅವರನ್ನು ಮತ್ತೆ 2 ಬಾರಿ ಪರೀಕ್ಷೆಗೊಳಪಡಿಸಲಾಗಿದ್ದು, ಅವೆರಡೂ ಪರೀಕ್ಷೆಗಳು ನೆಗೆಟಿವ್‌ ಬಂದಿವೆ. ಮಾತ್ರವಲ್ಲ ಈ ಇಬ್ಬರ ಮನೆಯ ಪರಿಸರವನ್ನು ಜಿಲ್ಲಾಡಳಿತ ಕಂಟೈನ್ಮೆಂಟ್‌ ವಲಯ ಎಂದು ಘೋಷಿಸಿ, ಅಲ್ಲಿನ ಜನರ ಓಡಾಟಕ್ಕೆ ನಿರ್ಬಂಧಗಳನ್ನು ವಿಧಿಸಿತ್ತು. ಇಡೀ ಜಿಪಂ ಕಚೇರಿಯನ್ನೇ ಪ್ರತಿದಿನ ಸ್ಯಾನಿಟೈಸ್‌ ಮಾಡಲಾಗಿತ್ತು. ಇದರಿಂದ ಅಲ್ಲಿನ ಸಿಬ್ಬಂದಿಗಳು, ಕಂಟೈನ್ಮೆಂಟ್‌ ಪ್ರದೇಶದ ಜನರು, ಅವರಿಬ್ಬರ ಮನೆಯವರು ಸೋಂಕು ಹರಡುವ ಆತಂಕಕ್ಕೂ ಒಳಗಾಗಿದ್ದರು. ಈಗ ಅವರಿಬ್ಬರಿಗೂ ಕೊರೋನಾ ಇಲ್ಲ ಎಂಬುದು ಪತ್ತೆಯಾಗಿ, ಜಿಲ್ಲಾಡಳಿತ ಅನಾವಶ್ಯಕವಾಗಿ ಶ್ರಮ, ಜನರು ಆತಂಕ ಪಡುವಂತಾಯಿತು.

ಮೊದಲು ಮಗುವಿಗೆ, ನಂತರ ತಾಯಿಗೂ ಸೋಂಕು

ಮುಂಬೈಯಿಂದ ಉಡುಪಿಗೆ ಬಂದಿದ್ದ 8 ವರ್ಷದ ಮಗುವಿಗೆ ವಾರದ ಹಿಂದೆ ಕೊರೋನಾ ಸೋಂಕಿರುವುದು ಪತ್ತೆಯಾಗಿತ್ತು. ಹೆತ್ತವರೊಂದಿಗೆ ಕ್ವಾರಂಟೈನ್‌ನಲ್ಲಿದ್ದ ಆ ಮಗುವನ್ನು ಆರೋಗ್ಯ ಇಲಾಖೆ ಅನಿವಾರ್ಯವಾಗಿ ಕೋವಿಡ್‌ ಆಸ್ಪತ್ರೆಯ ಐಸೋಲೇಶನ್‌ ವಾರ್ಡ್‌ಗೆ ಕಳುಹಿಸಿತ್ತು. ಇದೀಗ ಆ ಮಗುವಿನ ತಾಯಿಗೂ ಕೊರೋನಾ ಸೋಂಕು ತಗಲಿದೆ.

ದೆಹಲಿಯಲ್ಲಿ ಭೂಕಂಪ; ರಿಕ್ಟರ್ ಮಾಪನದಲ್ಲಿ 4.6 ತೀವ್ರತೆ ದಾಖಲು!

ಇತ್ತ 8 ವರ್ಷದ ತಾಯಿಯನ್ನು ಬಿಟ್ಟಿರಲಾರದ, ಅತ್ತ ತಾಯಿ ಮಗುವನ್ನು ಬಿಟ್ಟಿರಲಾರದ ತೀವ್ರ ನೋವಿಗೆ ಸ್ಪಂದಿಸಿದ ಆರೋಗ್ಯ ಇಲಾಖೆ ಮಗುವಿನೊಂದಿಗೆ ತಾಯಿಗೂ ಆಸ್ಪತ್ರೆಯಲ್ಲಿರಲು ಅವಕಾಶ ನೀಡಿತ್ತು. ಮಕ್ಕಳಿಗೆ ಕೊರೋನಾ ಸೋಂಕು ಬೇಗ ತಗಲುತ್ತದೆ ಎಂಬ ಕಾರಣಕ್ಕೆ ಮಕ್ಕಳ ಪರೀಕ್ಷೆಯನ್ನು ಆದ್ಯತೆಯಲ್ಲಿ ಮಾಡಲಾಗಿತ್ತು. ಅದರಂತೆ ಈ ಮಗುವಿಗೆ ಸೋಂಕಿರುವುದು ಪತ್ತೆಯಾಗಿತ್ತು. ನಂತರ 35 ವರ್ಷ ವಯಸ್ಸಿನ ಈ ತಾಯಿಯ ಪರೀಕ್ಷೆ ಮಾಡಲಾಗಿ, ಈಗ ಅವರಿಗೂ ಸೋಂಕಿರುವುದು ಪತ್ತೆಯಾಗಿದೆ. ಆಸ್ಪತ್ರೆಯಲ್ಲಿದ್ದರೂ ಐಸೋಲೇಶನ್‌ ವಾರ್ಡ್‌ನಲ್ಲಿದ್ದ ಮಗುವನ್ನು ದೂರದಿಂದಲೇ ನೋಡಿ ಕಣ್ಣುತುಂಬಿಕೊಳ್ಳುತಿದ್ದ ತಾಯಿಯೇ ಈಗ ಐಸೋಲೇಶನ್‌ ವಾರ್ಡಿಗೆ ದಾಖಲಾಗಿದ್ದಾರೆ.

ಮನೆ ಸೇರುವ ಮೊದಲೇ ಪಾಸಿಟಿವ್‌:

ಮುಂಬೈಯಿಂದ ಬಂದು ಕುಂದಾಪುರದಲ್ಲಿ ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದ ಯುವಕನನ್ನು ಗುರುವಾರ ಮನೆಗೆ ಕಳುಹಿಸಿದರು. ಆತನ ಗಂಟಲದ್ರವದ ಮಾದರಿಯ ಪರೀಕ್ಷೆಯ ವರದಿ ಇನ್ನೂ ಬಂದಿರಲಿಲ್ಲ. ಕ್ವಾರಂಟೈನ್‌ ಎಂಬ ಜೈಲಿನಿಂದ ಬಿಡುಗಡೆಯಾಗಿ ಖುಷಿಯಿಂದ ಮನೆಗೆ ಹೋಗುವಷ್ಟರಲ್ಲಿ ಆತನಿಗೆ ಕೊರೋನಾ ಇದೆ ಎಂಬ ವರದಿ ಆರೋಗ್ಯ ಇಲಾಖೆಯ ಕೈಗೆ ಸೇರಿತು. ತಕ್ಷಣ ಆತನನ್ನು ಹಿಂದಕ್ಕೆ ಕರೆಸಲಾಯಿತು. ಖುಷಿಯಿಂದ ಮನೆಗೆ ಹೊರಟಿದ್ದ ಆ ಯುವಕ ಈಗ ಬೇಸರದಿಂದ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದಾನೆ.