ವರದಿ : ಮಂಡ್ಯ ಮಂಜುನಾಥ

 ಮಂಡ್ಯ (ಸೆ/14):  ಕೊರೋನಾ ತಂದೊಡ್ಡಿದ ಸಂಕಷ್ಟಪರಿಸ್ಥಿತಿಗೆ ಎಲ್ಲ ಕ್ಷೇತ್ರಗಳು ತಲ್ಲಣಿಸಿಹೋಗಿದ್ದರೆ ಕೃಷಿ ಕ್ಷೇತ್ರಕ್ಕೆ ಮಾತ್ರ ಅದರ ಎಫೆಕ್ಟ್ ತಟ್ಟಿಲ್ಲ. ಉತ್ತಮ ವರ್ಷಧಾರೆಯ ನಡುವೆ ಈ ವರ್ಷ ದಾಖಲೆಯ ಬಿತ್ತನೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.24.7 ಹೆಚ್ಚುವರಿ ಬಿತ್ತನೆ ನಡೆದಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಪ್ರಸಕ್ತ ವರ್ಷ ಸಕಾಲದಲ್ಲಿ ಉತ್ತಮ ಮಳೆಯಾಗಿ ಕೃಷ್ಣರಾಜಸಾಗರ ಜಲಾಶಯವೂ ಭರ್ತಿಯಾಯಿತು. ನಾಲೆಗಳಲ್ಲಿ ನೀರು ಹರಿಯುತ್ತಿರುವುದರಿಂದ ಕೃಷಿ ಚಟುವಟಿಕೆಗೆ ಪೂರಕ ವಾತಾವರಣ ಸೃಷ್ಟಿಯಾಯಿತು. ಇದರ ಬೆನ್ನಹಿಂದೆಯೇ ಕೃಷಿ ಚಟುವಟಿಕೆಗಳು ಗರಿಗೆದರಿದವು. ಭತ್ತ, ಏಕದಳ, ದ್ವಿದಳಧಾನ್ಯ, ಕಬ್ಬು ಬಿತ್ತನೆ ಕಾರ್ಯ ಬಿರುಸುಗೊಂಡಿತು. ಇದರ ಪರಿಣಾಮ ಸೆಪ್ಟೆಂಬರ್‌ ತಿಂಗಳ ಮಧ್ಯದ ವೇಳೆಗೆ ಶೇ.82.8ರಷ್ಟುಬಿತ್ತನೆ ನಡೆದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಿಲ್ಲೆಯೊಳಗೆ ಶೇ.58.1ರಷ್ಟುಬಿತ್ತನೆ ನಡೆದಿತ್ತು.

ತೆಕ್ಕಲು ಭೂಮಿಯಲ್ಲೂ ಕೃಷಿ:

ಕೊರೋನಾ ಸಂಕಷ್ಟಕ್ಕೆ ಹೆದರಿ ಮಹಾನಗರಗಳು ಹಾಗೂ ಹೊರ ಜಿಲ್ಲೆಗಳಿಂದ ವಾಪಸಾದವರು ಬಹುತೇಕ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇದರಿಂದ ದಶಕಗಳಿಂದ ತೆಕ್ಕಲು ಬಿದ್ದಿದ್ದ ಭೂಮಿಗಳಲ್ಲೂ ಕೃಷಿ ಚಟುವಟಿಕೆ ಆರಂಭಗೊಂಡಿದೆ. ಉದ್ಯೋಗವನ್ನು ಕಳೆದುಕೊಂಡವರು ಕೃಷಿಯನ್ನು ಜೀವನಾಧಾರ ಮಾಡಿಕೊಂಡಿರುವುದರಿಂದ ಶೇಕಡಾವಾರು ಬಿತ್ತನೆ ಪ್ರಮಾಣ ಹೆಚ್ಚಳವಾಗಿದೆ.

ಕೊರೋನಾ ಕಾಲದಲ್ಲಿ ಮೋದಿ ಅಣಿಮುತ್ತೇ ಜನರ ತಾಕತ್ತು! ..

