ಬೆಳಗಾವಿ/ಚನ್ನಮ್ಮನ ಕಿತ್ತೂರು(ಆ.17): ಕೊರೋನಾ ಭೀತಿಯಿಂದಾಗಿ ಅಂತ್ಯಸಂಸ್ಕಾರಕ್ಕೆ ವಾಹನ ದೊರೆಯದ ಹಿನ್ನೆಲೆಯಲ್ಲಿ ಶವವನ್ನು ತಳ್ಳು ಗಾಡಿಯಲ್ಲಿ ತೆಗೆದುಕೊಂಡು ಹೋಗಿದ್ದಾಯ್ತು. ಇದೀಗ ಮಳೆಯ ನಡುವೆಯ ಸೈಕಲ್‌ ಮೇಲೆ ಶವ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದ 2ನೇ ವಾರ್ಡ್‌ನಲ್ಲಿ ಭಾನುವಾರ ನಡೆದಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಚನ್ನಮ್ಮನ ಕಿತ್ತೂರು ಪಟ್ಟಣದ ಗಾಂಧಿ ನಗರದ ನಿವಾಸಿಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದರು. ನಂತರ ಕೊರೋನಾ ಸೋಂಕಿನ ಗುಣಲಕ್ಷಣಗಳಿದ್ದು ತಪಾಸಣೆ ಮಾಡಿಸುವಂತೆ ಅಲ್ಲಿನ ವೈದ್ಯರು ವೃದ್ಧನಿಗೆ ಸೂಚಿಸಿದ್ದರು. ಆದರೆ ಆತ ಭಾನುವಾರ ಬೆಳಗಿನ ಜಾವವೇ ಎಂ.ಕೆ.ಹುಬ್ಬಳ್ಳಿಯಲ್ಲಿರುವ ಆತನ ಮನೆಯಲ್ಲಿಯೇ ಮೃತಪಟ್ಟಿದ್ದಾರೆ.

ಮಹಾ ಜಲಾಶಯ ಹತ್ತಿರ ಲಘು ಭೂಕಂಪ: ಕೃಷ್ಣಾ ನದಿ ತೀರದ ಗ್ರಾಮಸ್ಥರಲ್ಲಿ ಮತ್ತೆ ಆತಂಕ

ಇದರಿಂದ ಗಾಬರಿಗೊಂಡ ವೃದ್ಧನ ಪತ್ನಿ ಮತ್ತು ಕುಟುಂಬಸ್ಥರು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಶವ ಸಾಗಿಸಲು ಆ್ಯಂಬುಲೆನ್ಸ್‌ ನೀಡುವಂತೆ ಕೇಳಿಕೊಂಡಿದ್ದಾರೆ. ಆದರೆ ಇದಕ್ಕೆ ಆರೋಗ್ಯಾಧಿಕಾರಿಗಳು ಸ್ಪಂದಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ಮೃತರಿಗೆ ಕೋವಿಡ್‌ ಟೆಸ್ಟ್‌ ಮಾಡಿಲ್ಲವಾಗಿದ್ದರಿಂದ ಕೊರೋನಾ ತಗುಲಿದೆಯೋ ಅಥವಾ ಇಲ್ಲವೋ ಎನ್ನುವುದು ಖಚಿತವಾಗಿಲ್ಲ. ಈ ಎಲ್ಲದರ ನಡುವೆ ಕೋವಿಡ್‌ ನಿಯಮದಂತೆ ಆಸ್ಪತ್ರೆ ಸಿಬ್ಬಂದಿಯೇ ಶವ ಸಂಸ್ಕಾರ ಮಾಡಲು ಮುಂದಾಗದಿರುವುದು ಕೂಡ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಕೊರೋನಾ ಶಂಕಿತನೆಂಬ ಕಾರಣಕ್ಕೆ ಶವ ಸಾಗಿಸಲು ಯಾವ ವಾಹನ ಮಾಲೀಕರೂ ಒಪ್ಪದ್ದರಿಂದ ಕುಟುಂಬಸ್ಥರು ಮತ್ತು ಸ್ಥಳೀಯರೇ ಶವವನ್ನು ಪ್ಲಾಸ್ಟಿಕ್‌ ಕವರ್‌ಗಳಿಂದ ಸುತ್ತಿಕೊಂಡು ಸೈಕಲ್‌ನಲ್ಲಿಟ್ಟುಕೊಂಡು, ಆತನ ಬಳಸುತ್ತಿದ್ದ ಬಟ್ಟೆಗಳೊಂದಿಗೆ ಸ್ಮಶಾನದತ್ತ ಹೊರಟರು. ಮನೆಯಿಂದ ಸುಮಾರು ಒಂದು ಕಿ.ಮೀ. ದೂರ ಸಾಗಬೇಕಾದರೆ ವಿಷಯ ತಿಳಿದ ವಾರ್ಡ್‌ ಸದಸ್ಯ ಪುಟ್ಟಪ್ಪ ಪಟ್ಟಣಶೆಟ್ಟಿ ತಮ್ಮ ಟಾಟಾ ಏಸ್‌ ಅನ್ನು ಕಳುಹಿಸಿಕೊಟ್ಟು ಶವನನ್ನು ಸ್ಮಶಾನ ತಲುಪಿಸಲು ನೆರವಾದರು. ಕೊನೆಗೆ ಸುರಿಯುತ್ತಿರುವ ಮಳೆ ನಡುವೆಯೇ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಅಮಾನವೀಯ ಅಂತ್ಯಕ್ರಿಯೆಯಾದರೆ ಕಠಿಣ ಕ್ರಮ: ರಮೇಶ್‌ ಜಾರಕಿಹೊಳಿ

ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಅನಾರೋಗ್ಯದಿಂದ ಅಸುನೀಗಿದ ವೃದ್ಧನ ಶವವನ್ನು ಸೈಕಲ್‌ನಲ್ಲಿ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಿರುವ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿಯಾದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು, ಇಂತಹ ಅಮಾನೀಯ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಮತ್ತು ಆರೋಗ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. 

ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಡಿಎಚ್‌ಒ ಅವರೊಂದಿಗೆ ಮಾತನಾಡಿರುವ ಸಚಿವರು, ಈ ರೀತಿಯಾಗಿ ಅಮಾನವೀಯವಾಗಿ ಅಂತ್ಯಕ್ರಿಯೆ ನಡೆಸಿರುವುದು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿದ್ದಾರೆ. ಮಾತ್ರವಲ್ಲ, ಅಂತ್ಯಕ್ರಿಯೆಯ ಸಂದರ್ಭದಲ್ಲಿ ಇಂತಹ ತೊಂದರೆಗಳು ಎದುರಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತವು ದೂರವಾಣಿ ಸಂಖ್ಯೆಯೊಂದನ್ನು ರೂಪಿಸಿ ಸಾರ್ವಜನಿಕರಿಗೆ ತಿಳಿಸಬೇಕು ಎಂದು ಸೂಚನೆ ನೀಡಿದ್ದಾರೆ.