ಮಂಗಳೂರು (ಆ.17) :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲಿದ್ದ ಗುಣಮುಖರ ಸಂಖ್ಯೆ ಈಗ ಮತ್ತೆ ಇಳಿಕೆಯಾಗತೊಡಗಿದೆ. ನಾಲ್ಕೈದು ದಿನಗಳ ಹಿಂದೆ 500ಕ್ಕೂ ಅಧಿಕ ಮಂದಿ ಪ್ರತಿದಿನ ಗುಣಮುಖರಾಗುತ್ತಿದ್ದರೆ, ಭಾನುವಾರ ಈ ಸಂಖ್ಯೆ 128ಕ್ಕೆ ಇಳಿದಿದೆ. ಹೊಸದಾಗಿ 229 ಮಂದಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿದ್ದು, ಮತ್ತೆ 7 ಮಂದಿ ಸಾವನ್ನಪ್ಪಿದ್ದಾರೆ.

ಮೃತಪಟ್ಟವರಲ್ಲಿ ಮಂಗಳೂರು ತಾಲೂಕಿನ ಮೂರು ಮಂದಿ ಮತ್ತು ಇತರ ಜಿಲ್ಲೆಯ ನಾಲ್ಕು ಮಂದಿ ಸೇರಿದ್ದಾರೆ. ಇವರೆಲ್ಲರಿಗೂ ಕೊರೋನಾ ಸೋಂಕಿನ ಜತೆಗೆ ಇತರ ಗಂಭೀರ ಕಾಯಿಲೆಗಳಿದ್ದವು ಎಂದು ಜಿಲ್ಲಾ ಆರೋಗ್ಯ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಈವರೆಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ269ಕ್ಕೆ ಏರಿಕೆಯಾಗಿದೆ.

ಮೂಲ ಪತ್ತೆಯಾಗದ 78 ಕೇಸ್‌: ಭಾನುವಾರ ಪತ್ತೆಯಾದ ಪಾಸಿಟಿವ್‌ ಪ್ರಕರಣಗಳ ಪೈಕಿ 22 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ. 123 ಸಾಮಾನ್ಯ ಶೀತಜ್ವರ ಪ್ರಕರಣ, 6 ಉಸಿರಾಟ ಸಮಸ್ಯೆಯ ಪ್ರಕರಣ ಪತ್ತೆಯಾಗಿದ್ದು, 78 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ. ಇವರಲ್ಲಿ 122 ಮಂದಿ ಮಂಗಳೂರಿನವರೇ ಆಗಿದ್ದರೆ, 36 ಮಂದಿ ಬಂಟ್ವಾಳದವರು, ಪುತ್ತೂರಿನ 31 ಮಂದಿ, ಸುಳ್ಯದ ಒಬ್ಬರು, ಬೆಳ್ತಂಗಡಿಯವರು 8 ಮಂದಿ. ಇತರ ಜಿಲ್ಲೆಗಳ 31 ಮಂದಿಗೂ ಇಲ್ಲಿ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಇದುವರೆಗೆ 70,712 ಮಂದಿಯ ಗಂಟಲ ದ್ರವ ಮಾದರಿಯ ಪರೀಕ್ಷೆ ನಡೆದಿದ್ದು, 8878 ಪಾಸಿಟಿವ್‌ ಪ್ರಕರಣಗಳು ಮತ್ತು 61,834 ನೆಗೆಟಿವ್‌ ಪ್ರಕರಣಗಳು ಪತ್ತೆಯಾಗಿವೆ.

128 ಮಂದಿ ಗುಣಮುಖ: ಕೊರೋನಾ ಸೋಂಕಿನಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ 128 ಮಂದಿ ಭಾನುವಾರ ಗುಣಮುಖರಾಗಿದ್ದಾರೆ. ಇವರಲ್ಲಿ 86 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರೆ, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ನಾಲ್ವರು, ಆಸ್ಪತ್ರೆಯಲ್ಲಿ 38 ಮಂದಿ ಚಿಕಿತ್ಸೆಯಲ್ಲಿದ್ದರು. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ 6445 ಮಂದಿ ಗುಣಮುಖರಾದಂತಾಗಿದೆ. ಸದ್ಯ 2164 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.