ಪಿತ್ರಾರ್ಜಿತವಾಗಿ ಬಂದಿದ್ದ ಒಂದು ಅಥವಾ ಎರಡು ಎಕರೆ ಭೂಮಿಯಲ್ಲಿ ಯಾರೂ ಕೃಷಿ ಚಟುವಟಿಕೆ ನಡೆಸುತ್ತಿರಲಿಲ್ಲ. ಉದ್ಯೋಗವನ್ನರಸಿಕೊಂಡು ನಗರಗಳತ್ತ ಮುಖ ಮಾಡಿದವರು ಕುಟುಂಬ ಸಹಿತ ಅಲ್ಲಿಯೇ ನೆಲೆಸಿದ್ದರು. ಊರಿನಲ್ಲಿರುವ ಜಮೀನಿನಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳದೆ ಹಲವರು ಬೀಳು ಬಿಟ್ಟಿದ್ದರೆ, ಮತ್ತಷ್ಟುಜನರು ಬೇರೆಯವರಿಗೆ ಗುತ್ತಿಗೆ ಕೊಟ್ಟು ಕೃಷಿ ಚಟುವಟಿಕೆ ನಡೆಸುವಂತೆ ಮಾಡಿದ್ದರು. ಇನ್ನೂ ಕೆಲವರು ಸ್ಥಳೀಯವಾಗಿಯೇ ಇದ್ದರೂ ಖರ್ಚು ಹೆಚ್ಚು ಎಂಬ ಕಾರಣಕ್ಕೆ ಕೃಷಿಯಿಂದ ದೂರವೇ ಉಳಿದಿದ್ದರು. ಈ ಕಾರಣದಿಂದ ಕೃಷಿ ಚಟುವಟಿಕೆಯನ್ನೇ ಕಾಣದೆ ತೆಕ್ಕಲು ಬಿದ್ದಿದ್ದ ಭೂಮಿಯೇ ಹೆಚ್ಚಿತ್ತು.

ಅನಿವಾರ್ಯ ಪರಿಸ್ಥಿತಿ:

ಮಹಾನಗರಗಳಿಗೆ ಹಾಗೂ ನಗರ ಪ್ರದೇಶಗಳಲ್ಲಿ ಉದ್ಯೋಗ ಕಂಡುಕೊಂಡಿದ್ದ ಜಿಲ್ಲೆಯ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಕೊರೋನಾ ಸೋಂಕಿಗೆ ಹೆದರಿ ಎಲ್ಲರೂ ತವರೂರಿಗೆ ವಾಪಸಾದರು. ನಗರ ಪ್ರದೇಶಗಳಲ್ಲಿ ಕೊರೋನಾ ಸೋಂಕಿನ ತೀವ್ರತೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಸ್ವಗ್ರಾಮಗಳಿಗೆ ಹಿಂತಿರುಗಿರುವ ಜನರು ಮತ್ತೆ ಅತ್ತ ಕಡೆ ಮುಖ ಮಾಡುತ್ತಿಲ್ಲ. ಜೀವನ ನಿರ್ವಹಣೆಗೆ ಕೃಷಿಯನ್ನು ಅವಲಂಬಿಸುವುದು ಅವರಿಗೆ ಅನಿವಾರ್ಯವೂ ಆಗಿದೆ.

ಕೊರೋನಾ ಸಕ್ರಿಯ ಸೋಂಕಿತರು: ದೇಶದಲ್ಲೇ ಬೆಂಗಳೂರಿಗೆ 2ನೇ ಸ್ಥಾನ!

ಇದೇ ಕಾರಣದಿಂದ ಹಲವರು ಬೀಳು ಬಿದ್ದಿದ್ದ ಜಮೀನಿನಲ್ಲಿ ಕೃಷಿ ಚಟುವಟಿಕೆಯನ್ನು ಕೈಗೊಂಡಿದ್ದರೆ, ಇನ್ನೂ ಕೆಲವರು ಬೇರೆಯವರಿಗೆ ಗುತ್ತಿಗೆ ನೀಡಿದ್ದ ಜಮೀನನ್ನು ವಾಪಸ್‌ ಪಡೆದುಕೊಂಡು ಕೃಷಿ ನಡೆಸುತ್ತಿದ್ದಾರೆ. ತವರು ಬಿಟ್ಟು ವಲಸೆ ಹೋಗಿದ್ದವರು ಹಿಂತಿರುಗಿರುವುದರಿಂದ ವೃದ್ಧಾಶ್ರಮದಂತಾಗಿದ್ದ ಹಳ್ಳಿಗಳು ಈಗ ತುಂಬು ಕುಟುಂಬಗಳಾಗಿವೆ. ಮನೆಗಳಲ್ಲಿ ಹೆಚ್ಚು ಸಂಖ್ಯೆಯ ಜನರು ಇರುವುದರಿಂದ ಎಲ್ಲರೂ ಒಟ್ಟಾಗಿ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ವ್ಯವಸಾಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ಬಂದಿದೆ.

ಕೃಷಿಯಲ್ಲೇ ಬದುಕು ಕಟ್ಟಿಕೊಳ್ಳುವ ಪ್ರಯತ್ನ:

ಕೊರೋನಾ ತಂದಿಟ್ಟತುರ್ತು ಪರಿಸ್ಥಿತಿ ಸದ್ಯಕ್ಕೆ ನಿವಾರಣೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಮುಂದಿನ ಒಂದು ವರ್ಷ ಉದ್ಯೋಗವಕಾಶಗಳು ಸೃಷ್ಟಿಯಾಗುವ ಬಗ್ಗೆ ನಂಬಿಕೆಯೂ ಇಲ್ಲ. ಹಾಗಾಗಿ ಹೊರಗಿನಿಂದ ಬಂದ ಬಹಳಷ್ಟುಜನರು ಕೃಷಿಯಲ್ಲೇ ಬದುಕುಕಟ್ಟಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.

ಹೊರಗಿನಿಂದ ಬಂದವರಲ್ಲಿ ಬಹಳಷ್ಟುಯುವಕರು ಕೃಷಿಯತ್ತ ಮುಖ ಮಾಡಿದ್ದಾರೆ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಹಳ್ಳಿಗಳಲ್ಲಿರುವ ಹಿರಿಯರು ಮತ್ತೆ ನಗರ ಪ್ರದೇಶಗಳಿಗೆ ತೆರಳದಂತೆ ಮನವೊಲಿಸಿದ್ದಾರೆ. ಹೊಸದಾಗಿ ಜಮೀನು ಖರೀದಿಸಿ ವ್ಯವಸಾಯದಲ್ಲಿ ತೊಡಗುವಂತೆ ಮಾಡುತ್ತಿದ್ದಾರೆ. ಇದೂ ಸಹ ಜಿಲ್ಲೆಯಲ್ಲಿ ಕೃಷಿ ಕ್ಷೇತ್ರ ಬೆಳವಣಿಗೆಯತ್ತ ಸಾಗಲು ಕಾರಣವಾಗಿದೆ.

ಭತ್ತ-ರಾಗಿ ಬಿತ್ತನೆ ಬಹುತೇಕ ಪೂರ್ಣ

ಮಂಡ್ಯ: ಉತ್ತಮ ಮಳೆ ಹಾಗೂ ನಾಲೆಗಳಿಗೆ ನೀರು ಹರಿಸುತ್ತಿರುವುದರಿಂದ ಭತ್ತ ಮತ್ತು ರಾಗಿ ಬಿತ್ತನೆ ಎಲ್ಲೆಡೆ ತೀವ್ರ ಚುರುಕುಗೊಂಡಿದೆ. ಭತ್ತ ಬಿತ್ತನೆ ಶೇ.91ರಷ್ಟುಪೂರ್ಣಗೊಂಡಿದ್ದರೆ, ರಾಗಿ ಬಿತ್ತನೆಯಲ್ಲಿ ಶೇ.78.2ರಷ್ಟುಸಾಧನೆ ಮಾಡಿದೆ. ಕಳೆದ ವರ್ಷ ಇದೇ ವೇಳೆ ಭತ್ತ ಶೇ.55.3ರಷ್ಟುಬಿತ್ತನೆ ನಡೆದಿದ್ದರೆ, ರಾಗಿ ಶೇ.66.8ರಷ್ಟುಮಾತ್ರ ಬಿತ್ತನೆಯಾಗಿತ್ತು.

ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 52,733 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ, 47,964 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆ ನಡೆದಿದೆ. ಕಳೆದ ವರ್ಷ 1027 ಹೆಕ್ಟೇರ್‌ನಲ್ಲಿದ್ದ ಮುಸುಕಿನ ಜೋಳ ಈ ಸಾಲಿನಲ್ಲಿ 5404 ಹೆಕ್ಟೇರ್‌ನಲ್ಲಿ ಬೆಳೆಯಲಾಗಿದೆ.

ಜಿಲ್ಲೆಯ 24197 ಹೆಕ್ಟೇರ್‌ನಲ್ಲಿ ಕಬ್ಬು ಬಿತ್ತನೆ ನಡೆದು ಶೇ.74.1ರಷ್ಟುಸಾಧನೆ ಮಾಡಿದೆ. ಕಳೆದ ವರ್ಷ ಇದೇ ವೇಳೆ 16669 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ನಡೆದು ಶೇ.53.6ರಷ್ಟುಮಾತ್ರ ಸಾಧನೆ ಮಾಡಲಾಗಿತ್ತು.

ದ್ವಿದಳ ಧಾನ್ಯ ಬಿತ್ತನೆ 12462 ಹೆಕ್ಟೇರ್‌ನಲ್ಲಿ ನಡೆದಿದೆ. ಎಣ್ಣೆಕಾಳುಗಳಾದ ನೆಲಗಡಲೆ, ಎಳ್ಳು, ಹರಳು, ಹುಚ್ಚೆಳ್ಳು ಬೆಳೆಯನ್ನು 6275 ಹೆಕ್ಟೇರ್‌ನಲ್ಲಿ ಬೆಳೆದು ಶೇ.75ರಷ್ಟುಸಾಧನೆ ಮಾಡಿದ್ದರೆ ಕಳೆದ ಸಾಲಿನಲ್ಲಿ 3834 ಹೆಕ್ಟೇರ್‌ನಲ್ಲಿ ಬೆಳೆದು ಶೇ.45.1ರಷ್ಟುಸಾಧನೆ ಮಾಡಲಾಗಿತ್ತು.