ಕೊರೋನಾ ಎಫೆಕ್ಟ್: ಕಳೆಗುಂದಿದ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳು
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯನ್ನು ಪ್ರವಾಸಿ ತಾಣಗಳ ಸ್ವರ್ಗ ಎಂದೇ ಕರೆಯಲಾಗುತ್ತದೆ. ಇದೀಗ ಕೊರೋನಾ ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಬಲವಾದ ಪೆಟ್ಟು ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
- ವಿದ್ಯಾ ಶಿವಮೊಗ್ಗ
ಶಿವಮೊಗ್ಗ(ಮೇ.20): ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿರುವ ಹಿನ್ನೆಲೆಯಲ್ಲಿ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯನ್ನು ಪ್ರವಾಸಿ ತಾಣಗಳ ಸ್ವರ್ಗ ಎಂದೇ ಕರೆಯಲಾಗುತ್ತದೆ. ಇಲ್ಲಿ ಪ್ರವಾಸಿ ಪ್ರಿಯರಿಗೆ ಸಾಕಷ್ಟುನೆಚ್ಚಿನ ತಾಣಗಳಿವೆ. ಇಲ್ಲಿನ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ಹಾಗಾಗಿಯೇ ವೀಕೆಂಡ್ ಹಾಗೂ ರಜಾ ದಿನಗಳು ಬಂದರೆ ಸಾಕು ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿ ಪ್ರಿಯರಿಂದ ತುಂಬಿ ತುಳುಕುತ್ತದೆ.
ಅದರಲ್ಲಿಯೂ ಏಪ್ರಿಲ್, ಮೇ ತಿಂಗಳು ಎಂದರೆ ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ಈ ಸಮಯದಲ್ಲಿ ಇಲ್ಲಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಾಗಿಯೇ ಇರುತ್ತಿತ್ತು, ಆದರೆ ಇದೇ ಮೊದಲ ಬಾರಿಗೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ದೀರ್ಘ ಕಾಲದ ವಿರಾಮ ದೊರೆತಂತಾಗಿದ್ದು, ಪ್ರವಾಸಿಗರು ಪ್ರಯಾಸದ ದಿನಗಳನ್ನು ಕಳೆಯುವಂತಾಗಿದೆ.
ಡೆಡ್ಲಿ ಕೊರೋನೊ ವೈರಸ್ ಸೋಂಕು ನಿಯಂತ್ರಣಕ್ಕಾಗಿ ದೇಶಾದ್ಯಂತ ಮಾರ್ಚ್ 24 ರಿಂದ ಲಾಕ್‌ಡೌನ್ ಕರೆ ನೀಡಲಾಗಿರುವುದರಿಂದ ಹಾಗೂ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಗೊಂಡಿದೆಯಾದರೂ ಪೂರ್ಣ ಪ್ರಮಾಣದಲ್ಲಿ ತೆರವುಗೊಳ್ಳದ ಕಾರಣ ಜನರು ಸಹ ತಮ್ಮ ಸುತ್ತಾಟಗಳಿಗೆ ಬ್ರೇಕ್ ಹಾಕುವಂತಾಗಿದೆ. ಇದರಿಂದಾಗಿ ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಕಳೆಗುಂದಿವೆ.
ಕೊರೋನಾ ಎಫೆಕ್ಟ್: ಗಿರಿಯ ನಾಡಿನಲ್ಲಿ ಕುಸಿದ ಪ್ರವಾಸೋದ್ಯಮ
ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಇಲ್ಲಿನ ಸ್ಥಳೀಯ ಆರ್ಥಿಕ ಚಟುವಟಿಕೆಗಳು ಸುಧಾರಿಸಿಕೊಳ್ಳುತ್ತವೆ. ಆದರೆ ಪ್ರವಾಸಿ ತಾಣಗಳ ಮೇಲಿನ ನಿರ್ಬಂಧಗಳು ಇದೇ ರೀತಿ ಮುಂದುವರೆದಲ್ಲಿ ಪ್ರವಾಸಿಗರಿಲ್ಲದ ಕಾರಣ ಪ್ರವಾಸೋದ್ಯಮ ಹಾಗೂ ಇದರ ಮೇಲಿನ ಅವಲಂಬಿತರು ಮತ್ತಷ್ಟುನಷ್ಟಅನುಭವಿಸುವಂತಾಗುತ್ತದೆ.
ಶಿವಮೊಗ್ಗ ತಾಲೂಕಿನ ತೀರ್ಥಹಳ್ಳಿ ಮಾರ್ಗವಾಗಿ ಹೊರಟರೆ ಸಾಕು ಗಾಜನೂರು, ಸಕ್ರಬೈಲು, ಮಂಡಗದ್ದೆ ಪಕ್ಷಿಧಾಮ, ಕುಪ್ಪಳ್ಳಿ, ಕವಲೆದುರ್ಗ, ಹಣಗೆರೆ ಕಟ್ಟೆಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಪ್ರವಾಸಿಗರು ಒಂದಷ್ಟುಕಾಲ ಕಳೆಯುತ್ತಾ, ಅಲ್ಲಲ್ಲಿ ಪೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದರು. ಆದರೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಎರಡನೆಯ ಬಾರಿಗೆ ಕೊರೋನೋ ಸೋಂಕಿತ ಪತ್ತೆಯಾಗಿದ್ದರಿಂದ ಜನರು ತೀರ್ಥಹಳ್ಳಿ ಮಾರ್ಗದಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ. ಇಲ್ಲಿನ ಸ್ಥಳೀಯರು ಸಹ ಹೊರಗಡೆ ಬರಲು ಆತಂಕಪಡುವಂತಾಗಿದ್ದು, ಇದರಿಂದಾಗಿ ಇಲ್ಲಿನ ಪ್ರವಾಸಿತಾಣಗಳ ಸೌಂದರ್ಯವನ್ನು ಸವಿಯುವವರೆ ಇಲ್ಲದಂತಾಗಿದೆ.
ಇನ್ನು ಶಿವಮೊಗ್ಗದಿಂದ ಸಾಗರ ಮಾರ್ಗವಾಗಿ ಹೊರಟರೆ ಆರಂಭದಲ್ಲಿ ಹುಲಿಸಿಂಹಧಾಮ, ಮುದ್ದಿನ ಕೊಪ್ಪ ಟ್ರೀಪಾರ್ಕ್, ಜೋಗ ಜಲಪಾತ, ಸಿಗಂಧೂರು ಸೇರಿದಂತೆ ಅನೇಕ ಪ್ರವಾಸಿ ತಾಣಗಳು ಇದ್ದು ಹಾಗೂ ಭದ್ರವತಿ ತಾಲೂಕಿನ ಲಕ್ಷ್ಮಿನರಸಿಂಹ ದೇವಾಲಯ, ಭದ್ರಡ್ಯಾಂ, ಅಮ್ಯೂಲ್ಯ ಶೋಧ ಮತ್ತು ಸೊರಬ ತಾಲೂಕಿನ ಗುಡವಿ ಪಕ್ಷಿಧಾಮ ಸೇರಿದಂತೆ ಜಿಲ್ಲೆಯ ಇನ್ನು ಅನೇಕ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ನಿರಂತರವಾಗಿ ಭೇಟಿ ನೀಡುತ್ತ ವಾರಾಂತ್ಯ ಕಳೆಯುತ್ತಿದ್ದರು. ಆದರೇ ಈಗ ಪ್ರವಾಸಿಗರಿಲ್ಲದೆ ಇಲ್ಲಿನ ಪ್ರವಾಸಿತಾಣಗಳಿ ಭಣಗುಡುತ್ತಿವೆ.