ಬಳ್ಳಾರಿ: ಕಾಲುವೆ ಬಳಿ ಶ್ರೀರಾಮುಲು ವಾಸ್ತವ್ಯ ಮುಂದುವರಿಕೆ
ಬುಧವಾರ ರಾತ್ರಿಯೂ ಸ್ಥಳದಲ್ಲಿಯೇ ಮೊಕ್ಕಾಂ, ನಾನಿದ್ದರೆ ಕಾಮಗಾರಿ ಬೇಗನೇ ಪೂರ್ಣಗೊಳ್ಳಲಿದೆ: ಸಚಿವ ಬಿ.ಶ್ರೀರಾಮುಲು
ಬಳ್ಳಾರಿ(ನ.03): ತಾಲೂಕಿನ ಭೈರದೇವನಹಳ್ಳಿ ಬಳಿಯ ವೇದಾವತಿ ನದಿ (ಹಗರಿ) ಸೇತುವೆಯ ಎಲ್‌ಎಲ್‌ಸಿ ಕಾಲುವೆಯ ಪಿಲ್ಲರ್‌ಗಳ ದುರಸ್ತಿ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ, ರೈತರಿಗೆ ನೀರು ಹರಿಸಬೇಕು ಎಂದು ಪಟ್ಟು ಹಿಡಿದು ಮಂಗಳವಾರ ಮಧ್ಯಾಹ್ನದಿಂದ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿರುವ ಜಿಲ್ಲಾ ಉಸ್ತುವಾರಿ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು, ಬುಧವಾರವೂ ಸ್ಥಳದಲ್ಲಿಯೇ ಉಳಿದು ಕಾಮಗಾರಿ ವೀಕ್ಷಿಸಿದರು.
ಪಕ್ಷದ ಮುಖಂಡರೊಂದಿಗೆ ಮಂಗಳವಾರ ಕಾಲುವೆ ದುರಸ್ತಿ ನಡೆಯುವ ಜಾಗಕ್ಕೆ ತೆರಳಿದ್ದ ಸಚಿವರು, ಅಲ್ಲಿಯೇ ರಾತ್ರಿ ವಾಸ್ತವ್ಯ ಹೂಡಿದ್ದರು. ಬುಧವಾರ ಬೆಳಗ್ಗೆ ಅಲ್ಲಿಯೇ ಎಂದಿನಂತೆ ವಾಕಿಂಗ್ ಮುಗಿಸಿ, ಸ್ನಾನ ಪೂಜೆಗಳನ್ನು ಪೂರ್ಣಗೊಳಿಸಿದರು. ಪಕ್ಷದ ಕಾರ್ಯಕರ್ತರು ತಂದಿದ್ದ ಉಪಹಾರ ಸೇವಿಸಿದರು. ಮಧ್ಯಾಹ್ನ ಹಾಗೂ ಸಂಜೆ ಕೂಡ ಅಲ್ಲಿಯೇ ಊಟ ಮಾಡಿದರು. ತುಂಗಭದ್ರಾ ಬೋರ್ಡ್ ಅಧಿಕಾರಿಗಳ ಪ್ರಕಾರ ಬುಧವಾರ ಮಧ್ಯರಾತ್ರಿವರೆಗೆ ಕಾಮಗಾರಿ ನಡೆಯಲಿದ್ದು, ಬಳಿಕ ಕಾಲುವೆಗೆ ನೀರು ಹರಿಸಲಿದ್ದಾರೆ. ಹೀಗಾಗಿ, ಬುಧವಾರ ಮಧ್ಯರಾತ್ರಿವರೆಗೆ ಸ್ಥಳದಲ್ಲಿಯೇ ಇದ್ದು, ಬಳಿಕ ಸಚಿವರು ಬಳ್ಳಾರಿಗೆ ಬರುವ ಸಾಧ್ಯತೆ ಇದೆ.
ಬಳ್ಳಾರಿ: ಎಲ್‌ಎಲ್‌ಸಿಗೆ ನೀರು ಹರಿಸುವವರೆಗೆ ಸ್ಥಳದಿಂದ ಕದಲುವುದಿಲ್ಲ, ಸಚಿವ ಶ್ರೀರಾಮುಲು
ನೀರು ಹರಿಸದಿದ್ದಲ್ಲಿ 3 ಲಕ್ಷ ಹೆಕ್ಟೇರ್ ಬೆಳೆ ಹಾನಿ:
ಇದೇ ವೇಳೆ, ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಇನ್ನು ಮೂರು ದಿನಗಳೊಳಗೆ ಕಾಲುವೆಗೆ ನೀರು ಹರಿಸದಿದ್ದರೆ ಕರ್ನಾಟಕ ಮತ್ತು ಆಂಧ್ರ ವ್ಯಾಪ್ತಿಯ ಸುಮಾರು 3 ಲಕ್ಷ ಹೆಕ್ಟೇರ್ ವ್ಯಾಪ್ತಿಯಲ್ಲಿನ ಬೆಳೆಗಳು ಒಣಗಿ ಹೋಗಲಿವೆ. ಹೀಗಾಗಿ, ಇಲ್ಲಿಯೇ ವಾಸ್ತವ್ಯ ಹೂಡಿ ಸೇತುವೆಯ ಪಿಲ್ಲರ್ ದುರಸ್ತಿ ಕಾಮಗಾರಿ ವೀಕ್ಷಿಸಿ, ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದ್ದೇನೆ. ಇದರಲ್ಲಿ ಬೇರೆ ಯಾವುದೇ ಉದ್ದೇಶ ಅಥವಾ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.