ವರದಿ :  ಸಂದೀಪ್‌ ವಾಗ್ಲೆ

 ಮಂಗಳೂರು (ಅ.14):  ಕೊರೋನಾ ಸಮಯದಲ್ಲಿ ತಂಪಾದ ಪಾನೀಯ, ತಣ್ಣಗಿನ ಆಹಾರ ಸೇವನೆ ಸಲ್ಲದು ಎನ್ನುವ ವೈದ್ಯಕೀಯ ಲೋಕದ ಸೂಚನೆ ಇದೀಗ ‘ಚಿಲ್ಡ್‌ ಬಿಯರ್‌’ ಸೇಲ್‌ಗೆ ಭಾರಿ ಹೊಡೆತ ನೀಡಿದೆ. ಬಹುತೇಕ ಸೆಕೆಯ ವಾತಾವರಣವೇ ಇರುವ ದ.ಕ. ಜಿಲ್ಲೆಯೊಂದರಲ್ಲೇ ಕಳೆದ ವರ್ಷಕ್ಕೆ ಹೋಲಿಸಿದರೆ ಬಿಯರ್‌ ಮಾರಾಟ ಈ ಬಾರಿ ಶೇ.46ರಷ್ಟುಭಾರೀ ಕುಸಿತ ಕಂಡಿದೆ. ಬಿಯರ್‌ ಕಂಪನಿಗಳು ‘ಉಚಿತ’ ಆಫರ್‌ಗಳನ್ನು ನೀಡುತ್ತಿದ್ದರೂ ಬಿಯರ್‌ ಪ್ರಿಯರ ಮನ ಕರಗಿಲ್ಲ. ಇನ್ನು ಭಾರತೀಯ ಮದ್ಯ (ಐಎಂಎಲ್‌) ಸೇಲ್‌ ಕೂಡ ಜಿಲ್ಲೆಯಲ್ಲಿ ಶೇ.27ರಷ್ಟುಇಳಿದಿದೆ.

ಕಳೆದ ವರ್ಷ ಹಣಕಾಸು ವರ್ಷಾರಂಭದ ಏಪ್ರಿಲ್‌ನಿಂದ ಸೆಪ್ಟೆಂಬರ್‌ ಅಂತ್ಯದವರೆಗೆ 9,30,610 ಬಿಯರ್‌ ಕೇಸ್‌ (ಒಂದು ಕೇಸ್‌ ಅಂದರೆ ಸರಾಸರಿ 7.8 ಲೀ.)ಗಳು ಮಾರಾಟವಾಗಿದ್ದರೆ, ಈ ವರ್ಷ ಇದೇ ಸಮಯದಲ್ಲಿ ಕೇವಲ 5,08,280 ಕೇಸ್‌ಗಳು ಸೇಲಾಗಿವೆ. ಅಂದರೆ ಬರೋಬ್ಬರಿ 4,22,330 ಕೇಸ್‌ ಬಿಯರ್‌ ಮಾರಾಟದಲ್ಲಿ ವ್ಯತ್ಯಾಸವಾಗಿದೆ. ಏಪ್ರಿಲ್‌ನಲ್ಲಿ ಲಾಕ್‌ಡೌನ್‌ ಕಾರಣಕ್ಕೆ ಮದ್ಯ ಮಾರಾಟ ಸಂಪೂರ್ಣ ನಿಂತಿತ್ತು. ಆದರೆ ಮೇನಲ್ಲಿ ಅನ್‌ಲಾಕ್‌ ಆದ ಬಳಿಕವೂ ಮದ್ಯ ಮಾರಾಟದ ಗ್ರಾಫ್‌ ಏರುತ್ತಲೇ ಇಲ್ಲ!

ಮೈಸೂರು; ಸಾಯುತ್ತೇನೆ ಎಂದು ಹೇಳ್ತಾ ಕೊನೆಗೂ ಎಣ್ಣೆ ಏಟಲ್ಲಿ ನೇಣು ಹಾಕ್ಕೊಂಡ!

