ಮಂಗಳೂರು(ಏ.2): ಮಹಾಮಾರಿ ಕೋರೋನಾದಿಂದ ಇಬ್ಬರು ಮಹಿಳೆಯರು ಸಾವಿಗೀಡಾಗಿ ಹಾಟ್‌ಸ್ಪಾಟ್‌ ಆಗಿ ಗುರುತಿಸಿಕೊಂಡಿರುವ ಬಂಟ್ವಾಳದಿಂದ ದಿನೇದಿನೇ ಹೊಸ ಪಾಸಿಟಿವ್‌ ಕೇಸ್‌ಗಳು ದಾಖಲಾಗುತ್ತಿದ್ದು ಇನ್ನಷ್ಟುಆತಂಕಕ್ಕೆ ಕಾರಣವಾಗಿದೆ.

ಬಂಟ್ವಾಳ ಕಸಬಾ ಗ್ರಾಮದ 33 ವರ್ಷ ವಯಸ್ಸಿನ ಮಹಿಳೆಗೆ ಸೋಂಕು ಇರುವುದು ಶನಿವಾರ ದೃಢಪಟ್ಟಿದೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹದಿನೆಂಟಕ್ಕೆ ಏರಿದೆ.

ಮಂಗಳೂರಲ್ಲಿದ್ದ 2 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಮನೆ ಸೇರೋ ಸಂತಸ

ಶನಿವಾರ ಸೋಂಕಿಗೀಡಾದ 33 ವರ್ಷದ ಮಹಿಳೆಯ ತಾಯಿಗೆ ಈಗಾಗಲೇ ಏ.21ರಂದು ಸೋಂಕು ದೃಢಪಟ್ಟಿದ್ದು ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಬೆನ್ನಲ್ಲೇ ಈಗ ಅವರ ಮಗಳಿಗೂ ಸೋಂಕು ತಗುಲಿದೆ. ಈ ಮೂಲಕ ಒಂದೇ ಕುಟುಂಬದ ಇಬ್ಬರು ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವಂತಾಗಿದೆ.

ಮೃತ ಮಹಿಳೆಯ ನೆರೆಮನೆಯವರು:

ಈ ತಾಯಿ- ಮಗಳು ಇಬ್ಬರೂ ಕೂಡ ಇತ್ತೀಚೆಗೆ ಸೋಂಕಿನಿಂದ ಸಾವಿಗೀಡಾದ ಮಹಿಳೆಯ ಪಕ್ಕದ ಮನೆಯವರು. ಏ.19ರಂದು ಆಡಳಿತಕ್ಕೆ ಯಾವ ಮಾಹಿತಿಯೂ ಇಲ್ಲದೆ ಕೊರೋನಾದಿಂದ 50 ವರ್ಷದ ಮಹಿಳೆ ಬಲಿಯಾಗಿದ್ದರು. ಏ.23ರಂದು ಈ ಮಹಿಳೆಯ ಅತ್ತೆಯೂ ಕೊರೋನಾಗೆ ಬಲಿಯಾಗಿದ್ದರು. ಬಂಟ್ವಾಳದಲ್ಲಿ ಮೊದಲ ಸಾವು ಆದ ತಕ್ಷಣ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಆ ಗ್ರಾಮದ 34ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ಕರೆತಂದು ಕ್ವಾರಂಟೈನ್‌ನಲ್ಲಿ ಇರಿಸಿತ್ತು. ಶನಿವಾರ ಪಾಸಿಟಿವ್‌ ಆದ ಮಹಿಳೆಗೂ ಏ.19ರಿಂದಲೇ ಮಂಗಳೂರಿನಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು.

