ಬೆಂಗಳೂರು(ಜು.17): ನಗರದ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿರುವ ಕೋವಿಡ್‌ ಕೇರ್‌ ಸೆಂಟರ್‌ ಅವ್ಯವಸ್ಥೆಯ ಕುರಿತು ಕ್ವಾರಂಟೈನ್‌ನಲ್ಲಿರುವ ರೋಗಿಯೊಬ್ಬರು ವಿಡಿಯೋ ಮಾಡಿ ನೈಜ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.

‘ಇಲ್ಲಿ ಮೂರು ಹೊತ್ತು ಊಟ ಕೊಡುವುದು ಬಿಟ್ಟರೆ ಬೇರೆ ಯಾವ ವ್ಯವಸ್ಥೆ ಕಲ್ಪಿಸಿಲ್ಲ. ನಮ್ಮ ದುಡ್ಡಲ್ಲೇ ಹೊರಗಿನಿಂದ ಮಾತ್ರೆ ಖರೀದಿಸಬೇಕಿದೆ. ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಟಾಯ್ಲೆಟ್‌ಗೂ ನೀರಿಲ್ಲ ಎಂದು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.

2ನೇ ದಿನ ಕಟ್ಟು​ನಿಟ್ಟಿನ ಲಾಕ್‌ಡೌನ್: 9 ಜಿಲ್ಲೆಗಳಲ್ಲಿ ಬಂದೋಬಸ್ತ್ ಬಿಗಿ ಮಾಡಿದ ಪೊಲೀ​ಸರು

ಪರೀಕ್ಷಾ ವರದಿಗಾಗಿ ಅಲೆದಾಟ!

ಬನ್ನೇರುಘಟ್ಟರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಯಲ್ಲಿ ಯುವತಿ ಶನಿವಾರ ಕೊರೋನಾ ಪರೀಕ್ಷೆ ಮಾಡಿಸಿದ್ದರು. ಆದರೆ, ಕಳೆದ ಐದು ದಿನಗಳಿಂದ ಪರೀಕ್ಷಾ ವರದಿ ನೀಡಿಲ್ಲ. ಆಸ್ಪತ್ರೆ ಸಿಬ್ಬಂದಿ ವರದಿ ಕೊಡದೆ ಸತಾಯಿಸುತ್ತಿದ್ದಾರೆ.

‘ನನ್ನ ತಾಯಿಯನ್ನು ಬದುಕಿಸಿ’

ಕೊರೋನಾ ಸೋಂಕಿತ ಮಹಿಳೆ ಸ್ಥಿತಿ ಹದಗೆಟ್ಟಿದ್ದರೂ ಜಯನಗರದ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಐಸಿಯು ಬೆಡ್‌ ಖಾಲಿ ಇಲ್ಲ. ಬೇರೆ ಕಡೆ ನೋಡಿ ಎಂದಿದ್ದಾರೆ. ಈ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂಬುದು ತೋಚದ ಮಗ, ತನ್ನ ತಾಯಿಯನ್ನು ಬದುಕಿಸಿಕೊಡಿ ಎಂದು ಸಿಬ್ಬಂದಿಯನ್ನು ಬೇಡಿಕೊಂಡಿರುವ ಘಟನೆ ನಡೆದಿದೆ.

ನಗರದಲ್ಲಿ ಮತ್ತೆ 16 ಮಂದಿ ಪೊಲೀಸರು ಕೊರೋನಾ ಸೋಂಕಿತರಾಗಿದ್ದು, ಮೂರು ಪೊಲೀಸ್‌ ಠಾಣೆಗಳನ್ನು ಗುರುವಾರ ಸೀಲ್‌ಡೌನ್‌ ಮಾಡಲಾಗಿದೆ. ಮಾಗಡಿ ರಸ್ತೆ, ಎಸ್‌.ಆರ್‌.ನಗರ ಪೊಲೀಸ್‌ ಠಾಣೆಯಲ್ಲಿ ತಲಾ ಮೂವರು, ಚನ್ನಮ್ಮನಕೆರೆ ಅಚ್ಚುಕಟ್ಟು, ಕೆಂಗೇರಿ ಠಾಣೆಯಲ್ಲಿ ತಲಾ ಇಬ್ಬರು, ಶ್ರೀರಾಮಪುರ, ರಾಜರಾಜೇಶ್ವರಿ ನಗರ, ಕುಮಾರಸ್ವಾಮಿ ಲೇಔಟ್‌, ಜಾಲಹಳ್ಳಿ ಸಂಚಾರ, ಹೆಬ್ಬಾಳ ಠಾಣೆಯಲ್ಲಿ ತಲಾ ಒಬ್ಬರು ಸೇರಿದಂತೆ ಒಟ್ಟು 16 ಮಂದಿ ಪೊಲೀಸರಿಗೆ ಸೋಂಕು ದೃಢಪಟ್ಟಿದೆ. ಇವರ ಸಂಪರ್ಕದಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಗೆ ಕ್ವಾರಂಟೈನ್‌ಗೊಳಪಡಿಸಲಾಗಿದೆ.

ಸೋಂಕು ಭೀತಿ ಹಿನ್ನೆಲೆಯಲ್ಲಿ ಶಿವಾಜಿನರ, ಮಾಗಡಿ ರಸ್ತೆ ಹಾಗೂ ಯಶವಂತಪುರ ಠಾಣೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.