ಭಾರೀ ಕುಸಿತ: ಅಬಕಾರಿ ಇಲಾಖೆಯು ಸಾಮಾನ್ಯವಾಗಿ ಹಿಂದಿನ ವರ್ಷದ ಮಾರಾಟಕ್ಕೆ ಶೇ.5-10ರಷ್ಟುಏರಿಕೆ ಮಾಡಿ ಮುಂದಿನ ವರ್ಷದ ಮಾರಾಟದ ಗುರಿ ನಿಗದಿಪಡಿಸುತ್ತದೆ. ಆದರೆ ಕಳೆದ ವರ್ಷದ ಮಾರಾಟದ ಮಟ್ಟವನ್ನೇ ತಲುಪಲು ಈ ಬಾರಿ ಆಗಿಲ್ಲ. ಇನ್ನು ಗುರಿ ತಲುಪುವುದು ಹೇಗೆ ಎಂಬ ಚಿಂತೆಯಲ್ಲಿ ಅಬಕಾರಿ ಅಧಿಕಾರಿಗಳಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ 2,45,533 ಕೇಸ್‌ ಬಿಯರ್‌ ಮಾರಾಟವಾಗಿದ್ದರೆ, ಈ ವರ್ಷ ಕೇವಲ 74,041 ಕೇಸ್‌ ಮಾರಾಟವಾಗಿದೆ. ಜೂನ್‌ನಲ್ಲಿ ಕಳೆದ ವರ್ಷ 1,75,288 ಕೇಸ್‌ ಮಾರಾಟವಾಗಿದ್ದರೆ ಈ ಬಾರಿ 1,30,040 ಕೇಸ್‌ ಸೇಲಾಗಿದೆ. ಜುಲೈನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 42,565 ಕೇಸ್‌ ಬಿಯರ್‌ ಮಾರಾಟ ಇಳಿದಿದೆ. ಆಗಸ್ಟ್‌ನಲ್ಲಿ 14,064 ಕೇಸ್‌ ಮಾರಾಟ ಕಡಿಮೆಯಾಗಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ.

ಐಎಂಎಲ್‌ಗೂ ಹೊಡೆತ: ಇನ್ನು ತಣ್ಣಗಿನ ಬಿಯರ್‌ ಕುಡಿಯುವವರು ಕೊರೋನಾ ಭಯದಿಂದ ವಿಸ್ಕಿ, ಬ್ರ್ಯಾಂಡಿ ಇತ್ಯಾದಿ ಐಎಂಎಲ್‌ (ಇಂಡಿಯನ್‌ ಮೇಡ್‌ ಲಿಕ್ಕರ್‌) ನತ್ತ ಆಕರ್ಷಿತರಾಗಿದ್ದಾರೆ ಅಂದುಕೊಂಡಿದ್ದರೆ ಅದು ಸುಳ್ಳು. ಕಳೆದ ವರ್ಷ ಮೇ ತಿಂಗಳಲ್ಲಿ 2,35,263 ಕೇಸ್‌ ಐಎಂಎಲ್‌ (ಒಂದು ಬಾಕ್ಸ್‌ ಐಎಂಎಲ್‌ ಅಂದರೆ 8.6 ಲೀ.) ಮಾರಾಟವಾಗಿದ್ದರೆ, ಈ ಬಾರಿ 1,56,749 ಕೇಸ್‌ ಮಾತ್ರ ಮಾರಾಟವಾಗಿದೆ. ಅಂದರೆ ಬರೋಬ್ಬರಿ 78,514 ಬಾಕ್ಸ್‌ ಐಎಂಎಲ್‌ ಮಾರಾಟ ಒಂದೇ ತಿಂಗಳಲ್ಲಿ ಕಡಿಮೆಯಾಗಿದೆ. ಜೂನ್‌ ತಿಂಗಳಲ್ಲಿ ಈ ಕುಸಿತ 8,948 ಕೇಸ್‌ಗಳಷ್ಟಿತ್ತು. ಜುಲೈನಲ್ಲಿ 33,572 ಕೇಸ್‌ಗಳಷ್ಟುಕಡಿಮೆ ಮಾರಾಟವಾಗಿತ್ತು. ಆಗಸ್ಟ್‌ನಲ್ಲಿ 24,671 ಕೇಸ್‌, ಸೆಪ್ಟೆಂಬರ್‌ನಲ್ಲಿ 8,227 ಕೇಸ್‌ ಐಎಂಎಲ್‌ ಮಾರಾಟ ಇಳಿಕೆಯಾಗಿದೆ.

