ಬೆಂಗಳೂರು [ಅ.06]:  ದಸರಾ ಹಾಗೂ ಸಾಲು ರಜೆಗಳ ಹಿನ್ನೆಲೆಯಲ್ಲಿ ಶನಿವಾರ ನಗರದಿಂದ ಭಾರೀ ಸಂಖ್ಯೆಯಲ್ಲಿ ವಿವಿಧ ಊರುಗಳಿಗೆ ತೆರಳಿದ್ದರಿಂದ ಮೆಜೆಸ್ಟಿಕ್‌ ಹಾಗೂ ಹೆದ್ದಾರಿಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿ, ಸವಾರರು ಪರದಾಡಿದರು. ಎಲ್ಲರೂ ತಮ್ಮ ಊರುಗಳಿಗೆ ತೆರಳಿದ ಕಾರಣ ಬೆಂಗಳೂರು ಸಂಪೂರ್ಣ ಖಾಲಿಯಾಗಿದೆ. 

ಶನಿವಾರ ಸಂಜೆ ವೇಳೆಗೆ ತಮ್ಮ ಕೆಲಸ ಮುಗಿಸಿ ನಗರದ ವಿವಿಧ ಸ್ಥಳಗಳಿಂದ ಸಾರ್ವಜನಿಕರು ತಂಡೋಪತಂಡವಾಗಿ ಮೈಸೂರು ರಸ್ತೆಯ ಸ್ಯಾಟಲೆಟ್‌ ಬಸ್‌ನಿಲ್ದಾಣ, ಶಾಂತಿನಗರದ ಬಿಎಂಟಿಸಿ ಬಸ್‌ನಿಲ್ದಾಣ, ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ನಿಲ್ದಾಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಗಳತ್ತ ಧಾವಿಸಿದ್ದರು. ಇದರಿಂದ ನಿಲ್ದಾಣಗಳು ಪ್ರಯಾಣಿಕರಿಂದ ಗಿಜಿಗುಟ್ಟಿತು.

ಸಾಲು ರಜೆಗಳ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯು ನಗರದ ಪ್ರಮುಖ ಬಸ್‌ನಿಲ್ದಾಣಗಳಿಂದ ರಾಜ್ಯ ಹಾಗೂ ಹೊರರಾಜ್ಯಗಳಿಗೆ ಹೆಚ್ಚುವರಿ ಬಸ್‌ ಕಾರ್ಯಾಚರಣೆ ಮಾಡಿತ್ತು. ಜತೆಗೆ ಸ್ವಂತ ವಾಹನಗಳು ಹಾಗೂ ಖಾಸಗಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಿದ ಪರಿಣಾಮ ಮೈಸೂರು ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಹೊಸೂರು ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು.

ತುಮಕೂರು ಹೆದ್ದಾರಿಯ ನೆಲಮಂಗಲ ನವಯುಗ ಟೋಲ್‌ ಗೇಟ್‌, ಏರ್‌ಪೋರ್ಟ್‌ ರಸ್ತೆಯ ಟೋಲ್‌ ಗೇಟ್‌ಗಳಲ್ಲಿ ವಾಹನ ದಟ್ಟಣೆಯಿಂದ ಪ್ರಯಾಣಿಕರು ಪಡಿಪಾಟಲು ಪಟ್ಟರು. ವಾಹನಗಳು ರಸ್ತೆಗಳಲ್ಲಿ ಒಂದಕೊಂದು ಅಂಟಿಕೊಂಡಂತೆ ಕಿಕ್ಕಿರಿದು ನಿಂತಿದ್ದರಿಂದ ಟೋಲ್‌ ಗೇಟ್‌ಗಳಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿದವು. ಹಾಗಾಗಿ ಹೆದ್ದಾರಿಗಳಲ್ಲಿ ವಾಹನಗಳು ಒಂದೆರಡು ಕಿ.ಮೀ. ಉದ್ದ ಸಾಲುಗಟ್ಟಿನಿಂತವು. ಪೊಲೀಸರು ಈ ಸಂಚಾರ ನಿಯಂತ್ರಿಸಲು ಹರಸಾಹಸಪಟ್ಟರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಟ್ರಾಫಿಕ್‌ ಜಾಮ್‌ ಬಿಸಿ:  ನಗರದ ಕೇಂದ್ರ ಭಾಗ ಮೆಜೆಸ್ಟಿಕ್‌ನ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಸಾರ್ವಜನಿಕರು ಬಸ್‌, ರೈಲು ಹಿಡಿಯಲು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ದಟ್ಟಣೆ ಉಂಟಾಯಿತು. ಇನ್ನು ಖಾಸಗಿ ಬಸ್‌ಗಳನ್ನು ಮೆಜೆಸ್ಟಿಕ್‌ನ ರಸ್ತೆಗಳಲ್ಲೇ ನಿಲ್ಲಿಸಿಕೊಂಡು ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದೂ ಸಂಚಾರ ದಟ್ಟಣೆಗೆ ಕಾರಣವಾಯಿತು. ಸಾರ್ವಜನಿಕರು ನಗರದ ವಿವಿಧೆಡೆಯಿಂದ ಆಟೋ, ಟ್ಯಾಕ್ಸಿಗಳಲ್ಲಿ ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಬಳಿಗೆ ಬಂದಿದ್ದರಿಂದ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಯಿತು. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಂಚಾರ ನಿಯಂತ್ರಣ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು ಸಂಚಾರ ನಿಯಂತ್ರಿಸಲು ಹೈರಾಣಾದರು.