ಮೈಸೂರು (ಅ.05):  ನಗರ ಪ್ರದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿಢೀರನೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ನಗರ ಪಾಲಿಕೆ ವ್ಯಾಪಾರಿಗಳಿಗೆ ಕಡ್ಡಾಯವಾಗಿ ರಾರ‍ಯಪಿಡ್‌ ಆಂಟಿಜೆನ್‌ ಟೆಸ್ಟ್‌ ನಡೆಸಲು ಉದ್ದೇಶಿಸಿದೆ.

ನಗರದ ದೇವರಾಜ ಮಾರುಕಟ್ಟೆ, ಸಯ್ಯಾಜಿರಾವ್‌ ರಸ್ತೆ, ದೇವರಾಜ ಅರಸು ರಸ್ತೆ ಸೇರಿದಂತೆ ಪ್ರಮುಖ ಮಾರುಕಟ್ಟೆಯಲ್ಲಿನ ಎಲ್ಲಾ ಬಗೆಯ ವ್ಯಾಪಾರಿಗಳನ್ನು ಪ್ರತಿ ಹದಿನೈದು ದಿನಕ್ಕೊಮ್ಮೆ ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ. ವ್ಯಾಪಾರಿಗಳಿಗೆ ಸೋಂಕಿನ ಲಕ್ಷಣ ಇರಲಿ, ಇಲ್ಲದಿರಲಿ ಕಡ್ಡಾಯವಾಗಿ ಪರೀಕ್ಷೆಗೆ ಒಳಗಾಗಬೇಕು. ನಗರ ಪಾಲಿಕೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ನಗರದ 22 ಕೇಂದ್ರಗಳನ್ನು ಗುರುತಿಸಿದ್ದು, ಕೋವಿಡ್‌ ಪರೀಕ್ಷೆಗೆ ಮುಂದಾಗಿದೆ. ಪರೀಕ್ಷೆಯನ್ನು ವಿರೋಧಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಕೂಡ ಪೊಲೀಸರು ಸನ್ನದ್ಧರಾಗಿದ್ದಾರೆ.

ಹೆಚ್ಚಾಗುತ್ತಿದೆ ಕೋವಿಡ್ ಸೋಂಕು; ಅಸ್ತಮಾ ಇರುವವರೇ ಇರಲಿ ಆರೋಗ್ಯದ ಬಗ್ಗೆ ನಿಗಾ ...

ನೆಗಡಿ, ಕೆಮ್ಮು, ಜ್ವರ, ಉಸಿರಾಟದ ತೊಂದರೆಯಂತಹ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಪರೀಕ್ಷೆಗೆ ಒಳಪಡಬೇಕು. ಇಲ್ಲವೇ ನಾವೇ ಪರೀಕ್ಷೆಗೆ ಒಳಪಡಿಸಿದಾಗ ಪರೀಕ್ಷೆಗೆ ಮುಂದಾಗಬೇಕು. ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರು ಕಡ್ಡಾಯವಾಗಿ ನಗರದ ಯಾವುದಾದರೊಂದು ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಿ ಪರೀಕ್ಷೆಗೆ ಒಳಗಾಗಬೇಕು. ಅ. 5 ರಿಂದ ಎಲ್ಲಾ ವ್ಯಾಪಾರಿಗಳಿಗೂ ಪರೀಕ್ಷೆ ಆರಂಭವಾಗಲಿದೆ. ಚಿಕ್ಕಗಡಿಯಾರ ವೃತ್ತದಲ್ಲಿ ಒಂದು ತಂಡ ಪರೀಕ್ಷೆ ನಡೆಸಲಿದೆ. ಇಲ್ಲಿ ದೇವರಾಜ ಮಾರುಕಟ್ಟೆಯ ವ್ಯಾಪಾರಿಗಳು ಪಾಲ್ಗೊಳ್ಳುವರು. ಅಲ್ಲದೆ ಕೆ.ಆರ್‌. ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಕೇಂದ್ರ ಆರಂಭವಾಗುವುದು. 

ಅಲ್ಲದೆ ಕುರುಬಾರಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಚಾಮುಂಡಿಪುರಂ ಆರೋಗ್ಯ ಕೇಂದ್ರ, ಜಯನಗರ ಸಮುದಾಯ ಆರೋಗ್ಯ ಕೇಂದ್ರ, ಶ್ರೀರಾಂಪುರದ ಜನನಿ ಕಲ್ಯಾಣ ಮಂಟಪ, ವಿಶ್ವೇಶ್ವರನಗದ ಬಿಲ್ಡರ್ಸ್‌ ಅಸೋಸಿಯೇಷನ್‌, ಸೋಮಾನಿ ಕಾಲೇಜಿನ ಸರ್ಕಾರಿ ಶಾಲೆ, ಟಿ.ಕೆ. ಬಡಾವಣೆಯ ಬೀರೇಶ್ವರ ದೇವಸ್ಥಾನ, ವಿವಿಪುರಂ ಹೆರಿಗೆ ಆಸ್ಪತ್ರೆ, ಜಿಲ್ಲಾ ಕೋವಿಡ್‌ ಆಸ್ಪತ್ರೆ, ಹೆಬ್ಬಾಳು ಸಿಐಟಿಬಿ ಛತ್ರ, ಕುಂಬಾರಕೊಪ್ಪಲು ಆರೋಗ್ಯ ಕೇಂದ್ರ, ಬನ್ನಿಮಂಟಪ ಆರೋಗ್ಯ ಕೇಂದ್ರ, ಪುರಭವನ ಆವರಣ, ರಾಜೇಂದ್ರನಗರ ಆರೋಗ್ಯಕೇಂದ್ರ, ಮಂಡಿಮೊಹಲ್ಲದ ಜಿಲ್ಲಾ ಟಿಬಿ ಕೇಂದ್ರ, ವೀರನಗೆರೆ ಆರೋಗ್ಯಕೇಂದ್ರ, ಬನ್ನಿಮಂಟಪ ಬಾಲಭವನ, ರಾಜೀವ್‌ನಗರ ಬಯಲು ರಂಗಮಂದಿರ, ಬೀಡಿ ಕಾಲೋನಿ, ಗಿರಿಯಬೋವಿಪಾಳ್ಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ.