ಬೆಂಗಳೂರು [ಮಾ.14]:  ಬೆಂಗಳೂರು ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಿಗೆ ಮಾ.16ರಿಂದ 31ರ ವರೆಗೆ 15 ದಿನಗಳ ರಜೆ ನೀಡಿದೆ. ರಜೆ ಮುಗಿದ ಬಳಿಕ ಕರೊನಾ ವೈರಸ್‌ ಸೋಂಕು ಇರದ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ತಂದು ಹಾಸ್ಟೆಲ್‌ ಪ್ರವೇಶ ಪಡೆಯುವಂತೆ ಸೂಚಿಸಿದೆ.

"

ರಾಜ್ಯದ ಎಲ್ಲಾ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಿಗೆ ಮಾ.28ರ ವರೆಗೆ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಹಾಸ್ಟೆಲ್‌ಗಳಿಗೂ ರಜೆ ಘೋಷಿಸಲಾಗಿದೆ ಎಂದು ಬೆಂ.ವಿವಿ ಸುತ್ತೋಲೆ ಹೊರಡಿಸಿದೆ.

ಮಾ.16ರಿಂದ 31ರ ವರೆಗೆ ಹಾಸ್ಟೆಲ್‌ನಲ್ಲಿ ವಸತಿ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ನಿರ್ಬಂಧಿಸಲಾಗಿದೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಮಾ.15ರ ಸಂಜೆಯೊಳಗೆ ಹಾಸ್ಟೆಲ್‌ಗಳನ್ನು ತಪ್ಪದೇ ಖಾಲಿ ಮಾಡಬೇಕು. ರಜೆ ಮುಗಿದ ಬಳಿಕ ವಿದ್ಯಾರ್ಥಿಗಳು ಕೊರೋನಾ ವೈರಸ್‌ ಸೋಂಕು ಇರದ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ತಂದು ಪ್ರವೇಶ ಪಡೆಯುವಂತೆ ಸೂಚನೆ ನೀಡಿದೆ. ಇದರ ಜತೆಗೆ ರಜೆ ಮುಗಿದ ಬಳಿಕ ಎಲ್ಲ ವಿದ್ಯಾರ್ಥಿಗಳಿಗೆ ವಿವಿ ವತಿಯಿಂದಲೇ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ ಎಂದು ತಿಳಿಸಿದೆ.

ಒಂದು ವಾರ ಸರ್ಕಾರಿ ರಜೆ : ಊರಿಗೆ ಹೊರಟವರಿಂದ ಫುಲ್ ಜಾಂ.

ವಿದ್ಯಾರ್ಥಿಗಳು ಹಾಗೂ ಹಾಸ್ಟೆಲ್‌ಗಳಿಗೆ ಮಾತ್ರ ರಜೆ ನೀಡಲಾಗಿದ್ದು, ವಿವಿಯಲ್ಲಿ ಕಾರ್ಯ ನಿರ್ವಹಿಸುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಎಂದಿನಂತೆಯೇ ಕರ್ತವ್ಯಕ್ಕೆ ಹಾಜರಾಗುವಂತೆ ಕುಲಪತಿ ಪ್ರೊ. ಕೆ.ಆರ್‌. ವೇಣುಗೋಪಾಲ್‌ ತಿಳಿಸಿದ್ದಾರೆ.