Asianet Suvarna News Asianet Suvarna News

ಕೊರೋನಾ ಸಕ್ರಿಯ ಸೋಂಕಿತರು: ದೇಶದಲ್ಲೇ ಬೆಂಗಳೂರಿಗೆ 2ನೇ ಸ್ಥಾನ!

1.70 ಲಕ್ಷಕ್ಕೆ ಏರಿದ ಸೋಂಕಿತರ ಸಂಖ್ಯೆ| ಮುಂಬೈಯನ್ನು ಹಿಂದಿಕ್ಕಿದ ರಾಜಧಾನಿ| ಕೊರೋನಾ ಹಾಟ್‌ಸ್ಪಾಟ್‌ ದೆಹಲಿ, ಮುಂಬೈನಲ್ಲಿ ಏರಿಕೆ ಪ್ರಮಾಣದಲ್ಲಿ ಇಳಿಕೆ| ಪುಣೆಗೆ ಮೊದಲ ಸ್ಥಾನ| 

Bengaluru Ranks 2nd in the Country for Corona Active Cases
Author
Bengaluru, First Published Sep 14, 2020, 7:12 AM IST

ಬೆಂಗಳೂರು(ಸೆ.14): ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಕೊರೋನಾ ಸೋಂಕಿತ ಸಕ್ರಿಯ ಪ್ರಕರಣಗಳಿದ್ದು, ಈ ಮೂಲಕ ದೇಶದಲ್ಲಿ ಅತಿ ಹೆಚ್ಚಿನ ಸಕ್ರಿಯ ಪ್ರಕರಣ ಹೊಂದಿರುವ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನಕ್ಕೇರಿದೆ.

ಕೊರೋನಾ ಸೋಂಕಿನ ಭೀತಿ ಆರಂಭವಾಗಿ ಏಳು ತಿಂಗಳು ಕಳೆದಿದೆ. ದೇಶದ ಕೋವಿಡ್‌ ಹಾಟ್‌ಸ್ಪಾಟ್‌ ಆಗಿದ್ದ ದೆಹಲಿ ಮತ್ತು ಮುಂಬೈ ನಗರಗಳಲ್ಲಿ ಸೋಂಕಿತರ ಏರಿಕೆ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗುತ್ತಿದೆ. ಆದರೆ, ಪುಣೆ ಮತ್ತು ಬೆಂಗಳೂರಿನಲ್ಲಿ ಏರಿಕೆ ಪ್ರಮಾಣ ಮುಂದುವರಿಯುತ್ತಲಿದೆ. ಮಹಾರಾಷ್ಟ್ರದ ಪುಣೆ 72,835 ಸಕ್ರಿಯ ಪ್ರಕರಣ ಹೊಂದಿದ್ದು, ದೇಶದ ಮೊದಲ ಸ್ಥಾನದಲ್ಲಿದೆ. ಇದರ ನಂತರದ ಸ್ಥಾನವನ್ನು ರಾಜಧಾನಿ ಬೆಂಗಳೂರು ಪಡೆದುಕೊಂಡಿದೆ. ಶನಿವಾರದ (ಸೆ.12) ಅಂತ್ಯಕ್ಕೆ ಬರೋಬ್ಬರಿ 40,936 ಸಕ್ರಿಯ ಸೋಂಕು ಪ್ರಕರಣಗಳಿರುವ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಜೂನ್‌ ಮತ್ತು ಜುಲೈ ತಿಂಗಳಲ್ಲಿ ಸೋಂಕಿತರ ಸಂಖ್ಯೆ ಕ್ರಮವಾಗಿ ಶೇ.18 ಮತ್ತು ಶೇ.24 ಏರಿಕೆ ದರದಲ್ಲಿ ಸಾಗುತ್ತಿತ್ತು. ಆಗ, ಹಾಸಿಗೆ ಸಿಗದೆ ಸಾಕಷ್ಟುರೋಗಿಗಳು ಪರದಾಡಿದರು. ಈಗ ಮತ್ತದೇ ಸಮಸ್ಯೆ ಮರುಕಳಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಕರ್ನಾಟಕದಲ್ಲಿ ನಿಲ್ಲದ ಕೊರೋನಾ ರಣಕೇಕೆ: ಇಲ್ಲಿದೆ ಭಾನುವಾರದ ಅಂಕಿ-ಸಂಖ್ಯೆ

