ಚಿತ್ರದುರ್ಗ(ಮೇ.05): ಚಿತ್ರದುರ್ಗದ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐದು ನೂರಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ನಿತ್ಯ ದಾವಣಗೆರೆಯಿಂದ ಓಡಾಡುತ್ತಿದ್ದು ಅಂತಹವರಿಗೆ ಜಿಲ್ಲಾಧಿಕಾರಿ ವಿನೋತ್‌ ಪ್ರಿಯ ನಿರ್ಬಂಧ ವಿಧಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿದ್ದು, ಕಾರ್ಯನಿರ್ವಹಿಸಬೇಕು. ಇಲ್ಲವಾದರೆ ಇಲಾಖೆ ವಿಚಾರಣೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೊರೊನಾ ಸೋಂಕಿತರ ಸಂಖ್ಯೆಗೆ ಅನುಗುಣವಾಗಿ ಜಿಲ್ಲೆಗಳನ್ನು ಹಸಿರು, ಕೆಂಪು ಮತ್ತು ಕಿತ್ತಳೆ ವಲಯಗಳನ್ನಾಗಿ ವಿಂಗಡಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯು ಎಲ್ಲರ ಸಹಕಾರದಿಂದ ಹಸಿರು ವಲಯದಲ್ಲಿ ಗುರುತಿಸಿಕೊಂಡಿದೆ . ಜಿಲ್ಲೆಯ ಅಧಿಕಾರಿಗಳು ಯಾವುದೇ ಕಾರಣಕ್ಕೂ ಹೊರ ಜಿಲ್ಲೆಯಿಂದ ಜಿಲ್ಲೆಗೆ ಬರುವಂತಿಲ್ಲ. ಇಂತಹ ಅಧಿಕಾರಿಗಳಿಗೆ ಕ್ವಾರಂಟೈನ್‌ ಮಾಡಲಾಗುವುದು, ಈಗಾಗಲೇ ಬೇರೆ ಜಿಲ್ಲೆಯಿಂದ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಹಾಗೂ ಸಿಬ್ಬಂದಿ ಪಟ್ಟಿಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ಎರಡು ಬಾರಿ ಆದೇಶ ನೀಡಲಾಗಿದ್ದು ಇನ್ನೂ ಪುನರಾವರ್ತನೆಯಾದರೆ ಇಲಾಖಾ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಸಾಗರದ ಬಾರ್‌ನಲ್ಲಿ 4.98 ಲಕ್ಷ ರುಪಾಯಿ ಮೌಲ್ಯದ ಅಕ್ರಮ ಮದ್ಯ ವಶ

ಅಂತರ್‌ ಜಿಲ್ಲೆಗೆ ತೆರಳುವವರು ಪಾಸ್‌ ತೆಗೆದುಕೊಂಡು ಹೋಗಬಹುದು. ಪಾಸ್‌ ಪಡೆಯಲು ಆನ್‌ಲೈನ್‌ನಲ್ಲಿ ವಿತರಣೆಗೆ ವ್ಯವಸ್ಥೆ ಮಾಡಿದ್ದು, ಪಾಸ್‌ಗಾಗಿ ಜಿಲ್ಲಾ ಕೇಂದ್ರಕ್ಕೆ ಬರುವ ಅಗತ್ಯವಿಲ್ಲ. ಸಂಬಂಧಪಟ್ಟಗ್ರಾಮ ಪಂಚಾಯಿತಿ, ತಾಲೂಕು ಕಚೇರಿ, ಪೊಲೀಸ್‌ ಠಾಣೆ ಮೂಲಕ ಅರ್ಜಿ ಸಲ್ಲಿಸಿ ಅವರು ಇದ್ದಲ್ಲಿಯೇ ಪಾಸ್‌ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಜನರ ಓಡಾಟ ಹೆಚ್ಚಾಗಿದೆ. ಹಾಗಾಗಿ ಜಿಲ್ಲೆಯ ಪ್ರತಿಯೊಬ್ಬರು ಸಾಮಾಜಿಕ ಅಂತರ ಪಾಲಿಸುವುದು ಕಡ್ಡಾಯವಾಗಿದೆ ಎಂದರು.

