Asianet Suvarna News Asianet Suvarna News

ಕೋವಿಡ್ ಜಾಸ್ತಿಯಾಗದಂತೆ ಎಚ್ಚರ ವಹಿಸೋಣ: ಸಚಿವ ಎಸ್.ಟಿ.ಸೋಮಶೇಖರ್

ಕೊರೋನಾ ಮಹಾಮಾರಿ ಪ್ರಕರಣಗಳು  ಹೆಚ್ಚಾಗುತ್ತಿವೆ. ಮತ್ತೀಗ ಕೊರೋನಾ ಆರ್ಭಟ ಎಲ್ಲೆಡೆ ಏರುತ್ತಿದೆ. ಇದರಿಂದ ಹೆಚ್ಚು ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಎಸ್‌ ಟಿ ಸೋಮಶೇಖರ್ ಹೇಳಿದರು. 

Corona Cases increased in Mysore Minister ST Somashekar snr
Author
Bengaluru, First Published Mar 19, 2021, 1:41 PM IST

ಮೈಸೂರು (ಮಾ.19): ಮೈಸೂರು ಜಿಲ್ಲೆಯಲ್ಲಿ ಈಗ 269 ಸಕ್ರಿಯ ಕೋವಿಡ್ ಪ್ರಕರಣಗಳಿವೆ.  ಈ ಸಂಖ್ಯೆ ಜಾಸ್ತಿಯಾಗದಂತೆ ಎಲ್ಲರೂ ಎಚ್ಚರ ವಹಿಸೋಣ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಶುಕ್ರವಾರ ಜಿಲ್ಲಾ ಪಂಚಾಯಿತಿಯಲ್ಲಿ ಕೋವಿಡ್‌ನ ಎರಡನೇ ಅಲೆಯ ನಿಯಂತ್ರಣ ಹಾಗೂ ಪರಿಸ್ಥಿತಿಯ ಅವಲೋಕನ ಕುರಿತು ಅವರು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪರಿಶೀಲಿಸಿದರು. 

ಜಿಲ್ಲಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡ ಕೋವಿಡ್ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಂಡಿದೆ. ಪೊಲೀಸ್ ಆಯುಕ್ತರು, ಪೊಲೀಸ್ ಅಧೀಕ್ಷರು, ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾ ಪಂಚಾಯಿತಿ ಸಿ.ಇ.ಒ. ಮುಂತಾದ ಅಧಿಕಾರಿಗಳು ಇನ್ನೂ ಸ್ವಲ್ಪ ದಿನ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. 

ಮೈಸೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಬೆಂಗಳೂರು ಜಲ ಮಂಡಳಿ ಮಾದರಿಯಲ್ಲಿ ಪ್ರತ್ಯೇಕ ಮಂಡಳಿ ಅಥವಾ ಬೇರೆ ರೀತಿಯ ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆ ಬಗ್ಗೆ ಬರುವ ಪ್ರಸ್ತಾವನೆಯನ್ನು ಸರ್ಕಾರದ ಹಂತದಲ್ಲಿ ಚರ್ಚಿಸಿ, ಸೂಕ್ತ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು. 

ಕಳೆದ ವರ್ಷ ಜುಲೈನಲ್ಲಿ ಇದ್ದ ಪರಿಸ್ಥಿತಿ ಈಗ ಜಿಲ್ಲೆಯಲ್ಲಿ ಇದ್ದು ಎರಡನೇ ಅಲೆಯ ಆತಂಕ ಇದೆ. ಇದರ ನಿಯಂತ್ರಣಕ್ಕಾಗಿ ಪರೀಕ್ಷೆ, ಸಂಪರ್ಕ ಪತ್ತೆ, ಹಾಗೂ ಲಸಿಕೆ ನೀಡುವುದನ್ನು ಹೆಚ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ  3.5 ಲಕ್ಷ ಹಿರಿಯ ನಾಗರಿಕರನ್ನು ಗುರುತಿಸಲಾಗಿದೆ. ಈ ವರೆಗೆ ಶೇ. 10 ರಷ್ಟು ಹಿರಿಯ ನಾಗರಿಕರು ಲಸಿಕೆ ಪಡೆದುಕೊಂಡಿದ್ದಾರೆ ಎಂದರು. 

ಮಾರ್ಚ್ ಅಂತ್ಯದ ವೇಳೆಗೆ ಶೇಖಡ 100 ರಷ್ಟು ಸಾಧನೆ ಮಾಡಬೇಕೆಂದು ಮುಖ್ಯ ಕಾರ್ಯದರ್ಶಿಯವರು ಹೇಳಿದ್ದಾರೆ‌. ಈ ಗುರಿ ಸಾಧಿಸಲು, ಪಿ.ಡಿ.ಒ. ಬಿಲ್ ಕಲೆಕ್ಟರ್, ವಾಟರ್‌ಮ್ಯಾನ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ ಸುಮಾರು 10 ಜನರನ್ನು ಕರೆತಂದು ಲಸಿಕೆ ಹಾಕಿಸುವ ಗುರಿ ನೀಡಲಾಗಿದೆ ಎಂದು ಹೇಳಿದರು.

ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಕೋವಿಡ್ ಈಗ ಹೆಚ್ಚಾಗಿದೆ. ಅಂತಹ ಜಿಲ್ಲೆಗಳ ಪಟ್ಟಿಯಲ್ಲಿ ಮೈಸೂರು ಇಲ್ಲ. ಆದರೆ ಎಚ್ಚರಿಕೆ ವಹಿಸಬೇಕಾದ 5 ಜಿಲ್ಲೆಗಳ ಪೈಕಿ ಮೈಸೂರನ್ನು ಹೆಸರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಕುಡಿಯುವ ನೀರಿನ ಕೊರತೆ ಆಗಬಾರದು: ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತಲೆದೂರದಂತೆ ಎಚ್ಚರವಹಿಸಬೇಕೆಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಪರಿಶೀಲಿಸಿದ ಅವರು ತಾಲ್ಲೂಕುವಾರು ಪರಿಸ್ಥಿತಿ ಅವಲೋಕಿಸಿದರು.

ಜಿಲ್ಲೆಯ ಯಾವುದೇ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಈ ವರೆಗೆ ಉಂಟಾಗಿಲ್ಲ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಆಶಾದ್ ಷರೀಫ್ ಹೇಳಿದರು. ಆದರೆ ಬನ್ನೂರಿನಲ್ಲಿ ನೀರಿನ ಸಮಸ್ಯೆ ಇದೆ ಎಂದು ಶಾಸಕರಾದ ಅಶ್ವಿನ್ ಕುಮಾರ್ ಅವರು ಗಮನ ಸೆಳೆದರು.

ಹೆಚ್.ಡಿ.ಕೋಟೆಯಲ್ಲಿ 10 ಗ್ರಾಮಗಳು, ಹುಣಸೂರು ತಾಲ್ಲೂಕಿನಲ್ಲಿ 14, ಮೈಸೂರಿನಲ್ಲಿ 16, ನಂಜನಗೂಡಿನಲ್ಲಿ 35, ಪಿರಿಯಾಪಟ್ಟಣ 10, ತಿ.ನರಸೀಪುರ 18 ಹಳ್ಳಿಗಳಲ್ಲಿ ಸಮಸ್ಯೆ ಕಂಡು ಬಂದಿದೆ. ಕೆ.ಆರ್.ನಗರದಲ್ಲಿ ಸಮಸ್ಯೆ ಕಂಡು ಬಂದಿಲ್ಲ. ಜಿಲ್ಲೆಯಲ್ಲಿ 2-3 ಗ್ರಾಮಗಳಿಗೆ ಮಾತ್ರ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತದೆ. ಉಳಿದ ಗ್ರಾಮಗಳಿಗೆ ಶಾಶ್ವತ ಪರಿಹಾರಕ್ಕೆ ಕ್ರಮವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ಬೆಂಗ್ಳೂರಲ್ಲಿ ಹೆಚ್ಚುತ್ತಿದೆ ಕೊರೋನಾ: ಒಂದೇ ದಿನ 7 ಮಂದಿ ಬಲಿ,ಆತಂಕದಲ್ಲಿ ಜನತೆ..! ...

ವಿದ್ಯುತ್ ಸಮಸ್ಯೆ; ರೈತರಿಗೆ ಸರಿಯಾದ ಮಾಹಿತಿ ನೀಡಬೇಕು: ಬೇಸಿಗೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಯ ಉಂಟಾದರೆ ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್‌.ಟಿ.ಸೋಮಶೇಖರ್ ಅವರು ಹೇಳಿದರು.

ಪಂಪ್‌ಸೆಟ್‌ಗಳಿಗೆ ಪ್ರತಿ ದಿನ ಎರಡು ಗಂಟೆಗಳ ಕಡಿಮೆ ಅವಧಿಗೆ ವಿದ್ಯುತ್ ಸರಬರಾಜು ಆಗಿದ್ದು ತೊಂದರೆಯಾಗಿದೆ ಎಂದು ಶಾಸಕರು ಗಮನ ಸೆಳೆದಾಗ, ಸೆಸ್ಕ್ ಅಧಿಕಾರಿ ಕಳೆದ ವಾರದ ಉತ್ಪಾದನೆಯಲ್ಲಿ ಸಮಸ್ಯೆ ಉಂಟಾಗಿದ್ದರಿಂದ ಈ ರೀತಿಯಾಗಿದೆ. 2-3 ದಿನದಲ್ಲಿ ಈ ಸಮಸ್ಯೆ ನಿವಾರಣೆಯಾಗಲಿದೆ ಎಂದರು.

ಸಭೆಯಲ್ಲಿ ಶಾಸಕರಾದ ಎಲ್.ನಾಗೇಂದ್ರ, ಅಶ್ವಿನ್ ಕುಮಾರ್, ಕೆ.ಮಹದೇವು, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ.ಸಿ.ಪರಿಮಳ ಶ್ಯಾಂ, ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್, ಮೇಯರ್ ರುಕ್ಮಿಣಿ ಮಾದೇಗೌಡ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪಂಚಾಯತ್ ಸಿಇಒ ಎ.ಎನ್.ಯೋಗೇಶ್, ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ನಗರ ಪಾಲಿಕೆ ಆಯುಕ್ತರಾದ ಶಿಲ್ಪನಾಗ್, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Follow Us:
Download App:
  • android
  • ios