ಹುಬ್ಬಳ್ಳಿ: KIMSನಲ್ಲಿ ಕೊರೋನಾ ಟೆಸ್ಟ್ ಸ್ಥಗಿತ, ಮುಂದುವರಿದ ಪರದಾಟ
ಕಿಮ್ಸ್‌ನಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸುವವರು, ಸೋಂಕಿನ ಭೀತಿ ಉಳ್ಳವರು ಸೇರಿದಂತೆ ದಿನಕ್ಕೆ 400 ಹಾಗೂ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಗರ್ಭಿಣಿಯರು ಸೇರಿ ದಿನಕ್ಕೆ 150ಕ್ಕೂ ಹೆಚ್ಚಿನವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿತ್ತು| ಕಳೆದ ಜು. 20ರಿಂದ ಸ್ಥಗಿತ| ಧಾರವಾಡದಲ್ಲೂ ಸೋಂಕಿತರ ಪತ್ತೆ ಕಾರ್ಯ ಕುಂಠಿತ|
ಹುಬ್ಬಳ್ಳಿ(ಜು.24): ಇಲ್ಲಿನ ಕಿಮ್ಸ್ ಹಾಗೂ ಚಿಟಗುಪ್ಪಿಯಲ್ಲಿ ಸ್ವ್ಯಾಬ್ ಟೆಸ್ಟ್ ಜು. 26ರ ವರೆಗೆ ಸ್ಥಗಿತಗೊಳಿಸಿರುವುದರಿಂದ ಕೊರೋನಾ ಭೀತಿಗೆ ಒಳಗಾದವರ ಆತಂಕ ಮುಂದುವರಿದಿದೆ. ಸ್ಯಾನಿಟೈಸಿಂಗ್ ಮಾಡಬೇಕಿರುವ ನೆಪ ಹೇಳಿಕೊಂಡು ಗಂಟಲು ದ್ರವ ಸಂಗ್ರಹಣೆಯನ್ನು ಇವೆರಡು ಕಡೆಗಳಲ್ಲಿ ಕಳೆದ ಜು. 20ರಿಂದ ನಿಲ್ಲಿಸಲಾಗಿದೆ.
ಜಿಲ್ಲೆಯ ಶೇ. 50ರಷ್ಟು ಸೋಂಕು ಪ್ರಕರಣಗಳು ಇಲ್ಲಿಯೇ ಪತ್ತೆಯಾಗುತ್ತಿದ್ದವು. ಹೀಗಾಗಿ ಸೋಂಕಿತರ ಪತ್ತೆ ಕಾರ್ಯವೂ ಇಳಿಮುಖವಾಗಿದೆ ಎಂಬ ವಾದ ಕೇಳಿಬಂದಿದೆ. ಆದರೆ, ಸೋಂಕಿತರ ಪತ್ತೆಗೆ ಅಗತ್ಯ ಪರ್ಯಾಯ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಿದ್ದಾರೆ ಕಿಮ್ಸ್ ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾಡಳಿತ.
ಸ್ವಾಬ್ ಟೆಸ್ಟ್ ಕೇಂದ್ರಗಳೇ ಜನರಿಗೆ ಕೊರೊನಾ ಸೋಂಕು..!
ಕಿಮ್ಸ್‌ನಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸುವವರು, ಸೋಂಕಿನ ಭೀತಿ ಉಳ್ಳವರು ಸೇರಿದಂತೆ ದಿನಕ್ಕೆ 400 ಹಾಗೂ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಗರ್ಭಿಣಿಯರು ಸೇರಿ ದಿನಕ್ಕೆ 150ಕ್ಕೂ ಹೆಚ್ಚಿನವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿತ್ತು. ಇವೆಲ್ಲ ಕಳೆದ ಜು. 20ರಿಂದ ಸ್ಥಗಿತವಾಗಿದೆ. ಹೀಗಾಗಿ ಧಾರವಾಡದಲ್ಲಿ ಸೋಂಕಿತರ ಪತ್ತೆ ಕಾರ್ಯ ಕುಂಠಿತವಾಗಿದೆ ಎನ್ನಲಾಗಿದೆ.
ಇನ್ನು, ಕೆಮ್ಮು ನೆಗಡಿ ಸೇರಿದಂತೆ ವಿವಿಧ ಲಕ್ಷಣದಿಂದ ಬಳಲುವವರು ಸೋಂಕು ತಗುಲಿದೆಯೇ ಎಂದು ಪರೀಕ್ಷೆ ಮಾಡಿಸಿಕೊಳ್ಳಲಾಗದೆ ಪರದಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇದರಿಂದ ಸೋಂಕು ಹರಡುವ ಪ್ರಮಾಣವೂ ಹೆಚ್ಚಾಗಲಿರುವ ಆತಂಕವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ. ಒಂದೆಡೆ ಸೋಂಕು ಏರುತ್ತಿದ್ದರೂ ಇನ್ನೊಂದೆಡೆ ಸ್ವಾಬ್ ಪರೀಕ್ಷೆಯನ್ನೆ ನಡೆಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.