ಹಣ ಇಲ್ಲ, ಪ್ರವಾಸಿಗರು ಬರ್ತಿಲ್ಲ: ಈ ಬಾರಿ ಕೊರೋನಾ ಕಾರಣದಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿರುವುದು, ಜನರಲ್ಲಿ ಹಣದ ಹರಿವಿನ ಕೊರತೆ, ತಣ್ಣಗಿನ ಪಾನೀಯ ಸೇವನೆ ಮಾಡಿದರೆ ಕೊರೋನಾ ಆಪತ್ತಿನ ಭೀತಿ ಬಿಯರ್‌ ಮತ್ತು ಭಾರತೀಯ ಮದ್ಯ ಮಾರಾಟದಲ್ಲಿ ಭಾರೀ ಮಟ್ಟದಲ್ಲಿ ಕುಸಿಯಲು ಮುಖ್ಯ ಕಾರಣ. ಜತೆಗೆ ಲಾಕ್‌ಡೌನ್‌ ಅವಧಿಯಲ್ಲಿ ಬಹಳಷ್ಟುಮಂದಿ ಕುಡಿತ ಬಿಟ್ಟಿರಬಹುದಾದ ಸಾಧ್ಯತೆ ಇದೆ. ಸಾಮಾನ್ಯವಾಗಿ ನವೆಂಬರ್‌ ಬಳಿಕ ಮದ್ಯ ಮಾರಾಟದಲ್ಲಿ ಏರಿಕೆಯಾಗುತ್ತದೆ. ಈ ಬಾರಿಯೂ ಅದೇ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ದ.ಕ. ಜಿಲ್ಲಾ ಅಬಕಾರಿ ಇಲಾಖೆ ಜಂಟಿ ಆಯುಕ್ತೆ ಶೈಲಜಾ ಕೋಟೆ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಬಾರ್‌ಗಳು ಖಾಲಿ ಖಾಲಿ!

ಕಳೆದೆರಡು ತಿಂಗಳಲ್ಲಿ ಭಾರತೀಯ ಮದ್ಯ ಸೇಲ್‌ ವೈನ್‌ಶಾಪ್‌ಗಳಲ್ಲಿ ಶೇ.90ರಷ್ಟುಗುರಿ ತಲುಪಿದ್ದರೆ, ಬಾರ್‌ಗಳಲ್ಲಿ ಮಾತ್ರ ಶೇ.55ರಷ್ಟುಮಾತ್ರವೇ ಇದೆ. ಆದರೆ ಈಗ ಜನರು ಬಾರ್‌ಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ವೀಕೆಂಡ್‌ಗಳಲ್ಲಿ ಸಾಮಾನ್ಯವಾಗಿ ಎಲ್ಲ ಬಾರ್‌ಗಳು ಹೌಸ್‌ ಫುಲ್‌ ಆಗಿರುತ್ತಿದ್ದರೆ, ಈಗ ಬೆರಳೆಣಿಕೆ ಮಂದಿ ಮಾತ್ರವೇ ಕಾಣಿಸುತ್ತಿದ್ದಾರೆ. ಬಾರ್‌ಗೆ ಹೋದರೆ ದುಬಾರಿ ಮದ್ಯ ಮಾತ್ರವಲ್ಲದೆ, ದುಬಾರಿ ಆಹಾರವನ್ನೂ ಖರೀದಿಸಬೇಕು. ಮೊದಲೇ ಹಣದ ಅಭಾವ ಎದುರಿಸುತ್ತಿರುವ ಜನತೆ ಬಾರ್‌ ಬಿಟ್ಟು ವೈನ್‌ಶಾಪ್‌ನಲ್ಲಿ ಪಾರ್ಸೆಲ್‌ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.