ಮಾಸ್ಕ್‌ ಕಡ್ಡಾಯ

ಮನೆಯಿಂದ ಹೊರ ಬರುವಾಗ ಎಲ್ಲರೂ ಮಾಸ್ಕ್‌ ಹಾಕಿರಬೇಕು. ಮಾಸ್ಕ್‌ ಧರಿಸದಿದ್ದಲ್ಲಿ ನೂರು ರು. ದಂಡ ವಿಧಿಸಲಾಗುತ್ತದೆ. ಈ ಅಧಿಕಾರವನ್ನು ಪಿಎಸ್‌ಐ, ಆರೋಗ್ಯ ನಿರೀಕ್ಷಕರು, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ದರ್ಜೆಗಿಂತ ಮೇಲಿನವರಿಗೆ ನೀಡಲಾಗಿದೆ. ಮದ್ಯ ಮಾರಾಟ ಮಳಿಗೆಗಳಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಬೇಕು. ಸಾಮಾಜಿಕ ಅಂತರ ಪಾಲಿಸದಿದ್ದರೆ ಮದ್ಯ ಮಾರಾಟ ಮಳಿಗೆಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ಕಚೇರಿಗೆ ಬರಬೇಡಿ

ಜಿಲ್ಲೆಯಲ್ಲಿ ಎಲ್ಲ ಸರ್ಕಾರಿ ಕಚೇರಿಗಳು ಪ್ರಾರಂಭವಾಗಿದ್ದು, ಲಾಕ್‌ಡೌನ್‌ ಮೇ 17 ರ ವರೆಗೆ ಮುಂದುವರಿಯಲಿದೆ. ಜನರು ಕುಂದುಕೊರತೆಗಳಿಗಾಗಿ ಕಚೇರಿಗಳಿಗೆ ಭೇಟಿ ನೀಡುವ ಬದಲಾಗಿ ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಹಾಗೂ ಸಾರ್ವಜನಿಕರಿಗೆ ಜಿಲ್ಲಾಡಳಿತದ ವತಿಯಿಂದ ವಾರ್‌ರೂಂ ಸ್ಥಾಪಿಸಲಾಗಿದ್ದು, ಅಗತ್ಯ ಸೇವೆ ಪಡೆಯಬಹುದಾಗಿದೆ. ಜಿಲ್ಲೆಯನ್ನು ಹಸಿರು ವಲಯದಲ್ಲಿರುವಂತೆ ಕಾಪಾಡಲು ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು ಎಂದು ಕೋರಿದರು.

65 ವರ್ಷ ಮೇಲ್ಪಟ್ಟವಯೋವೃದ್ಧರು, 10 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭೀಣಿಯರು ಮನೆಯಲ್ಲಿರುವುದು ಉತ್ತಮ. ಯಾವುದೇ ಕಾರಣಕ್ಕೆ ಮನೆಯಿಂದ ಹೊರಗಡೆ ಬರಬಾರದು ಎಂದು ಮನವಿ ಮಾಡಿದರು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳು, ಶಾಪ್‌ಗಳು ಸಂಜೆ 7 ರಿಂದ ಬೆಳಗ್ಗೆ 7 ಗಂಟೆಯವರೆಗೆ ತೆರೆದಿರುವುದಿಲ್ಲ, ಜಿಲ್ಲೆಯಲ್ಲಿ ಸೆಕ್ಷನ್‌ 144 ಜಾರಿಯಲ್ಲಿದ್ದು ಅನಾವಶ್ಯಕವಾಗಿ ಗುಂಪು ಸೇರುವುದು, ಸಭೆ, ಸಮಾರಂಭ ಮಾಡುವಂತಿಲ್ಲ ಎಂದರು.