ಬೆಂಗಳೂರು [ಮಾ.18]:  ಕೊರೋನಾ ವೈರಸ್‌ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ರಾಜ್ಯಾದ್ಯಂತ ಶಾಪಿಂಗ್‌ ಮಾಲ್‌, ಚಿತ್ರಮಂದಿರ ಬಂದ್‌, ಸಭೆ-ಸಮಾರಂಭಕ್ಕೆ ನಿರ್ಬಂಧ ಮಂಗಳವಾರಕ್ಕೆ ನಾಲ್ಕು ದಿನ ಪೂರೈಸಿದೆ. ದಿನದಿಂದ ದಿನಕ್ಕೆ ನಗರದಲ್ಲಿ ಹೊರ ಓಡಾಡುವವರ ಸಂಖ್ಯೆ ಕಡಿಮೆಯಾಗುತ್ತಾ ಸಾಗಿದೆ.

ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಮುನ್ನೆಚ್ಚರಿಕೆ ಕ್ರಮಗಳನ್ನು ಜಟಿಲಗೊಳಿಸುತ್ತಿದೆ. ಇನ್ನು ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಜನ ಮನೆಯಿಂದ ಹೊರಗೆ ಬರುವುದಕ್ಕೆ ಹಿಂದೇಟು ಹಾಕಿದ್ದು,  ಬಹುತೇಕ ರಸ್ತೆ, ಪಾರ್ಕ್, ಮೈದಾನ ಸೇರಿದಂತೆ ಇನ್ನಿತರ ಪ್ರದೇಶಗಳ ಜನಸಂಖ್ಯೆ ಸಾಮಾನ್ಯಕ್ಕಿಂತ ಕಡಿಮೆಯಾಗಿತ್ತು.

ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವುದರಿಂದ ಬಿಎಂಟಿಸಿ ಶೇ.17ರಷ್ಟುಅಂದರೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಬಸ್‌ಗಳ ಸಂಚಾರವನ್ನು ಕಡಿತಗೊಳಿಸಿದೆ. ಇನ್ನು ಆಟೋ, ಕ್ಯಾಬ್‌ ಚಾಲಕರು ಗ್ರಾಹಕರಿಲ್ಲದೇ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ ದೃಶ್ಯಗಳು ಕಂಡು ಬಂದವು. ಸಾಮಾನ್ಯ ದಿನಗಳಲ್ಲಿ ಒಬ್ಬ ಆಟೋ ಚಾಲಕ ಸುಮಾರು 800 ರಿಂದ 1 ಸಾವಿರ ರು. ವರೆಗೆ ಆದಾಯ ಗಳಿಸುತ್ತಿದ್ದವರು. ಇದೀಗ ದಿನಕ್ಕೆ ಕೇವಲ 250ರಿಂದ 300 ರುಪಾಯಿ ಗಳಿಸುವಂತಾಗಿದೆ.

ಏರ್‌ಪೋರ್ಟ್‌ಲ್ಲಿ ನಡೆಯುತ್ತಿಲ್ಲ ಸಮರ್ಪಕ ಪರೀಕ್ಷೆ : ವಿದೇಶದಿಂದ ಬಂದ ಮಹಿಳೆ ಗಂಭೀರ ಆರೋಪ...

ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಹೆಚ್ಚು ಜನರು ಬರುವ ಕೆಲವು ಉದ್ಯಾನಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ, ಆದರೆ ಲಾಲ್‌ಬಾಗ್‌ ಮತ್ತು ಕಬ್ಬನ್‌ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಅವಕಾಶವಿದ್ದರೂ ವಾಯು ವಿಹಾರಕ್ಕೆ ಬರಲು ಜನ ಹಿಂದೇಟು ಹಾಕುತ್ತಿದ್ದಾರೆ. ವಾಯು ವಿಹಾರಕ್ಕಾಗಿ ಕಬ್ಬನ್‌ ಪಾರ್ಕ್ ಮತ್ತು ಲಾಲ್‌ಬಾಗ್‌ಗೆ ಪ್ರತಿ ದಿನ ಬೆಳಗ್ಗೆ ಐದು ಗಂಟೆಗೆ ಸಾವಿರಾರು ಜನ ಬರುತ್ತಾರೆ, ಆದರೆ, ಕೊರೋನಾ ವೈರೆಸ್‌ ಭೀತಿಯಿಂದಾಗಿ ಜನರು ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದಾರೆ.

ಹೋಟೆಲ್‌ಗಳಲ್ಲಿ ಜನರಿಲ್ಲ:

ನಗರದಲ್ಲಿರುವ ಸುಮಾರು ಐದು ಲಕ್ಷಕ್ಕೂ ಅಧಿಕ ಮಂದಿ ಬೆಂಗಳೂರು ಬಿಟ್ಟು ಹೊರ ಜಿಲ್ಲೆಗಳಲ್ಲಿರುವ ತಮ್ಮ ಊರುಗಳಿಗೆ ಹೋಗಿದ್ದಾರೆ. ಇದರ ನೇರ ಪರಿಣಾಮ ಹೋಟೆಲ್‌ ಉದ್ಯಮದ ಮೇಲೆ ಉಂಟಾಗಿದ್ದು, ಹೋಟೆಲ್‌ಗಳಲ್ಲಿ ದಿನದಿಂದ ದಿನಕ್ಕೆ ಗ್ರಾಹಕರ ಸಂಖ್ಯೆ ಇಳಿಮುಖವಾಗುತ್ತಿದೆ. ಶೇ.35ರಿಂದ 40 ರಷ್ಟುಮಾತ್ರ ವ್ಯಾಪಾರವಾಗುತ್ತಿದೆ. ಬೆಳಗ್ಗಿನ ವೇಳೆ ತುಂಬಿರುತ್ತಿದ್ದ ಹೋಟೆಲ್‌ಗಳು ಖಾಲಿ ಹೊಡೆಯುತ್ತಿವೆ. ಇನ್ನು ಹೋಟೆಲ್‌ ರೂಂ ಬುಕ್ಕಿಂಗ್‌ ಪ್ರಮಾಣ ಶೇ.5ಕ್ಕೆ ಇಳಿಕೆಯಾಗಿದೆ ಎಂದು ಬೆಂಗಳೂರು ಹೋಟೆಲ್‌ ಅಸೋಸಿಯೇಷನ್‌ ಅಧ್ಯಕ್ಷ ಪಿ.ಸಿ.ರಾವ್‌ ಮಾಹಿತಿ ನೀಡಿದ್ದಾರೆ.

ಬಿಕೋ ಎನ್ನುತ್ತಿದ್ದ ಮಾರುಕಟ್ಟೆಗಳು:

ಇನ್ನು ಜನಜಂಗುಳಿಯಿಂದ ತುಂಬಿರುತ್ತಿದ್ದ ಕೆ.ಆರ್‌. ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ಶಿವಾಜಿನಗರ ಮಾರುಕಟ್ಟೆ, ರಸಲ್‌ ಮಾರುಕಟ್ಟೆಗಳಲ್ಲೂ ಸೋಮವಾರಕ್ಕಿಂತ ಮಂಗಳವಾರ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು. ಇನ್ನು ಸೂಪರ್‌ ಮಾರ್ಕೆಟ್‌ಗಳನ್ನು ತೆರೆಯುವುದಕ್ಕೆ ಅವಕಾಶ ನೀಡಿದರೂ ಜನರಿಲ್ಲದೇ ಈ ಸೂಪರ್‌ ಮಾರ್ಕೆಟ್‌ಗಳು ಬಣಗುಡುತ್ತಿದ್ದವು.

ಮೆಟ್ರೋ ಪ್ರಯಾಣಿಕರ ಸಂಖ್ಯೆ 1.50 ಲಕ್ಷಕ್ಕೆ ಇಳಿಕೆ:

ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿದ್ದು ಮಂಗಳವಾರ ಕೇವಲ 1.50 ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಕಳೆದೊಂದು ವಾರದಿಂದ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ ಸಾಕಷ್ಟುಇಳಿಮುಖವಾಗಿದೆ. ಮಾ.17ರಂದು ಬೈಯ್ಯಪ್ಪನಹಳ್ಳಿ- ಮೈಸೂರು ರಸ್ತೆ (ನೇರಳೆ ಮಾರ್ಗ) ಮೆಟ್ರೋ ನಿಲ್ಧಾಣದ ಮಾರ್ಗದಲ್ಲಿ 80,075 ಮತ್ತು ಯಲಚೇನಹಳ್ಳಿ- ನಾಗಸಂದ್ರ(ಹಸಿರು ಮಾರ್ಗ) ನಡುವಿನ ಮಾರ್ಗದಲ್ಲಿ 67,940 ಮಂದಿ ಪ್ರಯಾಣಿಕರು (ಸಂಜೆ 7ಗಂಟೆ ವರೆಗೆ)ಪ್ರಯಾಣಿಸಿದ್ದಾರೆ. ಈ ಹಿಂದೆ ಸಾಮಾನ್ಯ ದಿನಗಳಲ್ಲಿ ಮೆಟ್ರೋದಲ್ಲಿ ಪ್ರತಿ ದಿನ ನಾಲ್ಕು ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಸೋಮವಾರ (ಮಾ.16) ಕೇವಲ 1.50 ಲಕ್ಷ ಪ್ರಯಾಣಿಕರು ಮಾತ್ರ ಸಂಚರಿಸಿದ್ದು, ಅತೀ ಕಡಿಮೆಯ ದಾಖಲೆಯಾಗಿತು ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.