ಕೊಡಗು ಶಾಲೆಗಳಿಗೆ ‘ಮಿಷನರಿ ಪುಸ್ತಕ’ ರವಾನೆ, ವಿವಾದ!
ಕೊಡಗು ಶಾಲೆಗಳಲ್ಲಿ ಮತಾಂತರದ ಆರೋಪ ಕೇಳಿ ಬಂದಿದೆ. ಇಲ್ಲಿನ ಶಾಲೆಗಳಿಗೆ ವಿವಾದಿತ ಪುಸ್ತಕಗಳನ್ನು ತಲುಪಿಸಲಾಗುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.
ಮಡಿಕೇರಿ [ಜು.17] : ಕೊಡಗು ಜಿಲ್ಲೆಯಲ್ಲಿ ಮಿಷನರಿಗಳಿಂದ ಮತ್ತೆ ಮತಾಂತರ ಹುನ್ನಾರದ ಬಗ್ಗೆ ಆರೋಪ ಕೇಳಿಬಂದಿದೆ. ಹಲವು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅಂಚೆಯ ಮೂಲಕ ಕೆಲವು ವಿವಾದಾತ್ಮಕ ಪುಸ್ತಕಗಳು ತಲುಪಿದ್ದು, ಜಿಲ್ಲೆಯಲ್ಲೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲೆಯ ನಾಲ್ಕೇರಿ, ಬಾಳೆಲೆ, ಬಿರುನಾಣಿ, ಶೆಟ್ಟಿಗೇರಿ, ಕುರ್ಚಿ, ಕಿರುಗೂರು, ಬಾಡಗ, ಕಾನ್‌ಬೈಲು, ಶ್ರೀಮಂಗಲ ಸೇರಿದಂತೆ ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳಿಗೆ ಕನ್ನಡ ಭಾಷೆಯಲ್ಲಿ ‘ಸತ್ಯಮೇವ ಜಯತೆ’, ‘ಯೋಹಾನನು ಬರೆದ ಸುವಾರ್ತೆ’ ಹಾಗೂ ಕೊಡವ ಭಾಷೆಯಲ್ಲಿ ತರ್ಜುಮೆಗೊಂಡಿರುವ ‘ಬೈಬಲ್ ದೇವಡ ಪುದಿಯ ಒಪ್ಪಂದ’ ಪುಸ್ತಕಗಳನ್ನು ಅಂಚೆ ಮೂಲಕ ಶಿವಮೊಗ್ಗದಿಂದ ಸಂಸ್ಥೆಯೊಂದು ತಲುಪಿಸಿದೆ. ಕೆಲವು ಶಾಲೆಗಳಿಗೆ ಬೆಂಗಳೂರಿನಿಂದ ಸಂಸ್ಥೆಯೊಂದು ಕಳುಹಿಸಿದೆ. ಇದು ಮಿಷನರಿಗಳ ಕೃತ್ಯವೆಂದು ಆರೋಪಗಳು ಕೇಳಿ ಬರುತ್ತಿದ್ದು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪ್ರಮುಖರಿಂದಲೂ ಖಂಡನೆ ವ್ಯಕ್ತವಾಗಿದೆ. ಈ ಹಿಂದೆಯೂ ಇದೇ ರೀತಿ ನಡೆದಿತ್ತು. ಅಲ್ಲದೆ, ಇದರ ವಿರುದ್ಧ ಪ್ರತಿಭಟಿಸಲಾಗಿತ್ತು.
ಧರ್ಮ ಪ್ರಚಾರ ಪುಸ್ತಕದಂತೆ ಕಾಣುತ್ತಿರುವ ಇವುಗಳ ವಿರುದ್ಧ ಶಿಕ್ಷಣ ಇಲಾಖೆಗೆ ಈಗಾಲಲೇ ಶಾಲೆ ಶಿಕ್ಷಕರಿಂದ, ಸಾರ್ವಜನಿಕರಿಂದ ದೂರು ಸಲ್ಲಿಕೆಯಾಗಿದ್ದು, ಎಚ್ಚೆತ್ತುಕೊಂಡಿರುವ ಇಲಾಖೆ ಇಂತಹ ಪುಸ್ತಕಗಳನ್ನು ಸ್ವೀಕರಿಸದಂತೆ ಶಾಲೆಗಳಿಗೆ ಸ್ಪಷ್ಟಸೂಚನೆ ನೀಡಿದೆ.
ಈ ಹಿಂದೆಯೂ ಹುನ್ನಾರ: ಕ್ರೈಸ್ತ ಮಿಷನರಿಗಳು ಮಹಾಮಳೆಗೆ ತುತ್ತಾದ ರೈತ, ಕಾರ್ಮಿಕ ಕುಟುಂಬಗಳಿಗೆ ಆಮಿಷ ತೋರಿಸಿ ಮತಾಂತರಕ್ಕೆ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಿ ದಕ್ಷಿಣ ಕೊಡಗಿನ ಶ್ರೀಮಂಗಲ ಪೊಲೀಸ್ ಠಾಣೆಯ ಮುಂದೆ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಪ್ರತಿಭಟನೆಯೂ ನಡೆದಿತ್ತು.