ಅಮರಾವತಿ(ಮಾ.20): ಪ್ರತಿನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುವ ವಿಶ್ವ ಪ್ರಸಿದ್ಧ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೂ ಕೊರೋನಾ ವೈರಸ್‌ ಬಿಸಿ ತಟ್ಟಿದೆ. ಕೊರೋನಾ ವೈರಸ್‌ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವೆಂಕಟೇಶ್ವರ ದೇವಾಲಯಕ್ಕೆ ಮಾ.31ರ ವರೆಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಅಲ್ಲದೇ ಆಂಧ್ರಪ್ರದೇಶದ ಎಲ್ಲಾ ಪ್ರಮುಖ ದೇವಾಲಯಗಳಲ್ಲಿಯೂ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಆಂಧ್ರ ಪ್ರದೇಶ ಸರ್ಕಾರ ಗುರುವಾರ ಪ್ರಕಟಿಸಿದೆ.

ಕೊರೋನಾ ವಿರುದ್ಧ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದ ವೈದ್ಯಕೀಯ ಮತ್ತು ಆರೋಗ್ಯ ಸಚಿವ ಕೆ.ಕೆ. ಶ್ರೀನಿವಾಸ್‌, ತಿರುಪತಿಯಲ್ಲಿ ಮಾ.31ರ ವರೆಗೆ ಭಕ್ತರಿಗೆ ಪ್ರವೇಶ ಇರುವುದಿಲ್ಲ. ಆದರೆ, ದೇವಾಲಯಗಳಲ್ಲಿ ಎಂದಿನಂತೆ ಪೂಜೆ ಪುನಸ್ಕಾರಗಳು ನೆರವೇಲಿವೆ ಎಂದು ಹೇಳಿದ್ದಾರೆ.

ತಿರುಪತಿಗೆ ಪ್ರತಿನಿತ್ಯ 50 ಸಾವಿರದಿಂದ 1 ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ಹಬ್ಬ ಹಾಗೂ ಉತ್ಸವದ ಸಂದರ್ಭದಲ್ಲಿ ದಿನಕ್ಕೆ ಸುಮಾರು 5 ಲಕ್ಷ ಮಂದಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ.

ತಿರುಪತಿ ದೇಗುಲವನ್ನು ಹೀಗೆ ಭಕ್ತರಿಗೆ ಮುಚ್ಚುವುದು ತೀರಾ ಅಪರೂಪ. 2018ರಲ್ಲಿ ಒಮ್ಮೆ 6 ದಿನಗಳ ಕಾಲ ದೇಗುಲದ ಸ್ವಚ್ಛತಾ ಕಾರ್ಯಗಳಿಗಾಗಿ ಮುಚ್ಚಲಾಗಿತ್ತು.

ಪುರಿ ಜಗನ್ನಾಥನ ದರ್ಶನವೂ ಬಂದ್‌

ಇದೇ ವೇಳೆ ಕೊರೋನಾ ವೈರಸ್‌ ಹರಡದಂತೆ ತಡೆಯುವ ನಿಟ್ಟಿನಿಂದ ಒಡಿಶಾಸ ಪುರಿ ಜಗನ್ನಾಥ ದೇವಾಲಯದಲ್ಲಿಯೂ ಭಕ್ತರ ಭೇಟಿಗೆ ನಿರ್ಬಂಧ ಹೇರಲಾಗಿದೆ ಎಂದು ದೇವಾಲಯ ಆಡಳಿತ ಮಂಡಳಿಯ ಮುಖ್ಯಸ್ಥ ಕೃಷ್ಣ ಕುಮಾರ್‌ ತಿಳಿಸಿದ್ದಾರೆ.