ಮಂಗಳೂರು (ಅ.21):  ಕೊರೋನಾ ಲಾಕ್‌ಡೌನ್‌ ಬಳಿಕ ಕೇರಳ- ಕರ್ನಾಟಕದ ನಡುವೆ ಸಂಚರಿಸುವ ಸಾವಿರಾರು ಜನಸಾಮಾನ್ಯರಿಗೆ ಒಂದಿಲ್ಲೊಂದು ಸಮಸ್ಯೆ ಕಾಡಿದ್ದರೆ, ಇದೀಗ ಹೊಸ ತಲೆನೋವು ಸೃಷ್ಟಿಯಾಗಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿತರಾಗಿ ಗುಣಮುಖರಾದವರು ಕೇರಳಕ್ಕೆ ಹೋದರೆ ಅಲ್ಲಿ ಪಾಸಿಟಿವ್‌ ವರದಿ ಬಂದು ಮತ್ತೆ ಕ್ವಾರಂಟೈನ್‌ ಆಗಬೇಕಾದ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಗುಣಮುಖರಾದ ಬಳಿಕವೂ ಪಾಸಿಟಿವ್‌ ವರದಿ ಬರುವುದರಿಂದ ಸೋಂಕು ಇನ್ನಷ್ಟುಹರಡಬಹುದಾದ ಸಾಧ್ಯತೆ ಒಂದೆಡೆಯಾದರೆ, 2ನೇ ಬಾರಿ ಕೊರೋನಾ ಬಂದಿರಬಹುದೇ ಎಂಬ ತೀವ್ರ ಆತಂಕಕ್ಕೆ ಸೋಂಕಿತರು ಒಳಗಾಗುತ್ತಿದ್ದಾರೆ. ಆ ಮನೆಯವರೆಲ್ಲರೂ ಅಷ್ಟೂದಿನಗಳ ಕಾಲ ಅನಿವಾರ್ಯವಾಗಿ ಆ ವ್ಯಕ್ತಿಯಿಂದ ದೂರ ಉಳಿಯಬೇಕಾಗುತ್ತದೆ. ದಿನದ ದುಡಿಮೆಯನ್ನೇ ಅವಲಂಬಿಸಿರುವವರು ವಾರಗಟ್ಟಲೆ ಕೆಲಸವಿಲ್ಲದ ಪರಿಸ್ಥಿತಿಗೆ ತಲುಪಿ ತೀವ್ರ ಮಾನಸಿಕ, ಆರ್ಥಿಕ ಒತ್ತಡಕ್ಕೂ ಒಳಗಾಗುತ್ತಿದ್ದಾರೆ.

ಕರ್ನಾಟಕದಲ್ಲಿ ಸೋಂಕಿನ ಪ್ರಮಾಣ ಇಳಿಕೆ, ಗುಣಮುಖರಾದವರ ಸಂಖ್ಯೆ ಏರಿಕೆ ...

ಏನಿದು ಹೊಸ ಸಮಸ್ಯೆ?: ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದಲ್ಲಿ ಕೊರೋನಾ ಸೋಂಕಿತರು ಗುಣಮುಖರಾದ ಬಳಿಕ ಮತ್ತೆ ಪರೀಕ್ಷೆ ಮಾಡಿ ವೈರಸ್‌ ದೇಹದಲ್ಲಿಲ್ಲ ಎನ್ನುವ ನೆಗೆಟಿವ್‌ ಸರ್ಟಿಫಿಕೆಟ್‌ ನೀಡುವ ಪದ್ಧತಿ ಇಲ್ಲ. ಆದರೆ ಕೇರಳದಲ್ಲಿ ಈ ವ್ಯವಸ್ಥೆ ಈಗಲೂ ಇದೆ. ಅಲ್ಲದೆ, ಹೊರರಾಜ್ಯದಿಂದ ಯಾರೇ ಬಂದರೂ ಕಟ್ಟುನಿಟ್ಟಾಗಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹೀಗಿರುವಾಗ ಕರ್ನಾಟಕದಲ್ಲಿ ಕೊರೋನಾ ಪಾಸಿಟಿವ್‌ ಆಗಿ ಎಲ್ಲ ಸರ್ಕಾರಿ ಮಾರ್ಗಸೂಚಿಯಂತೆ ಕ್ವಾರಂಟೈನ್‌ ಮುಗಿಸಿ ‘ಗುಣಮುಖರಾಗಿದ್ದಾರೆ’ ಎಂದು ಘೋಷಿಸಿಕೊಂಡವರು ಕೇರಳಕ್ಕೆ ತೆರಳಿದ ಕೂಡಲೆ ಅಲ್ಲಿ ಪರೀಕ್ಷೆ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಅನೇಕರ ವರದಿ ಪಾಸಿಟಿವ್‌ ಬರುತ್ತಿರುವುದೇ ಸಮಸ್ಯೆಗೆ ಕಾರಣ.