ಸೀಲ್‌ಡೌನ್ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ನರ್ಸ್‌ ಕುಟುಂಬ ಕ್ವಾರಂಟೈನ್‌ಗೆ

ಒಂದೇ ಗ್ರಾಮದಲ್ಲಿ 4 ಕೇಸ್‌: ಬಂಟ್ವಾಳ ಕಸಬಾ ಗ್ರಾಮ ಒಂದರಿಂದಲೇ ಇದುವರೆಗೆ ಒಟ್ಟು ನಾಲ್ಕು ಪಾಸಿಟಿವ್‌ ಪ್ರಕರಣಗಳು ದಾಖಲಾದಂತಾಗಿದೆ. ಇತ್ತೀಚೆಗೆ ಸಾವಿಗೀಡಾದ ಮಹಿಳೆಗೆ ಸೊಂಕು ತಗುಲಿದ್ದು ಹೇಗೆ ಎನ್ನುವುದು ಹೇಗೆ ಎನ್ನುವುದು ಇನ್ನೂ ನಿಗೂಢವಾಗಿದೆ (ಆಕೆಯ ಗಂಡ ಹಾಗೂ ಪುತ್ರನಿಗೆ ಈಗಾಗಲೇ ನೆಗೆಟಿವ್‌ ವರದಿ ಬಂದಿದೆ). ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸೋಂಕಿತರ ಸಂಖ್ಯೆ ಇನ್ನಷ್ಟುಏರಿಕೆಯಾಗುವ ಸಾಧ್ಯತೆಗಳಿವೆ. ಆದರೆ ಅಲ್ಲಿನ ಶಂಕಿತರು ಬಹುತೇಕರು ಆಸ್ಪತ್ರೆಯಲ್ಲಿ ನಿಗಾವಣೆಯಲ್ಲಿ ಇರುವುದರಿಂದ ಅವರನ್ನು ಹೊರತುಪಡಿಸಿ ಇತರರಿಗೆ ಸೋಂಕು ತಗುಲಿರುವ ಸಾಧ್ಯತೆಗಳು ವಿರಳ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಯಿ ಮಗಳು, ಅತ್ತೆ-ಸೊಸೆ, ಪತಿ-ಪತ್ನಿಗೆ ಸೋಂಕು!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕು ದೃಢಪಟ್ಟಒಟ್ಟು 18 ಮಂದಿಯಲ್ಲಿ ಅತ್ತೆ-ಸೊಸೆ, ತಾಯಿ- ಮಗಳು, ಪತಿ-ಪತ್ನಿ (ಪ್ರತ್ಯೇಕ ಪ್ರಕರಣಗಳು) ಸೇರಿದ್ದಾರೆ. ಈ ಮೂಲಕ ಮನೆಯೊಳಗಿನಿಂದಲೇ ಸೋಂಕು ಹರಡುತ್ತಿರುವುದು ಕಂಡುಬಂದಿದೆ. ಈಗಾಗಲೇ ಬಂಟ್ವಾಳ ಕಸಬಾ ಗ್ರಾಮದಲ್ಲಿ ಅತ್ತೆ- ಸೊಸೆ ಸಾವಿಗೀಡಾಗಿದ್ದಾರೆ. ಇನ್ನು, ದೆಹಲಿಯಿಂದ ಆಗಮಿಸಿದ್ದ ಉಪ್ಪಿನಂಗಡಿಯ ವ್ಯಕ್ತಿಗೂ ಸೋಂಕು ಕಾಣಿಸಿಕೊಂಡಿತ್ತು. ಅದರ ಬಳಿಕ ಅವರ ಪತ್ನಿಗೂ ಪಾಸಿಟಿವ್‌ ದೃಡಪಟ್ಟಿತ್ತು. ಅವರಿಬ್ಬರೂ ಈಗ ಚಿಕಿತ್ಸೆಯಲ್ಲಿದ್ದಾರೆ. ಈಗ ಬಂಟ್ವಾಳ ಕಸಬಾ ಗ್ರಾಮದ ತಾಯಿ- ಮಗಳಿಬ್ಬರೂ ಸೋಂಕಿಗೆ ತುತ್ತಾಗಿದ್ದಾರೆ.