ಕೋವಿಡ್‌ ಪೋರ್ಟಲ್‌ ತಾಂತ್ರಿಕ ಸಮಸ್ಯೆ:

ಸರ್ಕಾರ ಹಾಗೂ ಬಿಬಿಎಂಪಿ ವತಿಯಿಂದ ಕೊರೋನಾ ಸೋಂಕಿತರನ್ನು ವ್ಯವಸ್ಥಿತವಾಗಿ ಆಸ್ಪತ್ರೆಗೆ ದಾಖಲಿಸುವುದು, ಕೋವಿಡ್‌ ಆರೈಕೆ ಕೇಂದ್ರಕ್ಕೆ ರವಾನಿಸುವುದು ಹಾಗೂ ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರಿಗೆ ಔಷಧ ಮತ್ತು ಊಟೋಪಚಾರದ ಬಗ್ಗೆ ಮಾಹಿತಿ ನೀಡಲು ಕೋವಿಡ್‌ ಪೋರ್ಟಲ್‌ ಬಳಕೆ ಮಾಡಲಾಗುತ್ತಿದೆ. ಆದರೆ, ಸೋಂಕಿತರ ಜೀವ ಕಾಪಾಡುವ ಪೋರ್ಟಲ್‌ನಲ್ಲಿ ಆಗಿಂದಾಗ್ಗೆ ತಾಂತ್ರಿಕ ಸಮಸ್ಯೆಗಳು ಕಂಡುಬರುತ್ತಿದ್ದು, ಸೋಂಕಿತರನ್ನು ಆಸ್ಪತ್ರೆಗೆ ಸೇರಿಸುವಲ್ಲಿ ವಿಳಂಬವಾಗುತ್ತಿದೆ. ಜತೆಗೆ, ಆಸ್ಪತ್ರೆವಾರು ಹಾಸಿಗೆ ಲಭ್ಯತೆ ಮತ್ತು ಚಿಕಿತ್ಸೆ ಪಡೆಯುತ್ತಿರುವ ಮಾಹಿತಿ ಸಿಗದೆ ಪಾಲಿಕೆ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.

ಸೋಂಕು ನಿಯಂತ್ರಣ ಕಾರ್ಯಕ್ಕೆ ಹಿನ್ನಡೆ?

ನಗರದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ವಿವಿಧ ಇಲಾಖೆಗಳ ನೂರಾರು ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿತ್ತು. ಆದರೆ, ಈಗ ಎಲ್ಲ ಅಧಿಕಾರಿಗಳನ್ನು ಪುನಃ ಅವರ ಇಲಾಖೆಗಳಿಗೆ ವಾಪಸ್‌ ಕಳಿಸಲಾಗಿದ್ದು, ಸೋಂಕು ನಿಯಂತ್ರಣ ಹಾದಿ ತಪ್ಪುತ್ತಿದೆ. ಜತೆಗೆ, ಹೋಂ ಐಸೋಲೇಷನ್‌ ಇರುವಂತೆ ಸೋಂಕಿತರಿಗೆ ಪಾಲಿಕೆ ಅಧಿಕಾರಿಗಳು ಸಲಹೆ ನೀಡುತ್ತಿದ್ದು, 10 ರಿಂದ 15 ದಿನ ಕಳೆದರೂ ಗುಣಮುಖರಾಗುತ್ತಿಲ್ಲ. ಮನೆ- ಮನೆ ಆರೋಗ್ಯ ಸಮೀಕ್ಷೆ ಮಾಡುವ ಶಿಕ್ಷಕರು ಕೂಡ, ವಿದ್ಯಾಗಮ ಯೋಜನೆ ಮತ್ತು ಪಾಲಿಕೆ ಚುನಾವಣೆ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ.

ನಗರ ಸಕ್ರಿಯ ಪ್ರಕರಣಗಳ ಸಂಖ್ಯೆ (ಸೆ.12ರ ಅಂತ್ಯಕ್ಕೆ)

ಪುಣೆ 72,835
ಬೆಂಗಳೂರು 40,936
ಮುಂಬೈ 29,176
ದೆಹಲಿ 28,059
ಚೆನ್ನೈ 10,879
ಲಕ್ನೋ 9,260
ಕೋಲ್ಕತ್ತಾ 4,615

ಹೆಚ್ಚು ಸೋಂಕಿತರ ಸಂಖ್ಯೆ: ಬೆಂಗಳೂರಿಗೆ 3ನೇ ಸ್ಥಾನ

ದೇಶದ ಮಹಾನಗರಗಳ ಪೈಕಿ ಅತಿ ಹೆಚ್ಚು ಸೋಂಕಿತ ಪ್ರಕರಣಗಳನ್ನು ಹೊಂದಿದ ನಗರಗಳ ಪೈಕಿ ರಾಜಧಾನಿ ಬೆಂಗಳೂರು ಮೂರನೇ ಸ್ಥಾನಕ್ಕೆ ಏರಿದೆ. ಭಾನುವಾರ ಬೆಂಗಳೂರಿನಲ್ಲಿ 3,479 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗುವ ಮೂಲಕ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 1,70,662 ಕ್ಕೆ ಏರಿಕೆಯಾಗಿದೆ. ಈ ಮೂಲಕ ದೇಶದ ವಾಣಿಜ್ಯ ನಗರಿ ಮುಂಬೈ ನಗರವನ್ನು ಹಿಂದಿಕ್ಕಿ ಬೆಂಗಳೂರು ಮೂರನೇ ಸ್ಥಾನಕ್ಕೆ ಏರಿದೆ. ಶನಿವಾರ ಮುಂಬೈನಲ್ಲಿ ಬೆಂಗಳೂರಿಗಿಂತ ಕಡಿಮೆ 2,085 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿವೆ. ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 1,69,741ಕ್ಕೆ ಏರಿಕೆಯಾಗಿದೆ. ಹೀಗಾಗಿ, ಬೆಂಗಳೂರು ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿದಿದೆ. ಇನ್ನು ಮಹಾರಾಷ್ಟ್ರದ ಪುಣೆ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಎರಡನೇ ಸ್ಥಾನದಲ್ಲಿ ರಾಷ್ಟ್ರದ ರಾಜಧಾನಿ ದೆಹಲಿ ಇದೆ.

ಬೆಂಗಳೂರಿನಲ್ಲಿ ಭಾನುವಾರ 3,270 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಗುಣಮುಖರ ಸಂಖ್ಯೆ 1,27,132ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 41,093ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ 45 ಮಂದಿ ಮೃತರಾಗಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ 268 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಮಹಾನಗರದ ಕೊರೋನಾ ಸೋಂಕಿತರ ವಿವರ (ಸೆ.13)

ನಗರ ಒಟ್ಟು ಸೋಂಕಿತರ ಸಂಖ್ಯೆ ಗುಣಮುಖರ ಸಂಖ್ಯೆ ಸಕ್ರಿಯ ಪ್ರಕರಣ ಸಾವು

ಪುಣೆ 2,32,840 1,50,403 77,624 4,813
ದೆಹಲಿ 2,18,304 1,84,698 28,862 4,744
ಬೆಂಗಳೂರು 1,70,662 1,27,132 41,093 2,436
ಚೆನ್ನೈ 1,48,584 1,35,215 10,196 2,973
ಕೊಲ್ಕತ್ತಾ 46,589 40,955 4,160 1,473
ಲಕ್ನೋ 39,188 29,117 9,555 516

Follow Us:
Download App:
  • android
  • ios