Asianet Suvarna News Asianet Suvarna News

ಕೊರೊನಾ : ರಾಜ್ಯದಲ್ಲಿ ಪತ್ತೆಯಾದ 5 ಪ್ರಕರಣವೂ ನೆಗೆಟಿವ್‌

 ಕೊರೋನಾ ಸೋಂಕಿತ ಟೆಕಿಯ ಬೆಂಗಳೂರಿನ ಫ್ಲ್ಯಾಟ್‌ಮೇಟ್‌ ಹಾಗೂ ಸಹೋದ್ಯೋಗಿ ಸೇರಿದಂತೆ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಗೆ ದಾಖಲಾಗಿದ್ದ ಐದು ಮಂದಿ ಶಂಕಿತರಿಗೂ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. 

Corona negetive in 5 Cases in Karnataka
Author
Bengaluru, First Published Mar 5, 2020, 7:44 AM IST

ಬೆಂಗಳೂರು [ಮಾ.05]:  ರಾಜ್ಯಾದ್ಯಂತ ಆತಂಕಕ್ಕೆ ಕಾರಣವಾಗಿದ್ದ ಹೈದರಾಬಾದ್‌ ಮೂಲದ ಕೊರೋನಾ ಸೋಂಕಿತ ಟೆಕಿಯ ಬೆಂಗಳೂರಿನ ಫ್ಲ್ಯಾಟ್‌ಮೇಟ್‌ ಹಾಗೂ ಸಹೋದ್ಯೋಗಿ ಸೇರಿದಂತೆ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಗೆ ದಾಖಲಾಗಿದ್ದ ಐದು ಮಂದಿ ಶಂಕಿತರಿಗೂ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಹೀಗಾಗಿ, ರಾಜ್ಯ ಸದ್ಯಕ್ಕೆ ಕೊರೋನಾದಿಂದ ಸುರಕ್ಷಿತ!

ಕೊರೋನಾ ಸೋಂಕಿನ ಶಂಕೆಯಿಂದಾಗಿ ಹೈದಾರಾಬಾದ್‌ನಲ್ಲಿ ಸೋಂಕು ದೃಢಪಟ್ಟಿದ್ದ ಟೆಕಿಯ ಬೆಂಗಳೂರಿನ ಫ್ಲ್ಯಾಟ್‌ಮೇಟ್‌ ಹಾಗೂ ಸಹೋದ್ಯೋಗಿಯನ್ನು ರಾಜೀವ್‌ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರಿಗೂ ಅಂತಿಮ ಪರೀಕ್ಷೆಯಲ್ಲಿ ಕೊರೋನಾ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಹೀಗಾಗಿ ಗುರುವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಯಲ್ಲೇ ನಿಗಾದಲ್ಲಿಡಲಾಗುವುದು.

ಉಳಿದಂತೆ ಕಳೆದ ಫೆ.27ರಂದು ಇರಾನ್‌ನಿಂದ ಆಗಮಿಸಿದ್ದ ದಂತ ವೈದ್ಯ ವಿದ್ಯಾರ್ಥಿಯ ತಾಯಿಗೆ ಇರಾನ್‌ನಲ್ಲಿ ಕೊರೋನಾ ಸೋಂಕು ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜೀವ್‌ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ವ್ಯಕ್ತಿಯ ಗಂಟಲು ಸ್ವಾ್ಯಬ್‌ ಹಾಗೂ ರಕ್ತ ಪರೀಕ್ಷೆ ಎರಡರಲ್ಲೂ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಅಲ್ಲದೆ, ಇರಾನ್‌ನಲ್ಲಿ ಅವರ ತಾಯಿಗೂ ಕೊರೋನಾ ನೆಗೆಟಿವ್‌ ಬಂದಿದೆ. ಹೀಗಾಗಿ ಗುರುವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ.

ಇನ್ನು ಜಪಾನ್‌ ಹಾಗೂ ಸೌದಿ ಅರೇಬಿಯಾ ಮೂಲದ ಇಬ್ಬರು ಶಂಕಿತರಿಗೂ ನೆಗೆಟಿವ್‌ ಬಂದಿದೆ. ಹೀಗಾಗಿ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದ ಐದೂ ಮಂದಿಯ ವರದಿಗಳಲ್ಲೂ ಸೋಂಕು ಇಲ್ಲದಿರುವುದು ದೃಢಪಟ್ಟಿದೆ ಎಂದು ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ. ನಾಗರಾಜ್‌ ತಿಳಿಸಿದ್ದಾರೆ.

ಡಿಪೋಗಳಲ್ಲಿ ಬಸ್ಸುಗಳ ಸ್ವಚ್ಛತೆ 

ಕೊರೋನಾ ಭೀತಿಯಿಂದಾಗಿ ರಾಜ್ಯರಸ್ತೆ ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ಸುಗಳ ಡಿಪೋಗಳಲ್ಲಿ ಬಸ್‌ಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಇದಲ್ಲದೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿ ಬರುವ ಬಸ್ಸುಗಳ ಸ್ವಚ್ಛತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಲ್ಲಾ ಬಸ್ಸುಗಳಿಗೆ ಆ್ಯಂಟಿ ಬ್ಯಾಕ್ಟೀರಿಯಾ ಕೆಮಿಕಲ್‌ಗಳನ್ನು ಸಿಂಪಡಿಸಲಾಗಿದ್ದು, ಚಾಲಕರು ಹಾಗೂ ನಿರ್ವಾಹಕರಿಗೆ ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಸೂಚಿಸಲಾಗಿದೆ.

Follow Us:
Download App:
  • android
  • ios