ಪಾಸಿಟಿವ್‌ ಬಂದ ಬಳಿಕ ಕೇರಳ ಸರ್ಕಾರದ ಮಾರ್ಗಸೂಚಿಯಂತೆ ಮತ್ತೆ ಅಲ್ಲೇ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಎಷ್ಟುದಿನಗಳು ಬೇಕಾದರೂ ಕಳೆಯಲಿ, ಮತ್ತೆ ಪರೀಕ್ಷೆ ಮಾಡಿ ನೆಗೆಟಿವ್‌ ಸರ್ಟಿಫಿಕೆಟ್‌ ಪಡೆದ ಬಳಿಕವೇ ಅವರಿಗೆ ಕೊರೋನಾದಿಂದ ಹೊರಜಗತ್ತಿಗೆ ಅಡಿಯಿಡಲು ಸ್ವಾತಂತ್ರ್ಯ ಸಿಗುವುದು.

ರಾಜ್ಯದ ಮಾರ್ಗಸೂಚಿ ಹೇಗಿದೆ?: ಪ್ರಸ್ತುತ ರಾಜ್ಯದಲ್ಲಿ ಯಾರೇ ಕೊರೋನಾ ಸೋಂಕಿತರಾಗಲಿ, ತೀವ್ರ ಆರೋಗ್ಯ ಸಮಸ್ಯೆಗಳಿಲ್ಲದಿದ್ದರೆ ಗಂಟಲ ಸ್ರಾವದ ಮಾದರಿ ಕೊಟ್ಟಬಳಿಕ 10 ದಿನ ಯಾರ ಸಂಪರ್ಕಕ್ಕೂ ಬಾರದೆ ರೂಮ್‌ ಐಸೊಲೇಶನ್‌ನಲ್ಲಿರಬೇಕಾಗುತ್ತದೆ. 10 ದಿನಗಳ ಬಳಿಕ ಯಾವ ಲಕ್ಷಣವೂ ಇಲ್ಲದಿದ್ದರೆ ಮತ್ತೆ 7 ದಿನಗಳ ಕಾಲ ಮನೆಯಲ್ಲೇ ಕ್ವಾರಂಟೈನ್‌ನಲ್ಲಿರಬೇಕು. ನಂತರ ಅವರನ್ನು ಗುಣಮುಖ ಎಂದು ಘೋಷಿಸಲಾಗುತ್ತದೆ. ಮತ್ತೆ ಪರೀಕ್ಷೆ ಮಾಡಿ ನೆಗೆಟಿವ್‌ ಎಂದು ಘೋಷಿಸುವ ಪದ್ಧತಿ ಇಲ್ಲ. ಆದರೆ ಕೇರಳದಲ್ಲಿ ನೆಗೆಟಿವ್‌ ಎಂದು ದೃಢಪಟ್ಟಬಳಿಕವೇ ಗುಣಮುಖ ಎಂದು ಘೋಷಿಸಲಾಗುತ್ತಿದೆ.

ಹರಡಲ್ಲ, ಆದರೂ ಹೇಳಲಾಗದು: ಸಾಮಾನ್ಯವಾಗಿ 10 ದಿನಗಳ ಬಳಿಕ ಸೋಂಕು ಹರಡುವುದಿಲ್ಲ. 17 ದಿನಗಳ ಬಳಿಕವೂ ಪಾಸಿಟಿವ್‌ ಬಂದರೆ ಅದು ದೇಹದಲ್ಲಿರಬಹುದಾದ ಸತ್ತ ವೈರಸ್‌ನಿಂದಲೂ ಆಗಬಹುದು, ಕೆಲವೊಂದು ಸಂದರ್ಭಗಳಲ್ಲಿ ವೈರಸ್‌ ಜೀವಂತ ಇರುವ ಸಾಧ್ಯತೆಯೂ ಇದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುತ್ತಿದ್ದೇವೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ‘ಕಟ್ಟುನಿಟ್ಟು’ ಕಾಲ ಮುಗೀತು!

