ಚಿಕ್ಕಮಗಳೂರು: ದತ್ತ ಜಯಂತಿ ಆರಂಭಕ್ಕೂ ಮುನ್ನವೇ ವಿವಾದ, ಜಿಲ್ಲಾಡಳಿತದ ವಿರುದ್ಧ ಕಾಂಗ್ರೆಸ್ ಕಿಡಿ
ದತ್ತ ಜಯಂತಿಯನ್ನ ನಾಡ ಉತ್ಸವದಂತೆ ಮಾಡ್ತೀವಿ ಅಂತ ಹಿಂದೂ ಸಂಘಟನೆಗಳು ಹೇಳಿದ್ದಕ್ಕೂ, ಈ ಬಾರಿಯ ದತ್ತಜಯಂತಿಯ 2022ರ ಮುಜರಾಯಿ ಇಲಾಖೆ ನಿರ್ದೇಶನದಂತೆ ಎಂದು ಜಿಲ್ಲಾಡಳಿತ ಹೇಳಿದ್ದಕ್ಕೂ ಕಾಂಗ್ರೆಸ್ ಮುಖಂಡರು ಜಿಲ್ಲಾಡಳಿತ ವಿರುದ್ಧ ಕಿಡಿಕಾರಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು(ಡಿ.16): ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರುವ ದತ್ತಪೀಠದ ದತ್ತಜಯಂತಿಗೆ ಕ್ಷಣಗಣನೇ ಆರಂಭವಾಗಿದೆ. ದತ್ತಜಯಂತಿ ಆರಂಭಕ್ಕೂ ಮುನ್ನವೇ ವಿವಾದವೂ ಆರಂಭವಾಗಿದೆ.ಜಿಲ್ಲಾಡಳಿತದ ವಿರುದ್ಧ ಕಾಂಗ್ರೆಸ್ ಮುಖಂಡರು ಕಿಡಿ ಕಾರ್ತಿದ್ದಾರೆ. ಕಳೆದ ಬಾರಿಯ ಕಮ್ಯುನಲ್ ಸರ್ಕಾರ ಮಾಡಿದಂತೆಯೇ ಈ ಬಾರಿಯೂ ಪೂಜೆ ನಡೆದರೆ ಮತ್ತೊಂದು ವರ್ಗದ ಮನಸ್ಸಿಗೆ ನೋವಾಗಲಿದೆ. ಜಿಲ್ಲಾಧಿಕಾರಿ ಕಳೆದ ವರ್ಷ, ಮುಜರಾಯಿ ಇಲಾಖೆ ಆದೇಶ ಅನ್ನೋದಕ್ಕಿಂತ ಕೋರ್ಟ್ ಹೇಳಿದಂತೆ ಮಾಡಬೇಕು ಎಂದು ಎಚ್ಚರಿಸಿದ್ದಾರೆ.
ಕಾನೂನು ಉಲ್ಲಂಘನೆಯಾದ್ರೆ ಸಿಎಂಗೆ ದೂರು :
ದತ್ತ ಜಯಂತಿಯನ್ನ ನಾಡ ಉತ್ಸವದಂತೆ ಮಾಡ್ತೀವಿ ಅಂತ ಹಿಂದೂ ಸಂಘಟನೆಗಳು ಹೇಳಿದ್ದಕ್ಕೂ, ಈ ಬಾರಿಯ ದತ್ತಜಯಂತಿಯ 2022ರ ಮುಜರಾಯಿ ಇಲಾಖೆ ನಿರ್ದೇಶನದಂತೆ ಎಂದು ಜಿಲ್ಲಾಡಳಿತ ಹೇಳಿದ್ದಕ್ಕೂ ಕಾಂಗ್ರೆಸ್ ಮುಖಂಡರು ಜಿಲ್ಲಾಡಳಿತ ವಿರುದ್ಧ ಕಿಡಿಕಾರಿದ್ದಾರೆ. ಕಾಫಿನಾಡ ದತ್ತಜಯಂತಿಗೆ ಕ್ಷಣಗಣನೆ ಆರಂಭವಾಗಿದೆ. ಇದರ ಜೊತೆ ವಾದ-ವಿವಾದ ಕೂಡ ಆರಂಭವಾಗಿದೆ. ಇದು ರಾಜಕೀಯ ಪ್ರೇರಿತ ಉತ್ಸವ. ದತ್ತಜಯಂತಿ ಉತ್ಸವದ ಕುರಿತು ಡಿಸಿ-ಎಸ್ಪಿ ಮತೀಯ ಸಂಘಟನೆಗಳ ಜೊತೆ ಕೈಜೋಡಿಸಿದರೆ ಸಿದ್ದರಾಮಯ್ಯನವರಿಗೆ ದೂರು ನೀಡುತ್ತೇವೆ ಎಂದು ಕೈ ಮುಖಂಡರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ. ಕಳೆದ ಬಾರಿ ಇದ್ದದ್ದು ಮತೀಯ ಸರ್ಕಾರ. ಕೋರ್ಟ್ ಆದೇಶ, ಕಾನೂನು ಎಲ್ಲವನ್ನೂ ಉಲ್ಲಂಘನೆ ಮಾಡಿ, ಅವರಿಗೆ ಮನಸ್ಸಿಗೆ ಬಂದಂತೆ ಮಾಡಿಕೊಂಡಿದ್ದಾರೆ. ಹಿಂದೆ ಸದಾನಂದಗೌಡರನ್ನೇ ಬಂಧಿಸಿದ್ದಾರೆ. ಕಫ್ರ್ಯೂ ಹಾಕಿದ್ದಾರೆ. ಹಿಂದೆ ಕಟ್ಟುನುಟ್ಟಾಗಿ ನಡೆಯುತ್ತಿತ್ತು. ಅದು ಜಾರಿಗೆ ಬರಬೇಕು. ಮತೀಯ ಶಕ್ತಿಗಳು ಕುಣಿದಂತೆ ಕುಣಿಯಲು ಬಿಡಬಾರದು. ದತ್ತಪೀಠ ಬಜರಂಗದಳ, ವಿಎಚ್ಪಿ ಅವರ ಆಸ್ತಿಯ. ಈ ನಾಡಿನ ಸರ್ವಧರ್ಮಗಳ ಶ್ರದ್ಧಾಕೇಂದ್ರವದು. ಜಿಲ್ಲಾಡಳಿತ ಕೋರ್ಟ್ ಹೇಳಿದಂತೆ ದತ್ತಜಯಂತಿ ಮಾಡಬೇಕು ಎಂದು ಜಿಲ್ಲಾಡಳಿತಕ್ಕೆ ರಾಜ್ಯ ಕಾಂಗ್ರೆಸ್ ವಕ್ತಾರ ಹೆಚ್ ಹೆಚ್ ದೇವರಾಜ್ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರು: ಪಶ್ಚಿಮ ಘಟ್ಟ ಪ್ರವಾಸಿ ತಾಣಗಳಿಗೆ ನಿರ್ಬಂಧ, ಪ್ರವಾಸಿಗರಿಗೆ ನಿರಾಸೆ..!
ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠದ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡರು :
ಇನ್ನು ಮುಸ್ಲಿಂ ಸಮುದಾಯ ಕೂಡ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೋರ್ಟ್ ಆದೇಶವಿಲ್ಲದೆ ಅಲ್ಲಿದ್ದ ದತ್ತಪಾದುಕೆಗಳನ್ನ ಸ್ಥಳಾಂತರಿಸಿದ್ದಾರೆ. ದತ್ತಪೀಠ ಆಡಳಿತ ಸಂವರ್ದನಾ ಸಮಿತಿ ವಿರುದ್ಧ ಕ್ರಮಕೈಗೊಳ್ಳಿ ಅಂದರೆ ಆಗಲ್ಲ. ನಾವು ನಮ್ಮ ಉರುಸ್ ಸಂದರ್ಭದಲ್ಲಿ ಹಸಿರು ಬಟ್ಟೆ ಕೊಡಿ ಅಂತ ಕೇಳಿದ್ವಿ. ಆದ್ರೆ, ಅದು ಆಗಲ್ಲ. ಗುಹೆಯೊಳಗೆ ಕಾಣಿಕೆ ಡಬ್ಬವಿದ್ದು, ಕಾಣಿಕೆಯನ್ನ ಹುಂಡಿಯಲ್ಲಿ ಹಾಕಬೇಕು. ಆದರೆ, ಅರ್ಚಕರು ಹಣ ವಸೂಲಿ ಮಾಡುವ ವ್ಯವಹಾರ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಅದಕ್ಕೆ ಏನು ಮಾಡ್ತಿಲ್ಲ. ತುಳಸಿಕಟ್ಟೆ ಪಕ್ಕ ಹೋಮ ಮಾಡೋದಕ್ಕೆ ಅವಕಾಶ ಕೊಟ್ಟಿದ್ದಾರೆ. ಕೊಡಲಿ, ನಮಗೂ ಅದರ ಪಕ್ಕದಲ್ಲಿರುವ ಗೋರಿಗಳಿಗೆ ಪೂಜೆ ಮಾಡಲು ಅವಕಾಶ ನೀಡಲಿ. ಅದಕ್ಕೆ ಕೋರ್ಟ್ ಆದೇಶವಿಲ್ಲ ಅಂತಾರೆ. ಇದಕ್ಕೆ ಎಲ್ಲಿದೆ. ಜಿಲ್ಲಾಡಳಿತ ಒಂದು ಧರ್ಮದ ಪರ ಕೆಲಸ ಮಾಡ್ತಿರೋದು ತಪ್ಪು. ಹೋಮ ಮಾಡೋದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ನಮಗೂ ನಮಾಜ್ ಮಾಡಲು ಅನುಮತಿ ನೀಡಲಿ ಎಂದು ಪ್ರಶ್ನಿಸಿದ್ದಾರೆ. ಕಳೆದ ಬಾರಿ ಬಿಜೆಪಿ ಸರ್ಕಾರವಿತ್ತು.
ಈ ಬಾರಿ ನಮ್ಮ, ನಮ್ಮ ಪರವಾದ ಸರ್ಕಾರವಿದೆ. ಆದ್ರೆ, ಈ ಸರ್ಕಾರವೂ ನಮ್ಮ ವಿರೋಧವಾಗಿಯೇ ಹೋಗುತ್ತಿದೆ. ಈ ಬಾರಿ ನಮ್ಮ ಬೇಡಿಕೆ ಈಡೇರದಿದ್ದರೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸ್ತೀವಿ ಅಂತ ಎಚ್ಚರಿಕೆ ನೀಡಿದ್ದಾರೆ.