ಗೋಪಾಲ್‌ ಯಡಗೆರೆ, ಕನ್ನಡಪ್ರಭ

ಶಿವಮೊಗ್ಗ(ಮೇ.25): ಕೊರೋನಾ ವೈರಸ್‌ ಪರಿಣಾಮ ಸೃಷ್ಟಿಯಾಗಿರುವ ತಲ್ಲಣಗಳಿಂದ ಹತ್ತು ಹಲವು ಕ್ಷೇತ್ರಗಳು ಹಿನ್ನಡೆ ಅನುಭವಿಸುತ್ತಿದ್ದು, ಇದೇ ರೀತಿ ಕಲ್ಯಾಣ ಮಂದಿರ ಹಾಗೂ ಸಮುದಾಯ ಭವನಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಬದಲಿ ವ್ಯವಸ್ಥೆಯತ್ತ ಮುಖ ಮಾಡಿ ಕಾಯುತ್ತಿವೆ.

ವೈರಸ್‌ ಕಾರಣದಿಂದ ದೇಶಾದ್ಯಂತ ಅಧಿಕೃತವಾಗಿ ಲಾಕ್‌ಡೌನ್‌ ಜಾರಿಯಾಗುವ ಮುನ್ನವೇ ಅಂದರೆ ಬಹುತೇಕ ಫೆಬ್ರವರಿಯಿಂದಲೇ ಕಲ್ಯಾಣ ಮಂದಿರ ಹಾಗೂ ಸಮುದಾಯ ಭವನದಲ್ಲಿನ ಶುಭ ಸಮಾರಂಭಗಳಿಗೆ ಬ್ರೇಕ್‌ ಬಿದ್ದಿದೆ.

ಇದರ ಪರಿಣಾಮ ಇವುಗಳ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವಲಂಬಿತವಾಗಿದ್ದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೀಡಾಗಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಈ ತನಕ ಯಾವುದೇ ರೀತಿಯ ಪರಿಹಾರ ಘೋಷಣೆಯಾಗದ ಕಾರಣ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಾರಂಭಿಸಿದೆ.

ವಾಸ್ತವವಾಗಿ ಫೆಬ್ರವರಿಯಿಂದ ಮೇ ತಿಂಗಳಾಂತ್ಯದವರೆಗೆ ಬಹುತೇಕ ಕಲ್ಯಾಣ ಮಂದಿರ ಮತ್ತು ಸಮುದಾಯ ಭವನಗಳು ಬಿಸಿಯಿಂದ ಕಾರ್ಯ ನಿರ್ವಹಿಸುತ್ತವೆ. ವರ್ಷದ ಬಹುತೇಕ ದುಡಿಮೆ ಈ ಮೂರ್ನಾಲ್ಕು ತಿಂಗಳಲ್ಲಿಯೇ ಆಗುತ್ತದೆ. ಆದರೆ ಈ ಸಂದರ್ಭದಲ್ಲಿಯೇ ಮುಚ್ಚಬೇಕಾಗಿದ್ದರಿಂದ ಇಡೀ ವರ್ಷದ ಆದಾಯ ಮತ್ತು ಚಟುವಟಕೆ ಸ್ಥಗಿತಗೊಂಡಂತೆಯೇ ಆಗಿದೆ.

ನಗರದ ಚಿತ್ರಣ:

ಜಿಲ್ಲಾ ಕೇಂದ್ರವಾದ ಶಿವಮೊಗ್ಗದಲ್ಲಿ ಶ್ರೀಮಂತ ವರ್ಗದವರ ಅನುಕೂಲಕ್ಕೆಂದೇ 12ಕ್ಕೂ ಹೆಚ್ಚು ಹೈಟೆಕ್‌ ಕಲ್ಯಾಣ ಮಂದಿರಗಳು ನಿರ್ಮಾಣಗೊಂಡಿವೆ. ಇದಲ್ಲದೆ ವಿವಿಧ ಜಾತಿ ಹಾಗೂ ಸಮುದಾಯಗಳ ನಿರ್ವಹಣೆಯಲ್ಲಿ 25 ಕ್ಕೂ ಹೆಚ್ಚು ಕಲ್ಯಾಣ ಮಂದಿರಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಪ್ರಮುಖವಾಗಿ ದೈವಜ್ಞ ಸಮಾಜ, ಬ್ರಾಹ್ಮಣ ಸಮಾಜ, ಒಕ್ಕಲಿಗ, ವೀರಶೈವ ಸೇರಿದಂತೆ ಇನ್ನೂ ಅನೇಕ ಜಾತಿ, ಜನಾಂಗಗಳಿಗೆ ಸೇರಿದ ಸಂಘ, ಸಂಸ್ಥೆಗಳು ಕಲ್ಯಾಣ ಮಂದಿರವನ್ನೂ ಹೊಂದಿವೆ.

ಹೀಗೆ ಜಾತಿ ಆಧಾರಿತ ಸಂಘ, ಸಂಸ್ಥೆಗಳ ಒಡೆತನದಲ್ಲಿರುವ ಕಲ್ಯಾಣ ಮಂದಿರಗಳಿಂದ ಬರುವ ಆದಾಯದಿಂದ ಆಯಾ ಸಮುದಾಯದ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಹಾಸ್ಟೆಲ್‌ ಸೌಕರ್ಯ ಒದಗಿಸಲಾಗುತ್ತಿಲ್ಲದೆ, ಪ್ರತಿ ವರ್ಷವೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ರೂಪದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸುವುದು, ದುರ್ಬಲರಿಗೆ ಆರ್ಥಿಕ ನೆರವು ಇತ್ಯಾದಿ ಸಮಾಜಮುಖಿ ಕಾರ್ಯ ನಡೆಯುತ್ತಿತ್ತು.

ಹೊಸ ಆಟ ಶುರು ಮಾಡಿದ ಕೊರೋನಾ ವೈರಸ್..!

ಆದರೆ ಕೊರೋನಾ ಕಾರಣ ಆದಾಯದ ಮೂಲವಾದ ಕಲ್ಯಾಣ ಮಂದಿರದ ಚಟುವಟಿಕೆಯೇ ಸ್ಥಗಿತಗೊಂಡಿದ್ದು ಮುಂದಿನ ದಿನಗಳಲ್ಲಿ ಇದು ಆಯಾ ಸಮಾಜದ ವಿದ್ಯಾರ್ಥಿ ವಸತಿ ನಿಲಯ ಮತ್ತು ಆ ಸಮಾಜದ ವಿವಿಧ ಚಟುವಟಿಕೆಯ ಮೇಲೂ ಪರಿಣಾಮ ಬೀರಲಿದೆ.

ಆತಂಕದಲ್ಲಿ ಕುಟುಂಬಗಳು :

ಇನ್ನು ನಗರದಲ್ಲಿರುವ ವಿವಿಧ ಸ್ತರದ ಕಲ್ಯಾಣ ಮಂದಿರಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಕುಟುಂಬಗಳಿವೆ ಉದ್ಯೋಗ ಕಲ್ಪಿಸಿದೆ. ಕಲ್ಯಾಣ ಮಂದಿರದಲ್ಲಿ ನಡೆಯುವ ಒಂದು ಮದುವೆ ಸಮಾರಂಭ ಕನಿಷ್ಟ10 ವಿವಿಧ ಕಸುಬುಗಳಿಗೆ ನೆರವಾಗುತ್ತಿತ್ತು. ಹೂವು, ಅಲಂಕಾರ, ವಿದ್ಯುತ್‌ದೀಪಾಲಂಕಾರ, ಶಾಮಿಯಾನ, ಕೇಟರಿಂಗ್‌, ವಾದ್ಯ, ಸ್ವಚ್ಚತಾ ಕಾರ್ಮಿಕರು, ಊಟ ಬಡಿಸುವವರು, ತರಕಾರಿ ಪೂರೈಕೆದಾರರು.. ಹೀಗೆ ಹತ್ತು ಹಲವು ವರ್ಗಗಳು ಇದೇ ಆದಾಯವನ್ನೇ ನೆಚ್ಚಿಕೊಂಡು ತಮ್ಮ ವೃತ್ತಿ ನಡೆಸಿಕೊಂಡಿದ್ದವು. ಆದರೀಗ ಈ ಎಲ್ಲ ವರ್ಗಗಳೂ ಇದೀಗ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಅಕ್ಷರಶಃ ನಿರುದ್ಯೋಗಿಗಳಾಗಿದ್ದಾರೆ.

ಮದುವೆ ಹಾಗೂ ಶುಭ ಸಮಾರಂಭಗಳು ನಡೆಯುವ ಈ ಸಂದರ್ಭದಲ್ಲಿ ಕೊರೋನಾ ಕಾಣಿಸಿಕೊಂಡ ಕಾರಣ ಪೂರ್ವ ನಿಗದಿತ ಕಾರ್ಯಕ್ರಮಗಳು ರದ್ದಾಗಿದ್ದು, ಅನೇಕರು ತಮ್ಮ ಮುಂಗಡ ಹಣವನ್ನು ಹಿಂದಕ್ಕೆ ಪಡೆದಿದ್ದಾರೆ. ಆದರೆ ಕಲ್ಯಾಣ ಮಂದಿರದ ಮಾಲೀಕರು ಮುಂಗಡ ಪಡೆದಾಕ್ಷಣ ಇದಕ್ಕೆ ಆಯಾ ತಿಂಗಳಲ್ಲಿಯೇ ಜಿಎಸ್‌ಟಿ ಕಟ್ಟಿದ್ದರು. ಈಗ ಕಾರ್ಯಕ್ರಮ ನಡೆಯುವುದಿಲ್ಲವಾದ್ದರಿಂದ ಈ ಜಿಎಸ್‌ಟಿ ಯಾರು ಭರಿಸಬೇಕು ಎಂಬ ವಿವಾದ ಸಾಕಷ್ಟುನಡೆದು ಸದ್ಯ ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಮಧ್ಯಸ್ಥಿಕೆಯಲ್ಲಿ ಒಂದು ಹಂತದಲ್ಲಿ ಬಗೆಹರಿದಿದೆ.

ಇದು ಈ ಹೊತ್ತಿನ ಸಮಸ್ಯೆ ಮಾತ್ರ ಆಗಿ ಉಳಿದಿಲ್ಲ. ಪರಿಸ್ಥಿತಿಯನ್ನು ಗಮನಿಸಿದರೆ ಮುಂದಿನ ಕೆಲ ತಿಂಗಳ ಕಾಲ ಕಲ್ಯಾಣ ಮಂದಿರಗಳು ಬಾಗಿಲು ಮುಚ್ಚವುದು ಅನಿವಾರ್ಯ ಎಂಬ ಸನ್ನಿವೇಶ ಕಾಣುತ್ತಿದೆ. ಆದಾಯವೇ ಇಲ್ಲದಾಗ ಅದರ ನೇರ ಪರಿಣಾಮ ಇಡೀ ಒಂದು ದೊಡ್ಡ ವರ್ಗಕ್ಕೆ ಆಘಾತ ತರಲಿದೆ. ಆದರೆ ಸರ್ಕಾರ ಈ ಬಗ್ಗೆ ಸರಿಯಾಗಿ ಗಮನ ಹರಿಸಿಲ್ಲ ಎಂಬುದು ಕಲ್ಯಾಣ ಮಂದಿರದ ಮಾಲೀಕರು ಮಾತ್ರವಲ್ಲ, ಇದನ್ನೇ ನೆಚ್ಚಿಕೊಂಡು ತಮ್ಮ ಬದುಕು ಕಟ್ಟಿಕೊಂಡಿದ್ದ ದೊಡ್ಡ ಸಂಖ್ಯೆಯ ಜನರ ದೂರು.

ಸರ್ಕಾರ ಷರತ್ತುಬದ್ಧ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಅನುಮತಿ ನೀಡಬೇಕು. ಆಯಾ ಕಲ್ಯಾಣ ಮಂದಿರ ಹಾಗೂ ಸಮುದಾಯ ಭವನದಲ್ಲಿರುವ ಲಭ್ಯವಿರುವ ಜಾಗದ ಆಧಾರದ ಮೇಲೆ ಇಂತಿಷ್ಟೇ ಜನರು ಭಾಗವಹಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಷರತ್ತಿನೊಂದಿಗೆ ಮದುವೆ ಮತ್ತಿತರ ಸಮಾರಂಭಗಳಿಗೆ ಅನುಮತಿ ನೀಡಿದರೆ ಒಳ್ಳೆಯದು. -ಎಲ್‌. ಸತ್ಯನಾರಾಯಣರಾವ್‌, ಮಾಲೀಕರು, ಲಗನ ಮಂದಿರ, ಶಿವಮೊಗ್ಗ.