ದ.ಕ.ದಲ್ಲಿ ಕೆಲ ವಾರಗಳ ಹಿಂದಿನವರೆಗೂ ಕೊರೋನಾ ಪಾಸಿಟಿವ್‌ ದೃಢಪಟ್ಟತಕ್ಷಣ ಆ ಸೋಂಕಿತರ ಮನೆಗೆ ಸ್ಟಿಕ್ಕರ್‌ ಅಂಟಿಸಿ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ ವಿಚಾರಿಸಿಕೊಳ್ಳುತ್ತಿದ್ದರು. ಫೋನ್‌ ಕರೆಗಳೂ ಬರುತ್ತಿದ್ದವು. ಆದರೆ ಇತ್ತೀಚೆಗೆ ಪಾಸಿಟಿವ್‌ ಬಂದರೂ ಯಾರು ಹೇಳುವವರಿಲ್ಲ, ಕೇಳುವವರಿಲ್ಲ ಎಂಬಂತಾಗಿದೆ. ಯಾರೂ ಮನೆ ಭೇಟಿಯನ್ನೇ ಮಾಡುತ್ತಿಲ್ಲ. ಆದರೆ ಕೇರಳದಲ್ಲಿ ಪಾಸಿಟಿವ್‌ ಗೊತ್ತಾದ ತಕ್ಷಣ ಪೊಲೀಸರು, ಆರೋಗ್ಯ ಕಾರ್ಯಕರ್ತರು ಖುದ್ದು ಭೇಟಿ ನೀಡುತ್ತಾರೆ. ನಿತ್ಯವೂ ಆರೋಗ್ಯ ವಿಚಾರಿಸಲು ಫೋನ್‌ ಕರೆಗಳು ಬರುತ್ತವೆ. ಕೆಲವೊಮ್ಮೆ ವಿಡಿಯೊ ಕಾಲ್‌ ಮೂಲಕವೂ ಸಂಪರ್ಕಿಸುತ್ತಾರೆ. ನೆಗೆಟಿವ್‌ ಬರುವಷ್ಟೂದಿನ ಈ ಕಟ್ಟುನಿಟ್ಟಿನ ವ್ಯವಸ್ಥೆ ಅಲ್ಲಿದೆ ಎಂದು ಎರಡೂ ರಾಜ್ಯಗಳಲ್ಲಿ ಪಾಸಿಟಿವ್‌ ಆಗಿ ಚಿಕಿತ್ಸೆ ಪಡೆದು ಈಗ ಗುಣಮುಖ ಆದವರೊಬ್ಬರು ತಿಳಿಸಿದ್ದಾರೆ.
 
ಕರ್ನಾಟಕದಲ್ಲಿ ಕೊರೋನಾ ಸೋಂಕಿತರಿಗೆ ನೆಗೆಟಿವ್‌ ಸರ್ಟಿಫಿಕೆಟ್‌ ನೀಡದೆ ಬಿಡುವುದರಿಂದ ಮತ್ತೆ ಪಾಸಿಟಿವ್‌ ವರದಿ ಬಂದು ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಇದರಿಂದ ರೋಗಿಯು ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕುತ್ತಾನೆ. ಇದು ಕೇಂದ್ರದ ಮಾರ್ಗಸೂಚಿ ಆಗಿರುವುದರಿಂದ ಕರ್ನಾಟಕಕ್ಕೆ ನೆಗೆಟಿವ್‌ ಸರ್ಟಿಫಿಕೆಟ್‌ ನೀಡುವಂತೆ ಹೇಳಲಾಗದು. ಆದರೂ ನೆಗೆಟಿವ್‌ ಆಗಿದೆಯೇ ಇಲ್ಲವೇ ಎನ್ನುವ ಪರೀಕ್ಷೆ ಮಾಡುವುದು ಉತ್ತಮ.

- ರಾಮದಾಸ್‌, ಕಾಸರಗೋಡು ಜಿಲ್ಲಾ ಆರೋಗ್ಯಾಧಿಕಾರಿ