ಕೊರೋನಾ ಸೋಂಕಿಗಾಗಿ ಕಂಟೈನ್ಮೆಂಟ್ ಪ್ರದೇಶ ಮಾಡುವಂತ ರೂಲ್ಸ್ ಗಳನ್ನು ಬದಲುಮಾಡಲಾಗಿದೆ. ಏನದು ಬದಲಾವಣೆ ..?
ಬೆಂಗಳೂರು (ಆ.18): ಕಂಟೈನ್ಮೆಂಟ್ ವಿಚಾರದಲ್ಲಿ ವ್ಯಾಪಕ ಭ್ರಷ್ಟಾಚಾರ ಹಾಗೂ ಕಂಟೈನ್ಮೆಂಟ್‌ನಿಂದ ಸೋಂಕಿತರಿಗೆ, ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂಬ ಕಾರಣಕ್ಕೆ ಕಂಟೈನ್ಮೆಂಟ್ ಪದ್ಧತಿ ಬದಲಿಸಿರುವ ಬಿಬಿಎಂಪಿ ಮೂರು ಹಾಗೂ ಮೂರಕ್ಕಿಂತ ಹೆಚ್ಚು ಪ್ರಕರಣ ಪತ್ತೆಯಾದ ಪ್ರದೇಶ ಅಥವಾ ಮನೆಯ ನೂರು ಮೀಟರ್ ಪ್ರದೇಶವನ್ನು ಕಂಟೈನ್ಮೆಂಟ್ ಮಾಡುವ ತೀರ್ಮಾನ ಮಾಡಿದೆ.
ನಗರದಲ್ಲಿ ಸೋಂಕಿತರ ಮನೆ ಹಾಗೂ ನೂರು ಮೀಟರ್ ಪ್ರದೇಶ ಕಂಟೈನ್ಮೆಂಟ್ ಮಾಡಲು ದಿನಕ್ಕೆ 69 ಸಾವಿರ ರು. ಬಾಡಿಗೆ ಹಾಗೂ 14 ದಿನಕ್ಕೆ 7 ಲಕ್ಷ ರು. ಬಾಡಿಗೆ ಪಾವತಿ ಮಾಡಲಾಗುತ್ತಿರುವುದರ ಕುರಿತು ‘ಕನ್ನಡಪ್ರಭ’ ಭಾನುವಾರ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಬಿಬಿಎಂಪಿಯ ಎಲ್ಲ ವಲಯದ ಎಂಜಿನಿಯರ್‌ಗಳೊಂದಿಗೆ ಸೋಮವಾರ ಸಭೆ ನಡೆಸಿದರು. ಸಭೆಯಲ್ಲಿ ಕಂಟೈನ್ಮೆಂಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಹಾಗೂ ದುಬಾರಿ ಬಾಡಿಗೆ ಮೊತ್ತ ನಿಗದಿ ಪಡಿಸಿದ ಬಿಲ್‌ಗಳನ್ನು ಹಣ ಬಿಡುಗಡೆ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಎಲ್ಲರಿಗೂ ಆಘಾತ.. ಆಡಳಿತಾರೂಢ ಪಕ್ಷದ ಶಾಸಕ ಕೊರೋನಾಕ್ಕೆ ಬಲಿ.
ಜೊತೆಗೆ ಇನ್ನು ಮುಂದೆ ಮೂರು ಮತ್ತು ಅದಕ್ಕಿಂತ ಹೆಚ್ಚಿನ ಕೊರೋನಾ ಸೋಂಕು ಪ್ರಕರಣ ಪತ್ತೆಯಾದರೆ ಮಾತ್ರ ಕಂಟೈನ್ಮೆಂಟ್ ಮಾಡಬೇಕು. ಒಂದು ಅಥವಾ ಎರಡು ಕೊರೋನಾ ಸೋಂಕು ಪ್ರಕರಣ ಪತ್ತೆಯಾದರೆ ತಗಡು, ಬ್ಯಾರಿಕೇಟ್ ಹಾಗೂ ಮರದ ಕಂಬಗಳನ್ನು ನಿಲ್ಲಿಸಿ ಕಂಟೈನ್ಮೆಂಟ್ ಮಾಡುವ ಪದ್ಧತಿ ಕೈ ಬಿಟ್ಟು ಕೇವಲ ಕಂಟೈನ್ಮೆಂಟ್ ಮನೆ ಎಂಬ ಭಿತ್ತಿಪತ್ರ ಅಂಟಿಸುವಂತೆ ಸೂಚಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ ಪ್ರಸಾದ್, ಕೊರೋನಾ ಸೋಂಕು ಪತ್ತೆಯಾದರೆ ಕಂಟೈನ್ಮೆಂಟ್ ಮಾಡುವ ಪದ್ಧತಿಯನ್ನು ಬದಲಾವಣೆ ಮಾಡುವ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, 580 ಸ್ಥಳೀಯ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
.25 ಕೋಟಿ ವೆಚ್ಚ !
ರಾಜರಾಜೇಶ್ವರಿ ವಲಯದಲ್ಲಿ ಕಳೆದ ಎರಡುವರೆ ತಿಂಗಳಲ್ಲಿ (ಜೂನ್, ಜುಲೈ ಹಾಗೂ ಆಗಸ್ಟ್) ಅಂದಾಜು 1.50 ಕೋಟಿ ರು. ಕಂಟೈನ್ಮೆಂಟ್ ನಿರ್ಮಾಣಕ್ಕೆ ವೆಚ್ಚ ಮಾಡಲಾಗಿದೆ. ಪ್ರತಿ ವಲಯದಲ್ಲೂ 1.5 ರಿಂದ 2 ಕೋಟಿ ರು. ವೆಚ್ಚವಾಗಿದೆ. ಎಂಟು ವಲಯಗಳಲ್ಲಿಯೂ ಅಂದಾಜು 20 ರಿಂದ 25 ಕೋಟಿ ರು. ವೆಚ್ಚವಾಗಿರುವ ಸಾಧ್ಯತೆ ಇದೆ ಎಂದು ಆಯುಕ್ತರು ಸ್ಪಷ್ಟಪಡಿಸಿದರು.
ಬಿಬಿಎಂಪಿ ವ್ಯಾಪ್ತಿಯ ಕೆಲವು ಸಹಾಯಕ ಎಂಜಿನಿಯರ್‌ಗಳು ಕಂಟೈನ್ಮೆಂಟ್ ಮಾಡುವುದಕ್ಕೆ ಬೇಕಾದ ಶೀಟ್ ಹಾಗೂ ಮರದ ಕಂಬಗಳನ್ನು ಸರ್ಕಾರಿ ದರ (ಎಸ್‌ಆರ್ ದರ)ದಲ್ಲಿ ಖರೀದಿಸಿ, ಅದನ್ನೇ ಒಂದು ಸ್ಥಳದಿಂದ ಮತ್ತೊಂದು ಸ್ಥಳದಲ್ಲಿ ಪುರ್ನರ್ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಒಟ್ಟಾರೆ ಕಂಟೈನ್ಮೆಂಟ್ ಪದ್ಧತಿ ಜಾರಿಯಾದಾಗಿನಿಂದ ಯಾವ ರೀತಿ ಕೊಟೇಷನ್ ಕೊಡಲಾಗಿದೆ. ಇದಕ್ಕಾಗಿ ಎಷ್ಟುವೆಚ್ಚ ಮಾಡಲಾಗಿದೆ ಎಂಬ ಸಂಪೂರ್ಣ ವಿವರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು
