ಕೊರೋನಾದಿಂದ ಕಂಗೆಟ್ಟ ಮಂಡ್ಯ ರೈತ : ಹೊಲದಲ್ಲೇ ಕೊಳೆಯುತ್ತಿದೆ ಸೌತೆಕಾಯಿ
- ಸೌತೆಕಾಯಿ ಬೆಳೆದು ಸಂಕಷ್ಟ ಎದುರಿಸುತ್ತಿರುವ ಮಂಡ್ಯದ ರೈತ
- ಒಂದು ಎಕರೆಯಲ್ಲಿ ಕೊಳೆಯುತ್ತಿದೆ ಸೌತೆಕಾಯಿ
- ರೈತನ ಬದುಕಿನ ಮೇಲೆ ಕೊರೋನಾ ಮಹಾಮಾರಿ ಕರಿನೆರಳು
ಮಂಡ್ಯ (ಮೇ.23): ಕೊರೋನಾ ಮಹಾಮಾರಿ ಎಲ್ಲರ ಬದುಕಿಗೂ ಕೊಳ್ಳಿ ಇಟ್ಟಿದೆ. ತಾನು ಬೆಳೆದ ಬೆಲೆಯನ್ನೇ ನಂಬಿಕೊಂಡು ಬದುಕುವ ರೈತನನ್ನು ಹೈರಾಣಾಗಿಸಿದೆ. ಸೌತೆಕಾಯಿ ಬೆಳೆದ ಮಂಡ್ಯದ ರೈತನೋರ್ವ ಕೈ ಸುಟ್ಟುಕೊಂಡು ಕಂಗಾಲಾಗಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ರೈತ ಸುನಾಮಿ ಸೌತೆಕಾಯಿ ಬೆಳೆದು ಇಟ್ಟುಕೊಳ್ಳಲು ಅಗದೆ, ಮಾರಲು ಆಗದೆ ಕಂಗಾಲಾಗಿದ್ದಾರೆ. ಬೆಳೆ ಉತ್ತಮವಾಗಿ ಬಂದಿದ್ದರೂ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಲಾರದ ಪರಿಸ್ಥಿತಿ ಎದುರಾಗಿದೆ.
ಮಂಡ್ಯ: 800ಕ್ಕೂ ಹೆಚ್ಚು ಹಳ್ಳಿಗಳಿಗೆ ಹಬ್ಬಿದ ಸೋಂಕು ..
ಕ್ಯಾತನಹಳ್ಳಿಯ ರೈತ ಕುಮಾರ್ ಒಂದು ಎಕರೆ ಜಮೀನಿನಲ್ಲಿ ಸುನಾಮಿ ಸೌತೆ ಕಾಯಿ ಬೆಳೆದಿದ್ದರು. ಆದರೆ ಈ ಗ್ರಾಮಕ್ಕೆ ಕೊರೋನಾ ಸೋಂಕು ವಕ್ಕರಿಸಿದ್ದು ಆತ ಈಗ ಬೆಳೆದ ಬೆಳೆಯನ್ನು ಮಾರಲಾಗದ ಸ್ಥಿತಿ ಎದುರಿಸುತ್ತಿದ್ದಾರೆ.
ಕ್ಯಾತನಹಳ್ಳಿಯಲ್ಲಿ 100 ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದರಿಂದ ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡಲಾಗಿದೆ. ಇದರಿಂದ ಸೌತೆಕಾತಿ ಕಟಾವು ಮಾಡಲಾಗುತ್ತಿಲ್ಲ. ಒಂದು ಎಕರೆ ಜಮೀನಿನಲ್ಲಿ ಸೌತೆಕಾಯಿಗಳಿದ್ದು ಐದು ಲಕ್ಷ ರು. ಲಾಭದ ನಿರೀಕ್ಷೆಯಲ್ಲಿದ್ದ ಕುಮಾರ್‌ಗೆ ನಿರಾಸೆಯುಂಟಾಗಿದೆ.
ಸೌತೆಕಾಯಿ ಬೆಳೆಯಲು ಹಾಕಿರುವ ಬಂಡವಾಳವೂ ಕೈ ಸೇರದೆ ನಷ್ಟ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರವು ನೆರವು ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.