ಬೆಂಗಳೂರು [ಮಾ.20]:  ನಗರದ ಪೇಯಿಂಗ್‌ ಗೆಸ್ಟ್‌ (ಪಿಜಿ) ಹಾಗೂ ಹಾಸ್ಟೆಲ್‌ನಲ್ಲಿರುವವರನ್ನು ಒತ್ತಾಯ ಪೂರ್ವಕವಾಗಿ ಖಾಲಿ ಮಾಡಿಸುವಂತಿಲ್ಲ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ರವಿಕುಮಾರ್‌ ಸುರಪುರ ಪೇಯಿಂಗ್‌ ಗೆಸ್ಟ್‌ ಮಾಲಿಕರಿಗೆ ಹಾಗೂ ಹಾಸ್ಟೆಲ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ವೈರಸ್‌ ಹರಡದಂತೆ ಬಿಬಿಎಂಪಿ ಮಾ.16ರಂದು ನಗರದ ಪೇಯಿಂಗ್‌ ಗೆಸ್ಟ್‌ ಹಾಗೂ ಹಾಸ್ಟಲ್‌ಗಳಲ್ಲಿ ಅನುಸರಿಸಬಹುದಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಸಲಹೆ ಸೂಚನೆಗಳನ್ನು ಮಾಲಿಕರು ತಪ್ಪಾಗಿ ಆರ್ಥ ಮಾಡಿಕೊಂಡು ಪಿಜಿ ಹಾಗೂ ಹಾಸ್ಟೆಲ್‌ನಲ್ಲಿ ಇರುವವರನ್ನು ಒತ್ತಾಯ ಪೂರ್ವಕವಾಗಿ ಖಾಲಿ ಮಾಡಿಸುತ್ತಿರುವುದು ತಿಳಿದು ಬಂದಿದೆ.

ಕೊರೋನಾ ಅಟ್ಟಹಾಸ: ತಿರುಪತಿ, ಪುರಿ ದೇಗುಲ ಬಂದ್‌!..

ಬಿಬಿಎಂಪಿ ಹಾಸ್ಟೆಲ್‌ ಹಾಗೂ ಪಿಜಿಯಲ್ಲಿ ಇರುವವರನ್ನು ಖಾಲಿ ಮಾಡಿಸುವಂತೆ ಸೂಚಿಸಿಲ್ಲ. ಬಿಬಿಎಂಪಿಯ ಸೂಚನೆಯಂತೆ ಹಾಸ್ಟೆಲ್‌ ಮತ್ತು ಪಿಜಿಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ನಿಗದಿಗಿಂತ ಹೆಚ್ಚಿನ ಜನದಟ್ಟಣೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. 

ಮುಖ್ಯವಾಗಿ ಐಟಿ ಬಿಟಿ ಹಾಗೂ ಇತರೆ ಉದ್ಯೋಗಿಗಳನ್ನು ಖಾಲಿ ಮಾಡಿಸುವಂತೆ ತಿಳಿಸಿಲ್ಲ. ಐಟಿ ಬಿಟಿ ಹಾಗೂ ಇತರೆ ಉದ್ಯೋಗಿಗಳಿಗೆ ಸಾಧ್ಯವಾದಷ್ಟುಮನೆಯಿಂದ ಕಾರ್ಯನಿರ್ವಹಿಸುವಂತೆ (ವರ್ಕ್ ಫ್ರಮ್‌ ಹೋಂ) ಶಿಫಾರಸು ಮಾಡಿದ್ದೇವೆ. ಇನ್ನು ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ವಿದ್ಯಾರ್ಥಿಗಳು ಹಾಸ್ಟಲ್‌ ಹಾಗೂ ಪಿಜಿ ಬಿಟ್ಟು ಮನೆಗೆ ಹೋಗುವಂತೆ ಸಲಹೆ ನೀಡಿದ್ದೇವೆ. ಆದರೆ, ವಿದ್ಯಾರ್ಥಿಗಳು ಹಾಸ್ಟೆಲ್‌ ಮತ್ತು ಪಿಜಿಯಲ್ಲಿ ಇರುವುದಾದರೆ ಬೇಡ ಎನ್ನುವಂತಿಲ್ಲ ಎಂದು ಡಾ.
ರವಿಕುಮಾರ್‌ ಸುರಪುರ ಹಾಸ್ಟಲ್‌ ಹಾಗೂ ಪಿಜಿ ಮಾಲಿಕರಿಗೆ ಸೂಚಿಸಿದ್ದಾರೆ.